ಕುವೆಂಪು ವಿವಿ ಸ್ಮಾರ್ಟ್ ಕ್ಲಾಸ್ ಹಗರಣ – ತನಿಖೆಗೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇಮಿಸಿ ರಾಜ್ಯಪಾಲರ ಆದೇಶ

1 Min Read

ಶಿವಮೊಗ್ಗ: ಇಲ್ಲಿನ (Shivamogga) ಕುವೆಂಪು ವಿಶ್ವವಿದ್ಯಾಲಯದಲ್ಲಿ (Kuvempu University) ಸ್ಮಾರ್ಟ್ ಕ್ಲಾಸ್ ಕಾಮಗಾರಿಯಲ್ಲಿ ನಡೆದ ಬಹುಕೋಟಿ ಹಗರಣದ ತನಿಖೆಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ (Thawar Chand Gehlot) ಆದೇಶ ಹೊರಡಿಸಿದ್ದಾರೆ.‌

ತನಿಖೆಗಾಗಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್.ಗುರುರಾಜನ್ ಅವರನ್ನು ಒಳಗೊಂಡ ಏಕ ಸದಸ್ಯ ಸತ್ಯ ಶೋಧನಾ ಸಮಿತಿಯನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ತನಿಖೆ ನಡೆಸಿ ಒಂದು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ವಿಶ್ವವಿದ್ಯಾಲಯದ ಎಸ್‌ಸಿ, ಎಸ್‌ಟಿ ಮತ್ತು ಇತರೆ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ರೂಮ್ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯಡಿ (SCSP, TSP) 5 ಕೋಟಿ ರೂ. ಅನುದಾನ ಒದಗಿಸಿತ್ತು. ಅದರಲ್ಲಿ 4.25 ಕೋಟಿ ರೂ. ಗಳನ್ನು ಎರಡು ಹಂತಗಳಲ್ಲಿ ಬಿಡುಗಡೆ ಮಾಡಿತ್ತು. ಇದನ್ನೂ ಓದಿ: ಗದಗದ ಮುಕ್ತಿಮಂದಿರ ಮಠಕ್ಕೆ ಡಿಕೆಶಿ ದಿಢೀರ್ ಭೇಟಿ

ಕಾಮಗಾರಿ ಸಂದರ್ಭದಲ್ಲಿ ನಿಯಮಗಳನ್ನು ಉಲ್ಲಂಘಿಸಿದ್ದಲ್ಲದೇ ಕಳಪೆ ಕಾಮಗಾರಿ ನಡೆಸಲಾಗಿದೆ. ಕಳಪೆ ಗುಣಮಟ್ಟದ ಪರಿಕರಗಳಿಗೆ ದುಬಾರಿ ಮೊತ್ತವನ್ನು ಪಾವತಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣದ ತನಿಖೆ ನಡೆಸಿ ಕಾನೂನು ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹಲವರು ದೂರು ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಸರ್ಕಾರ ನಿವೃತ್ತ ನ್ಯಾಯಾಧೀಶ ಎಚ್.ಬಿ.ರವೀಂದ್ರನಾಥ್ ಅವರನ್ನು ತನಿಖೆಗೆ ನೇಮಿಸಿತ್ತು. ತನಿಖೆಯಲ್ಲಿ ಆರೋಪ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸಮಗ್ರ ತನಿಖೆಗೆ ರಾಜ್ಯಪಾಲರು ಆದೇಶಿಸಿ ಏಕ ಸದಸ್ಯ ಸಮಿತಿಯನ್ನು ನೇಮಕ ಮಾಡಿದ್ದಾರೆ. ಇದನ್ನೂ ಓದಿ: ಭಾರತದ ಅತಿದೊಡ್ಡ ಬಯೋ-ಗ್ಯಾಸ್ ಯೋಜನೆ ಅನುಷ್ಠಾನಕ್ಕೆ ಬೆಂಗಳೂರು ಜಲಮಂಡಳಿ ಸಜ್ಜು

Share This Article