ಭಾರತದಲ್ಲಿ ಇಸ್ಲಾಮಿಕ್‌ ಆಡಳಿತ ಸ್ಥಾಪನೆಗೆ ಯುವಕರು ಉಗ್ರ ಸಂಘಟನೆ ಸೇರಲು PFIನಿಂದ ಪ್ರೋತ್ಸಾಹ – NIA

Public TV
1 Min Read

ನವದೆಹಲಿ: ಭಾರತದಲ್ಲಿ ಇಸ್ಲಾಮಿಕ್‌ ಆಡಳಿತ (Islamic Rule) ತರಲು ದುರ್ಬಲ ವರ್ಗಗಳ ಯುವಕರು ಎಲ್‌ಇಟಿ, ಐಸಿಸ್‌, ಅಲ್‌ ಖೈದಾದಂತಹ ಉಗ್ರ ಸಂಘಟನೆಗಳನ್ನು ಸೇರಲು ಪಿಎಫ್‌ಐ ಪ್ರೋತ್ಸಾಹಿಸುತ್ತಿದೆ ಎಂದು ಎನ್‌ಐಎ ಮಾಹಿತಿ ಬಹಿರಂಗಪಡಿಸಿದೆ.

ಕೇರಳದ ವಿಶೇಷ ನ್ಯಾಯಾಲಯಕ್ಕೆ ಎನ್‌ಐಎ ರಿಮಾಂಡ್ ಪ್ರತಿಯನ್ನು ಸಲ್ಲಿಸಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI)ದ ಕೇರಳದಲ್ಲಿರುವ ಪದಾಧಿಕಾರಿಗಳು, ಸದಸ್ಯರು ಮತ್ತು ಅಂಗಸಂಸ್ಥೆಗಳು ಲಷ್ಕರ್-ಎ-ತೈಬಾ (LET), ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ISIS) ಅಥವಾ ದಾಯೆಶ್ ಮತ್ತು ಅಲ್ ಖೈದಾದಂತಹ ಭಯೋತ್ಪಾದಕ ಸಂಘಟನೆಗಳಿಗೆ ಸೇರಲು ದುರ್ಬಲ ವರ್ಗದ ಯುವಕರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಭಯೋತ್ಪಾದಕ ಕೃತ್ಯ ಎಸಗುವ ಮೂಲಕ ಭಾರತದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸಲು ಸಂಚು ರೂಪಿಸಲಾಗಿದೆ ಎಂದು ಅದರಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಕರಾಟೆ ಕ್ಲಾಸ್‌ನಲ್ಲಿ ನಡೀತಿತ್ತು PFI ಉಗ್ರ ಚಟುವಟಿಕೆಯ ರಣತಂತ್ರ – NIA ದಾಳಿಗೂ ಅದೇ ಕಾರಣ

ಕೇರಳದಿಂದ ಕಾರ್ಯನಿರ್ವಹಿಸುತ್ತಿರುವ ಪಿಎಫ್‌ಐ ಸದಸ್ಯರು, ಕಾರ್ಯಕರ್ತರು ವಿವಿಧ ಧರ್ಮಗಳು ಮತ್ತು ಗುಂಪುಗಳ ಜನರ ನಡುವೆ ದ್ವೇಷವನ್ನು ಸೃಷ್ಟಿಸುವ ಮೂಲಕ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಂಚು ರೂಪಿಸುತ್ತಿದ್ದಾರೆ. ಸಾವರ್ಜನಿಕರ ನೆಮ್ಮದಿಗೆ ಭಂಗ ತರುವ, ಭಾರತದ ವಿರುದ್ಧ ಅಸಮಾಧಾನ ಉಂಟು ಮಾಡುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಎನ್‌ಐಎ ಆರೋಪಿಸಿದೆ.

ಆರೋಪಿಗಳಾದ ಪಿಎಫ್‌ಐನ ಶಿಕ್ಷಣ ವಿಭಾಗದ ರಾಷ್ಟ್ರೀಯ ಉಸ್ತುವಾರಿ ಕರಮನ ಅಶ್ರಫ್ ಮೌಲವಿ ಮತ್ತು ಇತರರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲು ಸಲ್ಲಿಸಿದ ಅರ್ಜಿಯಲ್ಲಿ ಈ ವಿಷಯ ಬಹಿರಂಗವಾಗಿದೆ. ಪ್ರಕರಣದ ತನಿಖೆಯನ್ನು ಎನ್‌ಐಎ ಕೊಚ್ಚಿ ಶಾಖೆ ನಡೆಸುತ್ತಿದೆ. ಇದನ್ನೂ ಓದಿ: PFI ನಾಯಕನ ಮನೆಯಲ್ಲಿ ಸಾವರ್ಕರ್‌ ಪುಸ್ತಕ – ಶಿವಮೊಗ್ಗದಲ್ಲಿ 19 ಲಕ್ಷ ಪತ್ತೆ

ಇಂತಹ ಅಪರಾಧ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿ, ಗೃಹ ಸಚಿವಾಲಯದ ಭಯೋತ್ಪಾದನೆ ನಿಗ್ರಹ ಮತ್ತು ಮೂಲಭೂತವಾದ (ಸಿಟಿಸಿಆರ್) ವಿಭಾಗವು ಸೆಪ್ಟೆಂಬರ್ 16 ರಂದು ಈ ಬಗ್ಗೆ ತನಿಖೆ ನಡೆಸುವಂತೆ ಎನ್‌ಐಎಗೆ ಆದೇಶ ಹೊರಡಿಸಿತ್ತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *