ಪುಣೆ ಕ್ರೀಡಾಂಗಣ ಸಿಬ್ಬಂದಿಗೆ ವಿಶೇಷ ಗಿಫ್ಟ್ ಕೊಟ್ಟ ಧೋನಿ

Public TV
1 Min Read

ಪುಣೆ: ಈ ಬಾರಿಯ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತವರು ಕ್ರೀಡಾಂಗಣವಾಗಿದ್ದ ಪುಣೆಯ ಮಹಾರಾಷ್ಟ್ರ ಅಸೋಸಿಯೇಷನ್ ಕ್ರೀಡಾಂಗಣದ ಸಿಬ್ಬಂದಿಗೆ ಚೆನ್ನೈ ತಂಡದ ನಾಯಕ ಧೋನಿ ವಿಶೇಷ ಕೊಡುಗೆ ನೀಡಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಡೆದ ಕೊನೆಯ ಪಂದ್ಯದ ಬಳಿಕ ಕ್ರೀಡಾಂಗಣದ ಸಿಬ್ಬಂದಿಯ ಶ್ರಮವನ್ನು ಗುರುತಿಸಿ ತಲಾ 20 ಸಾವಿರ ರೂ. ನಗದು ಗಿಫ್ಟ್ ನೀಡಲಾಗಿದೆ. ಬಳಿಕ ಸಿಬ್ಬಂದಿಯೊಂದಿಗೆ ಧೋನಿ ಹಾಗೂ ಚೆನ್ನೈ ತಂಡ ಆಟಗಾರರು ಫೋಟೋ ಸಹ ತೆಗೆಸಿಕೊಂಡಿದ್ದಾರೆ.

ಈ ಕುರಿತು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ಚೆನ್ನೈ ತಂಡದ ವಕ್ತಾರರು, ಇದು ಸಿಬ್ಬಂದಿ ಶ್ರಮಕ್ಕೆ ನೀಡಿದ ಸಣ್ಣ ಕೊಡುಗೆ ಮಾತ್ರ. ಕಡಿಮೆ ಅವಧಿಯಲ್ಲಿ ಕ್ರೀಡಾಂಗಣವನ್ನು ಸಿದ್ಧಪಡಿಸಿ ಅವಕಾಶ ನೀಡಿದ್ದರು. ಅದ್ದರಿಂದ ಧೋನಿ ಸೇರಿದಂತೆ ಆಟಗಾರರ ಸಲಹೆ ಮೇರೆಗೆ ಈ ನಿರ್ಧಾರ ಮಾಡಲಾಯಿತು ಎಂದು ತಿಳಿಸಿದ್ದಾರೆ.

ಈ ಬಾರಿ ಟೂರ್ನಿಯ ಆರಂಭದ ಪಂದ್ಯಗಳು ಚೆನ್ನೈ ನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿತ್ತು. ಆದರೆ ಕಾವೇರಿ ಕುರಿತ ವಿಚಾರವಾಗಿ ತಮಿಳುನಾಡಿನಲ್ಲಿ ನಡೆದ ಗಲಾಟೆ ಬಳಿಕ ಐಪಿಎಲ್ ಪಂದ್ಯಗಳಿಗೆ ವಿರೋಧ ವ್ಯಕ್ತವಾಗಿತ್ತು. ಈ ಕಾರಣದಿಂದ ಪಂದ್ಯಗಳನ್ನು ಚೆನ್ನೈ ನಿಂದ ಪುಣೆಗೆ ವರ್ಗಾವಣೆ ಮಾಡಲಾಗಿತ್ತು.

ಬಳಿಕ ಪುಣೆಯ ಕ್ರೀಡಾಂಗಣದಲ್ಲಿ ಚೆನ್ನೈ ತಂಡ ಆಡಿದ 6 ಪಂದ್ಯಗಳಲ್ಲಿ 5 ರಲ್ಲಿ ಗೆದ್ದು ಬೀಗಿದೆ. ಪಂಜಾಬ್ ವಿರುದ್ಧದ ಪಂದ್ಯವನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ 18 ಅಂಕಗಳೊಂದಿಗೆ 2ನೇ ಸ್ಥಾನಗಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *