ಕುರ್ಚಿ ಮೇಲೆ ಬಸವಣ್ಣನ ಫೋಟೋ ಇಟ್ಟು, ಪೂಜೆ ಸಲ್ಲಿಸಿ ಅಧಿಕಾರ ವಹಿಸಿಕೊಂಡ ನೂತನ ಮೇಯರ್

Public TV
2 Min Read

ಬೆಂಗಳೂರು: ನೂತನವಾಗಿ ಬಿಬಿಎಂಪಿ ಮೇಯರ್ ಆಗಿ ಆಯ್ಕೆಯಾಗಿರುವ ಗಂಗಾಂಬಿಕೆಯವರು ಕುರ್ಚಿಯ ಮೇಲೆ ಬಸವಣ್ಣನವರ ಫೋಟೋ ಇಟ್ಟು, ಪೂಜೆ ಸಲ್ಲಿಸುವ ಮೂಲಕ ಅಧಿಕಾರ ವಹಿಸಿಕೊಂಡಿದ್ದಾರೆ.

ಹೌದು, ಹೊಸ ಮೇಯರ್ ಆದವರು ಮೇಯರ್ ಕುರ್ಚಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಆದರೆ ಇಂದು ಅಧಿಕೃತವಾಗಿ ಮೇಯರ್ ಕಛೇರಿಗೆ ಪ್ರವೇಶಿಸಿದ ನೂತನ ಮೇಯರ್ ಗಂಗಾಂಬಿಕೆಯವರು ಕುರ್ಚಿಯ ಮೇಲೆ ಬಸವಣ್ಣನವರ ಫೋಟೋ ಇಟ್ಟು, ಪೂಜೆ ಸಲ್ಲಿಸಿ ಗೌರವ ಸೂಚಿಸುವ ಮೂಲಕ ಅಧಿಕೃತ ಮೇಯರ್ ಗಿರಿ ಸ್ಥಾನವನ್ನು ವಹಿಸಿಕೊಂಡಿದ್ದಾರೆ.

ಸೆಪ್ಟೆಂಬರ್ 28 ರಂದು ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯ ರಣರಂಗದ ಆಟದಲ್ಲಿ ಕಾಂಗ್ರೆಸ್ಸಿನ ಗಂಗಾಂಬಿಕೆ ಮೇಯರ್ ಆಗಿ ಆಯ್ಕೆಯಾಗಿದ್ದರೆ, ಉಪಮೇಯರ್ ಆಗಿ ಜೆಡಿಎಸ್ಸಿನ ರಮೀಳಾ ಆಯ್ಕೆಯಾಗಿದ್ದರು. ಇಂದು ಮೇಯರ್ ಆಗಿ ಅಧಿಕಾರ ವಹಿಸಿಕೊಂಡ ಗಂಗಾಂಬಿಕೆಯವರು ಬಿಬಿಎಂಪಿ ಆವರಣದ ಬಳಿ ಸಸಿನೆಟ್ಟು ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರು.

ಅಧಿಕಾರ ಸ್ವೀಕಾರ ಮಾಡಿದ ದಿನವೇ ಅಧಿಕಾರಿಗಳಿ ಚಾಟಿ ಬೀಸಿದ ಅವರು, ನಾನು ಮೊದಲು ಸ್ವಚ್ಛತೆಗೆ ಆದ್ಯತೆ ನೀಡುತ್ತೇನೆ. ಹೀಗಾಗಿ ಆವರಣದಲ್ಲಿ ಗಿಡ ನೆಡುವ ಕೆಲಸ ಮಾಡಿದ್ದೇನೆ. ನಾನು ಪ್ರತಿಬಾರಿ ಹೇಳುತ್ತಿದ್ದೆ ನನಗೆ ಬೊಕ್ಕೆ ತರಬೇಡಿ ಅಂತಾ ಆದರೂ ಸಹ ತರುತಿದ್ದೀರಿ. ಇನ್ನೊಮ್ಮೆ ತರಬೇಡಿ ಎಂದು ಮನವಿ ಮಾಡಿಕೊಂಡರು. ರಸ್ತೆ ಗುಂಡಿ ಬಗ್ಗೆ ನನಗೂ ಬೇಸರವಿದೆ. ವೈಜ್ಞಾನಿಕವಾಗಿ ಗುಂಡಿ ಮುಚ್ಚಿಲ್ಲ ಎನ್ನುವ ದೂರುಗಳು ಕೇಳಿಬರುತ್ತಿವೆ. ನಾನು ಮೊದಲು ಗುಂಡಿ ಮುಚ್ಚಿದ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಒಂದು ವೇಳೆ ವೈಜ್ಞಾನಿಕವಾಗಿ ಗುಂಡಿಗಳನ್ನು ಮುಚ್ಚಿಲ್ಲವೆಂದರೆ ಮತ್ತೆ ಕೀಳಿಸಿ ಮುಚ್ಚಿಸುತ್ತೇನೆ ಎಂದು ಹೇಳಿದರು.

ನಮ್ಮ ಎಂಜಿನಿಯರ್ ಗಳು ಕೇವಲ ಸರ್ಟಿಫೀಕೆಟ್ ತೆಗೆದುಕೊಂಡಿದ್ದಾರೆ ಅಷ್ಟೇ. ಆದರೆ ಅವರಿಗಿಂತ ನಮ್ಮ ಗಾರೆ ಕೆಲಸದವರೇ ಚೆನ್ನಾಗಿ ಕೆಲಸ ಮಾಡುತ್ತಾರೆ. ಇದಲ್ಲದೇ ಕಸದ ವಿಚಾರವಾಗಿ ಹೊಸ ಟೆಂಡರ್ ಕರೆಯಬೇಕು. ಇದಕ್ಕೆ ಸಂಬಂಧಪಟ್ಟಂತೆ ಹೊಸ ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ಬ್ಲಾಕ್ ಸ್ಪಾಟ್ ಆಗಿರುವ ಕಡೆ ಗಮನ ಹರಿಸುತ್ತೇನೆ ಎಂದು ತಿಳಿಸಿದರು.

50 ವರ್ಷದ ನಂತರ ಲಿಂಗಾಯತ ಮೇಯರ್:
ಗಂಗಾಂಬಿಕೆ ಲಿಂಗಾಯತ ಸಮುದಾಯದವರಾಗಿದ್ದು, 50 ವರ್ಷಗಳ ನಂತರ ಮೇಯರ್ ಹುದ್ದೆ ಈ ಸಮುದಾಯಕ್ಕೆ ಸಿಕ್ಕಿದೆ. 1960ರಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ಇಬ್ಬರು ಮೇಯರ್ ಆಗಿದ್ದರು. 2003ರಲ್ಲಿ ಬಿ.ಎಸ್. ಪುಟ್ಟರಾಜು ಉಪಮೇಯರ್ ಆಗಿ ಆಯ್ಕೆಯಾಗಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *