ಕುಕ್ಕೆ ದೇವಸ್ಥಾನ ಮಂಡಳಿ ಉಪವಾಸ ಕೈಬಿಡುವಂತೆ ಸುಬ್ರಹ್ಮಣ್ಯ ಸ್ವಾಮೀಜಿಗಳ ಮನವೊಲಿಸಲಿ: ಪೇಜಾವರ ಶ್ರೀ

Public TV
2 Min Read

ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮಠಕ್ಕೂ ದೇವಾಲಯಕ್ಕೂ ನಡುವೆ ಕಾಣಿಸಿಕೊಂಡಿರುವ ಭಿನ್ನಮತ ತಾರಕ್ಕೇರಿದ್ದು, ಈ ವಿವಾದವನ್ನು ಬಗೆಹರಿಸಲು ಜಿಲ್ಲೆಯ ಅಷ್ಟಮಠ ಮಧ್ಯಪ್ರವೇಶ ಮಾಡಿದೆ.

ಉಡುಪಿ ಕೃಷ್ಣಮಠಕ್ಕೆ ಸಂಬಂಧಿಸಿದಂತೆ ಅಷ್ಟಮಠಾಧೀಶರು ಈ ವಿಚಾರದಲ್ಲಿ ಸುಬ್ರಹ್ಮಣ್ಯ ಸ್ವಾಮೀಜಿಗಳ ಬೆಂಬಲಕ್ಕೆ ನಿಂತಿದ್ದಾರೆ. ಸುಬ್ರಹ್ಮಣ್ಯ ಮಠವು ಮಧ್ವ ಮತಕ್ಕೆ ಸಂಬಂಧಪಟ್ಟ ಧಾರ್ಮಿಕ ಕೇಂದ್ರವಾದ ಕಾರಣ ಪೇಜಾವರ ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥರಿಗೆ ಅನಗತ್ಯ ಹಿಂಸೆ ನೀಡಬಾರದು ಎಂದು ಅಷ್ಟಮಠಾಧೀಶರು ಒತ್ತಾಯ ಮಾಡಿದ್ದಾರೆ.

ಮಠ ಹಾಗೂ ದೇವಾಲಯ ಸಂಘರ್ಷದ ಕುರಿತು ಪ್ರತಿಕ್ರಿಯಿಸಿದ ಪೇಜಾವರ ಶ್ರೀಗಳು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಸುಬ್ರಹ್ಮಣ್ಯ ಮಠಕ್ಕೆ ಅನೇಕ ಸಮಸ್ಯೆಯಾಗಿದೆ. ಸುಬ್ರಹ್ಮಣ್ಯ ಮಠಾಧೀಶರಿಗೆ ದೇವಸ್ಥಾನದ ಆಡಳಿತ ಮಂಡಳಿ ನಿರಂತರ ಕಿರುಕುಳ ನೀಡುತ್ತಿದೆ. ಉಡುಪಿಯ ಅಷ್ಟಮಠಾಧೀಶರಿಗೆ ಈ ಬಗ್ಗೆ ಅತೀವ ಕಳವಳವಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಮಠ ಜನರಿಗೆ ಹಾನಿಕಾರಕವಾಗಿ ವರ್ತಿಸುತ್ತಿಲ್ಲ. ಕುಕ್ಕೆ ದೇವಸ್ಥಾನ ಹಾಗೂ ಮಠದ ಸಂಘರ್ಷ ಸರಿಯಲ್ಲ. ಈ ವಿಚಾರದಲ್ಲಿ ದೇವಸ್ಥಾನಕ್ಕೆ ಭಿನ್ನಾಭಿಪ್ರಾಯ ಇದ್ದರೆ ಮಾತುಕತೆ ಮಾಡೋಣ. ಸುಬ್ರಹ್ಮಣ್ಯ ಮಠದಿಂದ ತೊಂದರೆಯಾದರೆ ಸರಿಪಡಿಸೋಣ. ಸುಬ್ರಹ್ಮಣ್ಯ ಶ್ರೀಗಳ ಜೊತೆ ಮಾತಮಾಡುತ್ತೇನೆ ನಾನೇ ಮಧ್ಯಸ್ಥಿಕೆ ವಹಿಸುತ್ತೇನೆ ಎಂದು ಹೇಳಿದರು.

ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಠಕ್ಕೆ ಗೌರವ ಸಿಗುತ್ತಿಲ್ಲ. ವಿದ್ಯಾಭೂಷಣ ಶ್ರೀ ಇದ್ದಾಗ ಇದ್ದ ಗೌರವವಾದ್ರೂ ಸಿಗಬೇಕು. ದೇವಸ್ಥಾನ, ಮಠ ಸ್ವತಂತ್ರವಾಗಿ ನಡೆಯಬೇಕು. ಎಲ್ಲಾ ಪಕ್ಷಗಳು, ಎಲ್ಲಾ ಜನರ ಸಹಕಾರ ಬೇಕು. ಸುಬ್ರಹ್ಮಣ್ಯ ಶ್ರೀಗಳು ಉಪವಾಸ ಕೈ ಬಿಡುವಂತೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಬೇಕು. ಉಪವಾಸ ಕೈಬಿಡುವಂತೆ ಸುಬ್ರಹ್ಮಣ್ಯ ಸ್ವಾಮಿಗಳ ಮನ ಒಲಿಸಬೇಕು ಎಂದು ತಿಳಿಸಿದರು.

ಪರ್ಯಾಯ ಪಲಿಮಾರು ಸ್ವಾಮೀಜಿ, ಕಾಣಿಯೂರು ಮಠಾಧೀಶರ ಹಾಗೂ ಸೋದೆ ಮಠಾಧೀಶರು ಜೊತೆಯಾಗಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿ, ದೇವಸ್ಥಾನದವರು ಮಠಕ್ಕೆ ಅನಾವಶ್ಯಕ ತೊಂದರೆ ಕೊಟ್ಟರೆ ನಾವು ಸಹಿಸಲ್ಲ. ಮಠದ ಗೋಶಾಲೆಗೆ ಬರುವ ನೀರನ್ನು ದೇವಸ್ಥಾನ ಸ್ಥಗಿತಗೊಳಿಸಿದೆ. ಧ್ವನಿವರ್ಧಕವನ್ನು ಮಠದ ಕಡೆಗೆ ಮುಖ ಮಾಡಿ ಇಟ್ಟು ಪೂಜೆಗೆ ಅಡ್ಡಿ ಪಡಿಸಲಾಗುತ್ತಿದೆ. ಸರ್ಪ ಸಂಸ್ಕಾರಕ್ಕೆ ಮಠದಲ್ಲಿ ಮಾಡಲು ಯಾವುದೇ ನಿರ್ಬಂಧ ಇಲ್ಲ. ಮಠದ ವಿರೋಧಿ ವರ್ಗದ ಈ ನಿಲುವು ಸರಿಯಲ್ಲ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

 

Share This Article
Leave a Comment

Leave a Reply

Your email address will not be published. Required fields are marked *