ಯಾದಗಿರಿ: ಅಭಿವೃದ್ಧಿಯಲ್ಲಿ ಹಿಂದುಳಿದು ಗುಳೆ ಅನ್ನೋ ಶಾಪಕ್ಕೆ ಬೆಂದಿರೋ ಜಿಲ್ಲೆ ಯಾದಗಿರಿ. ಗುಳೆಯಿಂದಾಗಿ ಇಲ್ಲಿನ ಶಾಲೆಗಳಿಗೆ ಮಕ್ಕಳು ಬರೋದೇ ಕಡಿಮೆ. ಆದರೆ ಹುಣಸಗಿ ತಾಲೂಕಿನ ಜುಮಾಲಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಕಲರವ ಹೆಚ್ಚಾಗಿದೆ. ಇದಕ್ಕೆ ಕಾರಣವಾಗಿರುವ ಅಲ್ಲಿನ ಸಿಬ್ಬಂದಿ ಇದೀಗ ಪಬ್ಲಿಕ್ ಹೀರೋ ಆಗಿದ್ದಾರೆ.
ಅಭಿವೃದ್ಧಿಯಲ್ಲಿ ಮಾತ್ರವಲ್ಲದೆ ಶಿಕ್ಷಣದಲ್ಲಿ ಅತೀ ಹಿಂದುಳಿದ ಜಿಲ್ಲೆ ಯಾದಗಿರಿ. ಈ ಜಿಲ್ಲೆಯಲ್ಲಿ ಎರಡು ನದಿಗಳು ಇದ್ದರೂ ಪ್ರಯೋಜನವಿಲ್ಲ. ಹೀಗಾಗಿ ಜಿಲ್ಲೆಯ ಬಹುತೇಕ ಗ್ರಾಮಗಳ ಜನ ದೊಡ್ಡ- ದೊಡ್ಡ ಊರುಗಳಿಗೆ ಗುಳೆ ಹೋಗುತ್ತಾರೆ. ತಂದೆ-ತಾಯಂದಿರು ತಮ್ಮ ಜೊತೆಗೆ ಮಕ್ಕಳನ್ನು ಸಹ ಕರೆದುಕೊಂಡು ಹೋಗುತ್ತಿರುವುದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದರ ಜೊತೆಗೆ ಜಿಲ್ಲಾ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಪಾತಾಳಕ್ಕಿಳಿದಿದೆ.
ಆದರೆ ಜಿಲ್ಲೆಯ ಹುಣಸಗಿ ತಾಲೂಕಿನ ಜುಮಲಾಪುರ ದೊಡ್ಡ ತಾಂಡದ ಸರ್ಕಾರಿ ಶಾಲೆಯಲ್ಲಿ ಮಾತ್ರ ಮಕ್ಕಳ ದಾಖಲಾತಿ ಪ್ರಮಾಣದಲ್ಲಿ ದಾಖಲೆ ಮಾಡಿದ್ದು ಮಾತ್ರವಲ್ಲದೆ, ಖಾಸಗಿ ಶಾಲೆಗೆ ಸೆಡ್ಡು ಹೊಡೆದು ಜಿಲ್ಲೆಯಲ್ಲಿ ಅತ್ಯುತ್ತಮ ಶಾಲೆ ಎನಿಸಿಕೊಂಡಿದೆ. ತಾಂಡದಲ್ಲಿದ್ದರೂ ಶಾಲೆ ಈ ಮಟ್ಟದ ಸಾಧನೆ ಮಾಡಲು ಕಾರಣ ಇಲ್ಲಿನ ಶಾಲಾ ಸಿಬ್ಬಂದಿಯ ಒಂದು ವಿಭಿನ್ನ ಆಲೋಚನೆ ಮತ್ತು ಮುಖ್ಯೋಪಾಧ್ಯಾಯ ಅಚ್ಚಪ್ಪಗೌಡರ ಶ್ರಮ. ಹೀಗಾಗಿ ಶಿಕ್ಷಣ ವಂಚಿತ ನೂರಾರು ಮಕ್ಕಳು ಇಂದು ಉನ್ನತ ಶಿಕ್ಷಣ ಪಡೆಯುವಂತಾಗಿದೆ.
ಇಲ್ಲಿನ ಸಿಬ್ಬಂದಿ ತಮ್ಮಲ್ಲಿರುವ ಮೂಲಭೂತ ಸೌಕರ್ಯಗಳನ್ನು ಬಳಸಿಕೊಂಡು ಶಾಲೆಯಲ್ಲಿಯೇ ಮಕ್ಕಳಿಗೆ ವಸತಿಯನ್ನು ಕಲ್ಪಿಸಿದ್ದಾರೆ. ಅಂದರೆ ಗುಳೆ ಹೋಗುತ್ತಿದ್ದ ಪಾಲಕರ ಮನವೊಲಿಸಿ, ಅವರ ಮಕ್ಕಳನ್ನು ಶಾಲೆ ಕರೆತಂದು ಆ ಮಕ್ಕಳಿಗೆ ಶಾಲಾ ಕಟ್ಟಡದಲ್ಲಿಯೇ ವಸತಿ, ರಾತ್ರಿ ಊಟ, ಸ್ನಾನಗೃಹವನ್ನು ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಿಸಿ ಶಿಕ್ಷಣ ವಂಚಿತ ನೂರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ.
ಇಂತಹ ವಿಭಿನ್ನ ಆಲೋಚನೆಯಿಂದ ಜುಮಲಾಪುರ ದೊಡ್ಡ ತಾಂಡದ ಈ ಶಾಲೆ, ಜಿಲ್ಲೆಯಲ್ಲಿನ ಸರಕಾರಿ ಪ್ರಾಥಮಿಕ ಶಾಲೆಗಳ ದಾಖಲಾತಿಯಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ. ಸರಕಾರಿ ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡುವುದೇ ದೊಡ್ಡ ಮಾತಾಗಿರುವ, ತಮ್ಮ ವೃತ್ತಿ ಧರ್ಮವನ್ನು ಸಾರುತ್ತಿರುವ ಈ ಶಿಕ್ಷಕರ ಕಾರ್ಯ ಪ್ರತಿಯೊಬ್ಬರು ಮೆಚ್ಚುವಂತದ್ದಾಗಿದೆ.