ಸೌಹಾರ್ದದ ಮೈಸೂರು ಜಂಬೂಸವಾರಿ – ಆನೆಗೆ ಅಂಬಾರಿ ಕಟ್ತಾರೆ ಮುಸ್ಲಿಮರು!

Public TV
2 Min Read

ಮೈಸೂರು: ಕರ್ನಾಟಕದ ನಾಡಹಬ್ಬವಾಗಿರುವ ಮೈಸೂರು ದಸರಾ ಸೌಹಾರ್ದತೆಯ ಪ್ರತೀಕವೂ ಆಗಿದ್ದು, ದಸರಾದ ಪ್ರಮುಖ ಆಕರ್ಷಣೆ ಜಂಬೂಸವಾರಿಯ ವೇಳೆ ಆನೆಗೆ ಮುಸ್ಲಿಮರು ಅಂಬಾರಿ ಕಟ್ಟುವುದು ವಿಶೇಷ.

ಹೌದು, ಸಾವಿರಾರು ಪ್ರವಾಸಿಗರನ್ನು ತನ್ನತ್ತಾ ಸೆಳೆಯುವ ದಸರಾ ಜಂಬೂಸವಾರಿಯ ಗಜಪಡೆಯನ್ನು ಸಿದ್ದಗೊಳಿಸುವಲ್ಲಿ ಮುಸ್ಲಿಂ ಸಮುದಾಯದ ಪಾತ್ರವು ಇದೆ. ಹೀಗಾಗಿ ಮೈಸೂರು ದಸರಾ ಸೌಹಾರ್ದತೆಯ ಪ್ರತೀಕವಾಗಿದೆ.

ಗಜಪಡೆಯ ಆರೈಕೆಯಲ್ಲದೇ, ಜಂಬೂಸವಾರಿಗೆ ಅಂಬಾರಿಯನ್ನು ಕಟ್ಟುವಲ್ಲಿ ಅಕ್ರಂ, ನವೀದ್, ಕಲೀಂ, ಪಾಷಾ ಹಾಗೂ ಜಕಾವುಲ್ಲಾರವರು ಪ್ರಮುಖ ಪಾತ್ರ ವಹಿಸುತ್ತಾರೆ. ಧರ್ಮದ ಹಂಗಿಲ್ಲದೇ ಧಾರ್ಮಿಕ ಕಾರ್ಯಕ್ರಮಕ್ಕೆ ಇವರ ಶ್ರಮ ಎಲೆಮರೆ ಕಾಯಿಯಂತಿದೆ.

ಮಾವುತರಾಗಿರುವ ಅಕ್ರಂ ಕಳೆದ 19 ವರ್ಷಗಳಿಂದ ಗಜಪಡೆಯ ಆರೈಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅರಮನೆಯಲ್ಲಿ ಬೀಡುಬಿಟ್ಟಿರುವ 12 ಆನೆಗಳಿಗೆ ಆಹಾರ ಸಿದ್ಧಪಡಿಸುವ ಜವಾಬ್ದಾರಿಯಿಂದ ಹಿಡಿದು ಅವುಗಳ ಆರೈಕೆ, ಅಲಂಕಾರ, ಹಗ್ಗ ನೇಯುವುದು, ಚಿಕಿತ್ಸೆ ನೀಡುವಾಗ ಪಶುವೈದ್ಯರಿಗೆ ಸಹಕರಿಸುತ್ತಾರೆ. ವಿಶೇಷವಾಗಿ ಆನೆಗಳ ಜೊತೆ ಆತ್ಮೀಯತೆಯನ್ನು ಬೆಳೆಸಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಕ್ರಂ, ನನ್ನ ಪಾಲಿಗೆ ದಸರೆಯೇ ದೊಡ್ಡ ಹಬ್ಬ. ಖುಷಿಯಿಂದ ದೇವರು ನೀಡಿದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ. ನನ್ನ ಮನೆಯ ಕೆಲಸವೆಂದು ತಿಳಿದು ದುಡಿಯುತ್ತಿದ್ದೇನೆ. ಇದಲ್ಲದೇ ನಾವೆಲ್ಲರೂ ಸೇರಿ ಧಾರ್ಮಿಕ ಕಾರ್ಯಕ್ರಮಗಳನ್ನು ಸಹ ಭಕ್ತಿ-ಭಾವದಿಂದ ನೆರವೇರಿಸುತ್ತೇವೆ. ಎಲ್ಲರೂ ಸೇರಿ ಕೆಲಸ ಮಾಡಿ ದಸರಾ ಯಶಸ್ವಿಯಾಗುವಂತೆ ಮಾಡುತ್ತೇವೆ. ಇದರಿಂದ ಮೈಸೂರಿಗೆ ಆಗಮಿಸುವ ಪ್ರವಾಸಿಗರು ಸಹ ಸಂತೋಷ ಪಡುತ್ತಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅರ್ಜುನ ಆನೆಗೆ 750 ಕೆಜಿ ತೂಕದ ಚಿನ್ನದ ಅಂಬಾರಿ ಹಾಗೂ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಸರಾಗವಾಗಿ ಹೊರುವುದಕ್ಕೆ ಗಾದಿ ಹಾಗೂ ನಮ್ದಾ ಪ್ರಮುಖ ಪಾತ್ರ ವಹಿಸುತ್ತದೆ. ಈ ಗಾದಿ ಹಾಗೂ ನಾಮ್ದಾ ತಯಾರಿಕೆಯಲ್ಲಿ ದಸ್ತಗಿರಿ ಪಾಷಾ ಹಾಗೂ ಜಕಾವುಲ್ಲಾರ ಕೈಚಳಕ ಅಡಗಿದೆ. ಇವರು ಸಿದ್ಧಪಡಿಸಿದ ನಂತರ ಅಂಬಾರಿ ಕಟ್ಟುವ ಹೊಣೆಯನ್ನು ಅಕ್ರಂ ಚಾಣಾಕ್ಷತನದಿಂದ ನಿಭಾಯಿಸುತ್ತಾರೆ.

ಇವರಲ್ಲದೇ ನವೀದ್ ಎಂಬವರು ಕಳೆದ ಎರಡು ವರ್ಷಗಳಿಂದ ಗೋಪಿಯ ಆನೆಯ ಮಾವುತರಾಗಿ ಕಾರ್ಯನಿರ್ವಹಿಸುತ್ತಿದ್ದರೆ, ದಸ್ತಗಿರಿ ಪಾಷಾ ಎಂಬವರು ಅರಮನೆಯ ಆನೆಗಳಾದ ಚಂಚಲಾ, ಸೀತಾ, ಜೆಮಿನಿ, ಪ್ರೀತಿ, ರಾಜೇಶ್ವರಿ ಹಾಗೂ ರೂಬಿ ಕಾಳಜಿಯನ್ನು ನೋಡಿಕೊಳ್ಳುತ್ತಾರೆ. ಇದರ ಜೊತೆ ಅರಮನೆಯ ಗಂಡಾನೆಗಳಾದ ವಿಕ್ರಂ ಹಾಗೂ ಗೋಪಿಯನ್ನು ಅರಮನೆಯ ಆವರಣದಲ್ಲಿ ರಾಜವಂಶಸ್ಥರು ನಡೆಸುವ ನವರಾತ್ರಿ ಕಾರ್ಯಕ್ರಮಗಳಲ್ಲಿ ಆನೆಗಳಿಗೆ 9 ದಿನವು ಅಲಂಕಾರ ಮಾಡಿ ಪೂಜೆಗೆ ಕರೆದುಕೊಂಡು ಹೋಗುವ ಜವಾಬ್ದಾರಿಯನ್ನು ಸಹ ಹೊತ್ತಿದ್ದಾರೆ.

ಧಾರ್ಮಿಕ ಕಾರ್ಯಕ್ರಮಗಳಿಗೆ ರಕ್ತದ ಹಂಗಿಲ್ಲ. ಮನುಷ್ಯರ ಜಾತಿ, ಧರ್ಮದ ಬಗ್ಗೆ ಆನೆಗಳಿಗೆ ಗೊತ್ತಿಲ್ಲ. ಅನ್ನ ನೀಡುವ ಕೆಲಸವೇ ನನಗೆ ದೇವರು ಎಂದು ದಸ್ತಗಿರಿ ತಮ್ಮ ಕಾಯಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *