ಪಿಎಸ್‍ಐ ಅಕ್ರಮ- ಮತ್ತೆ 8 ಅಭ್ಯರ್ಥಿಗಳು ಅರೆಸ್ಟ್; ಹಲವರು ಸರ್ಕಾರಿ ನೌಕರರು

Public TV
3 Min Read

ಕಲಬುರಗಿ: ಪಿಎಸ್‍ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು ಅಕ್ರಮವಾಗಿ ಪಾಸಾದ 8 ಅಭ್ಯರ್ಥಿಗಳನ್ನು ಬಂಧಿಸಿದ್ದಾರೆ.

ರವಿರಾಜ್, ಪೀರಪ್ಪ, ಶ್ರೀಶೈಲ್, ಭಗವಂತ, ಸಿದ್ದು ಪಾಟೀಲ್, ಸೋಮನಾಥ, ಕಲ್ಲಪ್ಪ, ವಿಜಯಕುಮಾರ್ ಎನ್ನುವವರೇ ಅಕ್ರಮದ ಮೂಲಕ ಪಿಎಸ್‍ಐ ಪರೀಕ್ಷೆಯಲ್ಲಿ ಅಕ್ರಮವಾಗಿ ಪಾಸಾದ ಬಂಧಿತ ಅಭ್ಯರ್ಥಿಗಳು.

ಬಂಧಿತರಲ್ಲಿ ಹಲವರು ಸರ್ಕಾರಿ ನೌಕರರು: ಬಂಧಿತರ ಪೈಕಿ ಹಲವರು ಈಗಾಗಲೇ ಸರ್ಕಾರಿ ಹುದ್ದೆಯಲ್ಲಿ ಇದ್ದಾರೆ. ಅದಾಗಿಯೂ ಪಿಎಸ್‍ಐ ಆಗುವ ಹವಣಿಕೆಯಿಂದ ಅಕ್ರಮದ ಹಾದಿ ತುಳಿದಿದ್ದಕ್ಕಾಗಿ ಇದೀಗ ಜೈಲು ಪಾಲಾಗಿದ್ದಾರೆ. ಬಂಧಿತ ಆರೋಪಿ ಸಿದ್ದು ಪಾಟೀಲ್, ಈಗಾಗಲೇ ಎಫ್‍ಡಿಎ ಆಗಿ ಸರ್ಕಾರಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಇನ್ನೂ ಬಂಧಿತ ಕಲ್ಲಪ್ಪ ಪೊಲೀಸ್ ಪೇದೆಯಾಗಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಪೀರಪ್ಪ ಎನ್ನುವ ಇನ್ನೊಬ್ಬ ಬಂಧಿತ ಆರೋಪಿ ಹಾಸ್ಟೆಲ್‍ನಲ್ಲಿ ಕುಕ್ ಆಗಿ ಕೆಲಸ ಮಾಡುವವನು.

ಇವರೆಲ್ಲಾ ಬ್ಲೂಟೂತ್ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಅಕ್ರಮವಾಗಿ ಪಿಎಸ್‍ಐ ಪರೀಕ್ಷೆ ಬರೆದವರು. ಈ 8 ಜನ ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ ಕೋಟಾದಲ್ಲಿ ಆಯ್ಕೆಯಾಗಿದ್ದರು. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 8 ಅಭ್ಯರ್ಥಿಗಳ ಹೆಸರು ಇತ್ತು.

ಎಸ್.ಬಿ.ಆರ್ ಪರೀಕ್ಷಾ ಕೇಂದ್ರದಲ್ಲೂ ಅಕ್ರಮ: ಕಲಬುರಗಿ ನಗರದ ಪ್ರತಿಷ್ಠಿತ ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಎಸ್‍ಬಿಆರ್ ಪರೀಕ್ಷಾ ಕೇಂದ್ರದಲ್ಲೂ ಅಕ್ರಮ ನಡೆದಿರುವುದು ಈ ಮೂಲಕ ಬಯಲಾಗಿದೆ. ಬಂಧಿತ 8 ಜನರು ಕಲಬುರಗಿಯ ಎಸ್‍ಬಿಆರ್ ಮತ್ತು ಸರ್ಕಾರಿ ಪದವಿ ಕಾಲೇಜಿನಲ್ಲಿ ಪರೀಕ್ಷೆ ಬರೆದವರಾಗಿದ್ದಾರೆ.

ಪಿಎಸ್‍ಐ ಪರೀಕ್ಷೆ ಅಕ್ರಮ ಮಾಡಿ ಸಿಕ್ಕಿ ಬಿದ್ದಿರುವ 8 ಜನ ಅಭ್ಯರ್ಥಿಗಳು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕು ಮತ್ತು ಅಫಜಲಪೂರ ತಾಲೂಕಿನ ನಿವಾಸಿಗಳಾಗಿದ್ದಾರೆ. ಅಫಜಲಪೂರ ತಾಲೂಕಿನ ಮಲ್ಲಾಬಾದ್ ಗ್ರಾಮದ ರವಿರಾಜ್ ಅಖಂಡೆ, ಶಿದ್ನಾಳ್ ಗ್ರಾಮದ ಬೀರಪ್ಪ, ಜೇವರ್ಗಿ ತಾಲೂಕಿನ ಕೋಣಸಿರಸಗಿ ಗ್ರಾಮದ ಶ್ರೀಶೈಲ್, ಜೇರಟಗಿ ಗ್ರಾಮದ ಭಗವಂತರಾಯ ಯಾತನೂರ್, ಜೇವರ್ಗಿ ತಾಲೂಕಿನ ಬದನಿಹಾಳ ಗ್ರಾಮದ ಸೋಮನಾಥ್, ಅಫ್ಜಲ್ ಪುರ ತಾಲೂಕಿನ ಕರ್ಜಗಿ ರೋಡ್ ರಾಮನಗರದ ಕಲ್ಲಪ್ಪ ಅಲ್ಲಾಪುರ್, ಜೇವರ್ಗಿ ತಾಲೂಕಿನ ಗುಡೂರ್ ಎಸ್ ಗ್ರಾಮದ ವಿಜಯಕುಮಾರ್ ಎನ್ನುವವರೇ ಬಂಧಿತ ಆರೋಪಿಗಳು.

psi scam

ಆರ್.ಡಿ ಪಾಟೀಲ್ ಕ್ಯಾಂಡಿಡೇಟ್ಸ್: ಈ ಎಲ್ಲಾ 8 ಜನರನ್ನು ಅಕ್ರಮವಾಗಿ ಪಿಎಸ್‍ಐ ಮಾಡಲು ಆಸೆ ತೋರಿಸಿದ್ದೆ ಕಿಂಗ್ ಪಿನ್ ಆರ್ ಡಿ ಪಾಟೀಲ್. ಈ ಎಲ್ಲಾ ಎಂಟು ಜನ ಅಭ್ಯರ್ಥಿಗಳು ಆರ್ ಡಿ ಪಾಟೀಲ್ ಜೊತೆ ಡೀಲ್ ಮಾಡಿಕೊಂಡವರು ಎನ್ನುವುದು ಗೊತ್ತಾಗಿದೆ. ಪ್ರಕರಣದ ಪ್ರಮುಖ ಕಿಂಗ್ ಪಿನ್ ಆರ್ ಡಿ ಪಾಟೀಲ್, ಈ ಎಲ್ಲಾ ಅಭ್ಯರ್ಥಿಗಳ ಜೊತೆ ಹಣಕಾಸಿನ ಡೀಲ್ ಮಾಡಿಕೊಂಡಿದ್ದಲ್ಲದೇ ಎಲ್ಲರಿಗೂ ಬ್ಲ್ಯೂಟೂತ್ ಡಿವೈಸ್ ಸಪ್ಲೈ ಮಾಡಿದ್ದ. ಇದನ್ನೂ ಓದಿ: ಇಡಿ, ಸಿಬಿಐಯವರು ಬರ್ತಾರೆ ಅಂತ ನಿದ್ದೆ ಬರ್ತಿಲ್ಲ, ಟೆನ್ಶನ್ ಹೆಚ್ಚಾಗಿದೆ: ಕೆಜಿಎಫ್ ಬಾಬು

ಬಂಧಿತರ ಸಂಖ್ಯೆ 52 ಕ್ಕೆ ಏರಿಕೆ: ಪಿಎಸ್‍ಐ ನೇಮಕಾತಿಯ ಅಕ್ರಮ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ, ಬಗೆದಷ್ಟು ಬಯಲಾಗುತ್ತಲೇ ಇದೆ. ಈಗಾಗಲೇ ಈ ಪ್ರಕರಣದಲ್ಲಿ ಸಿಐಡಿ 44 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. ಈಗ ಒಮ್ಮೆಲೆ 8 ಜನ ಅಭ್ಯರ್ಥಿಗಳ ಬಂಧನದ ಮೂಲಕ ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಇದುವರೆಗೆ ಬಂಧಿತರ ಸಂಖ್ಯೆ 52ಕ್ಕೆ ಏರಿಕೆಯಾದಂತಾಗಿದೆ.

ಜ್ಞಾನ ಜ್ಯೋತಿ ಪರೀಕ್ಷಾ ಕೇಂದ್ರ, ಎಂಎಸ್ ಇರಾನಿ ಪರೀಕ್ಷಾ ಕೇಂದ್ರಕ್ಕೆ ಸೀಮಿತವಾಗಿದ್ದ ಪಿಎಸ್‍ಐ ನೇಮಕಾತಿ ಅಕ್ರಮ, ಇದೀಗ ಎಸ್‍ಬಿಆರ್ ಮತ್ತು ಸರ್ಕಾರಿ ಪದವಿ ಕಾಲೇಜುಗೂ ವ್ಯಾಪಿಸಿದ್ದು, ಇದು ಇನ್ನಷ್ಟು ಪರೀಕ್ಷಾ ಕೇಂದ್ರಗಳಿಗೆ ವಿಸ್ತರಿಸುವ ಸಾಧ್ಯತೆ ಹೆಚ್ಚಳವಾಗಿದೆ. ಇದನ್ನೂ ಓದಿ: ಲಿಂಪಿ ವೈರಸ್‌ಗೆ 5 ಸಾವಿರಕ್ಕೂ ಅಧಿಕ ಹಸುಗಳ ಮಾರಣ ಹೋಮ – ಹೆದರಿ ವಲಸೆ ಹಾದಿ ಹಿಡಿದ ಜನ

ಎಸ್‍ಬಿಆರ್ ಮತ್ತು ಸರ್ಕಾರಿ ಪದವಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ನಡೆದ ಅಕ್ರಮ ಬಯಲಾಗಿರುವ ಹಿನ್ನೆಲೆಯಲ್ಲಿ ಈ ಅಕ್ರಮಕ್ಕೆ ಸಾಥ್ ನೀಡಿರುವ ಇನ್ನಷ್ಟು ಜನ ಪೊಲೀಸ್ ಅಧಿಕಾರಿಗಳು, ಪರೀಕ್ಷಾ ಮೇಲ್ವಿಚಾರಕರು ಹಾಗೂ ಬೇರೆ ಬೇರೆ ರೀತಿಯಲ್ಲಿ ಸಹಕಾರ ನೀಡಿರುವವರೂ ಬಂಧನಕ್ಕೊಳಗಾಗುವ ಆತಂತ ಎದುರಿಸುತ್ತಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *