ಅಧ್ಯಕ್ಷ ಹುದ್ದೆ ಇಷ್ಟು ಅಪಾಯಕಾರಿ ಎಂದು ತಿಳಿದಿರಲಿಲ್ಲ: ಗುಂಡಿನ ದಾಳಿಯ ನಂತರ ಟ್ರಂಪ್ ವ್ಯಂಗ್ಯ

2 Min Read

ವಾಷಿಂಗ್ಟನ್: ಶನಿವಾರ ರಾತ್ರಿ ನಡೆದ ವಾರ್ಷಿಕ ‘ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್ (WHCD) ವೇಳೆ ಸಂಭವಿಸಿದ ಗುಂಡಿನ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಶ್ವೇತಭವನದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಾ ಘಟನೆಯನ್ನು ತಮ್ಮದೇ ಶೈಲಿಯಲ್ಲಿ ವಿಶ್ಲೇಷಿಸಿದ್ದಾರೆ.

“ಅಧ್ಯಕ್ಷ ವೃತ್ತಿ ಇಷ್ಟೊಂದು ಅಪಾಯಕಾರಿ ಎಂದು ಯಾರೂ ನನಗೆ ಎಚ್ಚರಿಸಿರಲಿಲ್ಲ. ಒಂದು ವೇಳೆ ನನ್ನ ಮಿತ್ರ ವಿದೇಶಾಂಗ ಕಾರ್ಯದರ್ಶಿಯಾಗಿರುವ ಮಾರ್ಕೊ ರೂಬಿಯೋ ಮೊದಲೇ ಈ ಬಗ್ಗೆ ಮಾಹಿತಿ ನೀಡಿದ್ದರೆ, ಬಹುಶಃ ನಾನು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಎರಡು ಬಾರಿ ಯೋಚಿಸುತ್ತಿದ್ದೆ” ಎಂದು ಟ್ರಂಪ್ ಹಾಸ್ಯ ಚಟಾಕಿ ಹಾರಿಸಿದರು.

ಅಮೆರಿಕದ ಇತಿಹಾಸವನ್ನು ಉಲ್ಲೇಖಿಸಿದ ಅವರು, ಅಂಕಿಅಂಶಗಳ ಪ್ರಕಾರ ಸುಮಾರು 8% ಅಧ್ಯಕ್ಷರ ಮೇಲೆ ಗುಂಡಿನ ದಾಳಿ ನಡೆದಿದೆ ಮತ್ತು 5.8% ಅಧ್ಯಕ್ಷರು ಹತ್ಯೆಗೀಡಾಗಿದ್ದಾರೆ. ಇದು ಜಗತ್ತಿನ ಅತ್ಯಂತ ಅಪಾಯಕಾರಿ ಉದ್ಯೋಗಗಳಲ್ಲಿ ಒಂದು ಎಂದು ಗಂಭೀರವಾಗಿಯೇ ನುಡಿದರು. ಇದನ್ನೂ ಓದಿ: Explained| ಏನಿದು ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್? ಅಧ್ಯಕ್ಷರು ಯಾಕೆ ಬರುತ್ತಾರೆ? ಹಿಲ್ಟನ್ ಹೋಟೆಲ್‌ನಲ್ಲೇ ಆಯೋಜನೆ ಯಾಕೆ?

 

ಅಪಾಯಗಳ ನಡುವೆಯೂ ದೇಶ ಸೇವೆ ಕರ್ತವ್ಯದ ಬಗ್ಗೆ ಮಾತನಾಡಿದ ಟ್ರಂಪ್‌, ನಾನು ಇಲ್ಲಿ ನನ್ನ ಕೆಲಸ ಮಾಡಲು ಬಂದಿದ್ದೇನೆ. ಎಷ್ಟೇ ಅಪಾಯವಿದ್ದರೂ ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ. ಅಮೆರಿಕದ ಜನರ ಸೇವೆ ಮಾಡುವುದರಲ್ಲಿ ನನಗೆ ಹೆಮ್ಮೆ ಇದೆ” ಎಂದು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

ವಾಷಿಂಗ್ಟನ್‌ನ ಹಿಲ್ಟನ್ ಹೋಟೆಲ್‌ನಲ್ಲಿ ಭೋಜನಕೂಟ ನಡೆಯುತ್ತಿದ್ದಾಗ ಶಂಕಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದನು. ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ತಕ್ಷಣವೇ ಟ್ರಂಪ್ ಮತ್ತು ಅವರ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದರು. ದಾಳಿಕೋರನನ್ನು ಈಗಾಗಲೇ ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ:ದಾಳಿಗೂ ಮುನ್ನವೇ ಪ್ಲ್ಯಾನ್‌ – ಸಾಕಷ್ಟು ಭದ್ರತೆ ಇದ್ದರೂ ದಾಳಿಕೋರ ಟ್ರಂಪ್‌ ಡಿನ್ನರ್‌ ಪಾರ್ಟಿಗೆ ನುಗ್ಗಿದ್ದು ಹೇಗೆ?

ಅಮೆರಿಕದ 46 ಅಧ್ಯಕ್ಷರಲ್ಲಿ ಅಬ್ರಹಾಂ ಲಿಂಕನ್, ಜೇಮ್ಸ್ ಗಾರ್ಫೀಲ್ಡ್, ವಿಲಿಯಂ ಮೆಕಿನ್ಲಿ, ಜಾನ್ ಎಫ್ ಕೆನಡಿ ಅವರನ್ನು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಹಲವರು ಅಧ್ಯಕ್ಷರ ಮೇಲೆ ಗುಂಡಿನ ದಾಳಿ ನಡೆದಿದೆ.

Share This Article