ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಕನಿಷ್ಠ 35 ಸ್ಥಾನ ಗೆಲ್ಲಲಿದೆ: ಸಲೀಂ ಅಹಮದ್ ವಿಶ್ವಾಸ

Public TV
3 Min Read

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಚುನಾಣೆಯ 55 ಸ್ಥಾನಗಳ ಪೈಕಿ ಕನಿಷ್ಠ 35 ಸ್ಥಾನಗಳನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

SALEEM AHMED

ಕಲಬುರಗಿ ಮಹಾನಗರ ಚುನಾವಣೆ ಹಿನ್ನೆಲೆ ಡಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಜನರ ಹಿತ ಕಾಪಾಡಲು ವಿಫಲವಾಗಿವೆ. ಸುಮಾರು 2,000 ಕೋಟಿಯಷ್ಟು ರಾಜ್ಯ ಸರ್ಕಾರ ಭ್ರಷ್ಟಾಚಾರ ಎಸಗಿದೆ. ಕೋವಿಡ್ ಎರಡನೇ ಅಲೆಯನ್ನು ಎದುರಿಸಲು ಸರ್ಕಾರ ವಿಫಲವಾಗಿದ್ದು, ಸಾವಿನ ಸಂಖ್ಯೆ ಕಡಿಮೆ ತೋರಿಸುವ ಮೂಲಕ ಜನರಿಗೆ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಪಕ್ಷದ ವತಿಯಿಂದ ಸಾವಿನ ಸಂಖ್ಯೆ ಕುರಿತು ಆಂತರಿಕ ತನಿಖೆ ನಡೆಸುತ್ತಿದೆ. ರಾಜ್ಯ ಸರ್ಕಾರ ಕೋವಿಡ್‍ನಿಂದ ನಿಧನರಾದ ವ್ಯಕ್ತಿಗಳ ಕುಟುಂಬದವರಿಗೆ ತಲಾ ರೂ. 5 ಲಕ್ಷ ಪರಿಹಾರ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.

SALEEM AHMED

ಮೊಟ್ಟೆ ಹಗರಣದಲ್ಲಿಭಾಗಿಯಾಗಿರುವ ಶಶಿಕಲಾ ಜೊಲ್ಲೆ ಪ್ರಮಾಣ ಸ್ವೀಕಾರಕ್ಕೆ ಬರಲು ವಿಮಾನ ನಿಲ್ದಾಣದಿಂದ ರಾಜಭವನದವರೆಗೆ ಬರಲು ಜೀರೋ ಟ್ರಾಫಿಕ್ ಮಾಡಿದ್ದು ನೋಡಿದರೆ ಸರ್ಕಾರದ ನೈತಿಕತೆ ಅರ್ಥವಾಗುತ್ತದೆ ಎಂದು ಟೀಕಿಸಿದ್ದಾರೆ. ಇತ್ತೀಚಿಗೆ ನಾಲ್ವರು ಕೇಂದ್ರ ಸಚಿವರು ಜನಾಶೀರ್ವಾದ ಯಾತ್ರೆ ಕಾರ್ಯಕ್ರಮ ನಡೆಸಿದರು. ಯಾವ ಪುರುಷಾರ್ಥಕ್ಕೆ ಈ ಕಾರ್ಯಕ್ರಮ ನಡೆಸಿದ್ದಾರೆ. ರಾಜ್ಯದಲ್ಲಿ ಕೋವಿಡ್ ನಿಂದ ಅಪಾರ ಜನರು ಸಾವು ನೋವು ಅನುಭವಿಸಿದ್ದಾರೆ. ಜನಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಜನರಿಗೆ ಅಚ್ಚೇದಿನ್ ಭರವಸೆ ನೀಡಿ ಅತ್ಯಂತ ಕೆಟ್ಟ ದಿನಗಳಲ್ಲಿ ನರಳುವಂತೆ ಮಾಡಿದ್ದಕ್ಕೆ, ಸುಮಾರು 13,000 ಕೋಟಿ ಜಿಎಸ್‍ಟಿ ಅನುದಾನ ಬಿಡುಗಡೆ ಮಾಡಿಸಲು ಸಾಧ್ಯವಾಗದ್ದಕ್ಕೆ ಬಿಜೆಪಿ ಮಂತ್ರಿಗಳು ಕ್ಷಮೆ ಕೇಳುವ ಯಾತ್ರೆ ನಡೆಸಬೇಕಿತ್ತು ಎಂದಿದ್ದಾರೆ. ಇದನ್ನೂ ಓದಿ:ಚಾಮುಂಡಿ ದೇವಿಯ ತಪ್ಪಲಿನಲ್ಲಿ ಅತ್ಯಾಚಾರ ಆಗಿರುವುದು ಅಪಮಾನ: ಜಯ ಮೃತ್ಯುಂಜಯ ಸ್ವಾಮೀಜಿ

ಯಾದಗಿರಿಯಲ್ಲಿ ಕೇಂದ್ರ ಸಚಿವರ ಸ್ವಾಗತ ಸಮಯದಲ್ಲಿ ಗಾಳಿಯಲ್ಲಿ ಗುಂಡುಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಲೀಂ ಅಹಮದ್ ಅವರು ಉತ್ತರ ಪ್ರದೇಶ ಹಾಗೂ ಬಿಹಾರದ ಸಂಸ್ಕೃತಿಯನ್ನು ಬಿಜೆಪಿ ರಾಜ್ಯದಲ್ಲಿ ಪರಿಚಯಿಸುತ್ತಿದೆ ಇದು ನಾಚಿಕೆಗೇಡು. ಮಾಜಿ ಸಚಿವರೊಬ್ಬರ ಅಣತಿಯಂತೆ ಆ ಘಟನೆ ನಡೆದಿದ್ದು, ಹೋಂ ಮಿನಿಸ್ಟರ್ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಘಟನೆಯನ್ನು ತೀವ್ರವಾಗಿ ಖಂಡಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷರು ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡುವಾಗ ಗೃಹ ಸಚಿವರು ಉಢಾಫೆಯಾಗಿ ಉತ್ತರಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ರಾಜ್ಯದ ಜನರು ರಾಜ್ಯ ಹಾಗೂ ಕೇಂದ್ರ ಸರ್ಕಾರ ಜನವಿರೋಧಿ ನೀತಿಯಿಂದಾಗಿ ರೋಸಿ ಹೋಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಈ ಚುನಾವಣೆಯಲ್ಲಿ ಆರಿಸಿ ಕಳಿಸುವ ಮೂಲಕ ಮುಂಬರುವ ಸ್ಥಳೀಯ ಸಂಸ್ಥೆ, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗೆ ಒಂದು ಹೊಸತನಕ್ಕೆ ನಾಂದಿ ಹಾಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ನುಡಿದಿದ್ದಾರೆ. ಇದನ್ನೂ ಓದಿ:ನೋಬಾಲ್ ಎಸೆದು ಕೆಂಗಣ್ಣಿಗೆ ಗುರಿಯಾದ ಟೀಂ ಇಂಡಿಯಾ, ಇಂಗ್ಲೆಂಡ್ ಬೌಲರ್​ಗಳು

ಕಲಬುರಗಿ ಮಹಾನಗರ ಪಾಲಿಕೆಯ ಚುನಾವಣೆ ಟಿಕೆಟ್ ಹಂಚಿಕೆ ವಿಷಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಾಗಿದೆ. ಅತೃಪ್ತರೆಲ್ಲ ಬೇರೆ, ಬೇರೆ ಪಕ್ಷ ಸೇರಿದ್ದಾರೆ. ಇದು ಪಕ್ಷಕ್ಕೆ ಹಿನ್ನೆಡೆಯಾಗಲಿದೆಯಾ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ ಸ್ಥಳೀಯ ನಾಯಕರ ಅಭಿಪ್ರಾಯ ಪಡೆದು ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆ ಮಾಡಲಾಗಿದೆ. ಜೊತೆಗೆ ಯುವಕರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. 55 ಸೀಟುಗಳಲ್ಲಿ 36 ಜನ ಹೊಸಬರಿಗೆ ಅವಕಾಶ ನೀಡಲಾಗಿದೆ. ಟಿಕೆಟ್ ಹಂಚಿಕೆಯಲ್ಲಿ ಸಹಜವಾಗಿ ಎಲ್ಲ ಪಕ್ಷದಲ್ಲಿ ಅಸಮಾಧಾನ ಇದ್ದೇ ಇರುತ್ತದೆ. ಸಾಧ್ಯವಾದಷ್ಟು ಸಮಸ್ಯೆ ಬಗೆಹರಿಸಲಾಗಿದೆ. ಇಷ್ಟಾಗಿಯೂ ಕೆಲವರು ಎಂಐಎಂ ಹಾಗೂ ಜೆಡಿಎಸ್‍ಗೆ ಹೋಗಿದ್ದಾರೆ. ಆದರೂ ಕೂಡಾ ನಮ್ಮ ಪಕ್ಷಕ್ಕೆ ನಷ್ಟವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿ ಮಾತನಾಡಿದ ಶಾಸಕ ಅಜಯ್ ಸಿಂಗ್ ಅವರು ನಮ್ಮ ಪಕ್ಷದಲ್ಲಿ ಟಿಕೆಟ್ ಹಂಚಿಕೆಯಾದ ಸಂದರ್ಭದಲ್ಲಿ ನಮ್ಮ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಆದರೆ, ಬಿಜೆಪಿಯಲ್ಲಿ ಅಭ್ಯರ್ಥಿಗಳು ಸಿಗದೆ ಕೆಲಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಹಾಕಲು ವಿಫಲವಾಗಿದೆ ಎಂದಿದ್ದಾರೆ. ಇದನ್ನೂ ಓದಿ:ಜನರ ಮರ್ಯಾದೆಯನ್ನೆ ಬಂಡವಾಳ ಮಾಡಿಕೊಂಡಿದ್ದ ಗ್ಯಾಂಗ್ ರೇಪ್ ಕಿರಾತಕರು

ರಾಷ್ಟ್ರೀಯ ಪಕ್ಷ ಎಂದು ಹೇಳುವ ಬಿಜೆಪಿ ತನ್ನ ಬಿ ಟೀಮ್ ಆದ ಎಂಐಎಂಗೆ ಸ್ಥಾನ ಬಿಟ್ಟುಕೊಟ್ಟಿದೆ ಎಂದು ಕುಟುಕಿದ ಸಲೀಂ ಅಹಮದ್, ಇದು ಆ ಪಕ್ಷದ ಚುನಾವಣಾ ನೀತಿಯನ್ನು ತೋರಿಸುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ಈ ಸಂದರ್ಭದಲ್ಲಿ ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ, ಮಾಜಿ ಎಂಎಲ್‍ಸಿ ಅಲ್ಲಮಪ್ರಭು ಪಾಟೀಲ್ ಸೇರಿದಂತೆ ಮತ್ತಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *