ಆ ದೇವರು ನಿನಗೆ ಒಳ್ಳೆ ಬುದ್ಧಿ ಕೊಡಲಿ – ಹಿಜಬ್ ವಿದ್ಯಾರ್ಥಿನಿಗೆ ಖಾದರ್ ತಿರುಗೇಟು

Public TV
1 Min Read

ಮಂಗಳೂರು: ಹಿಜಬ್ ಹೋರಾಟಕ್ಕೆ ಸಹಾಯ ಮಾಡುವಂತೆ ಕೇಳಿಕೊಂಡರೂ ಯು.ಟಿ.ಖಾದರ್ ಸ್ಪಂದಿಸಿಲ್ಲ. ಅವರೆಲ್ಲೋ ಕ್ರಿಕೆಟ್ ಆಡುತ್ತಿದ್ದಾರೆ ಎಂಬ ಕಾಲೇಜು ವಿದ್ಯಾರ್ಥಿನಿ ಗೌಸಿಯಾ ಆರೋಪಕ್ಕೆ ಶಾಸಕ ಯು.ಟಿ.ಖಾದರ್ ತಿರುಗೇಟು ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕಾಲೇಜಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಹಿಜಬ್ ಹೋರಾಟ ಮುಂದುವರಿದಿದೆ. ನಿನ್ನೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ವಿದ್ಯಾರ್ಥಿಗಳು, ನಮಗೆ ಸಲಹೆ, ಸಹಕಾರ ನೀಡುವಂತೆ ನಾಯಕರಾದ ಯು.ಟಿ.ಖಾದರ್ ಅವರನ್ನು ಸಂಪರ್ಕ ಮಾಡಿದ್ದೆವು. ಅವರು ಸಹಾಯ ಮಾಡಿಲ್ಲ ಅವರೆಲ್ಲೋ ಕ್ರಿಕೆಟ್ ಆಡುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದು ಹೇಳಿದ್ದರು. ಇದನ್ನೂ ಓದಿ: ಖಾದರ್ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ, ಅಡ್ಯಾರ್‌ಗೆ ಹೋಗಿ ಕ್ರಿಕೆಟ್ ಆಡ್ತಿದ್ದಾರೆ- ಹಿಜಬ್ ವಿದ್ಯಾರ್ಥಿನಿ ಅಸಮಾಧಾನ

ವಿದ್ಯಾರ್ಥಿನಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶಾಸಕ ಯು.ಟಿ.ಖಾದರ್, ಆ ವಿದ್ಯಾರ್ಥಿನಿ ಸುಳ್ಳು ಹೇಳುತ್ತಿದ್ದಾಳೆ. ಸುಳ್ಳು ಹೇಳಿದ ವಿದ್ಯಾರ್ಥಿನಿಯನ್ನು ದೇವರು ಕ್ಷಮಿಸಲಿ, ಒಳ್ಳೆ ಬುದ್ದಿ ಕೊಡಲಿ. ನಾನು ಆ ವಿದ್ಯಾರ್ಥಿನಿಯ ಸುಳ್ಳನ್ನು ಕ್ಷಮಿಸುತ್ತೇನೆ ಎಂದು ಟಾಂಗ್ ನೀಡಿದ್ದಾರೆ.

ಈ ಸಮಸ್ಯೆ ಪರಿಹರಿಸಲು ನಾನು ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆ ಮಾತನಾಡಿದ್ದೇನೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಜೊತೆ ಚರ್ಚೆ ಮಾಡಿದ್ದೇನೆ. ಕಾಲೇಜಿನ ಪ್ರಾಂಶುಪಾಲರು, ವಿಶ್ವವಿದ್ಯಾನಿಲಯದ ಉಪಕುಲಪತಿಗಳೊಂದಿಗೂ ಮಾತನಾಡಿದ್ದೇನೆ. ದುರುದ್ದೇಶ ಹಾಗೂ ರಾಜಕೀಯವಾಗಿ ಆಕೆಯೆ ಯಾರು ಹೇಳಿಕೊಟ್ಟಿದ್ದಾರೆಯೋ ಗೊತ್ತಿಲ್ಲ, ವಿದ್ಯಾರ್ಥಿನಿಗೆ ಹಲವು ಬಾರಿ ಫೋನ್ ಮಾಡಿದರೂ ರಿಸೀವ್ ಮಾಡಿಲ್ಲ. ನನ್ನ ಫೋನ್ ರಿಸೀವ್ ಮಾಡಿ ರಾಂಗ್ ನಂಬರ್ ಎಂದು ಹೇಳಿದಳು ಎಂದಿದ್ದಾರೆ. ಇದನ್ನೂ ಓದಿ: ಮಂಗಳೂರಿನಲ್ಲಿ ಹಿಜಬ್ ಹೈಡ್ರಾಮಾ – 12 ಮಂದಿ ಮನೆಗೆ ವಾಪಸ್

ಹೊರಗಿನವರ ಹಸ್ತಕ್ಷೇಪ ಯಾಕೆ?: ಸರ್ಕಾರ ಈ ಎಲ್ಲ ಗೊಂದಲಗಳನ್ನು ಬಗೆಹರಿಸಬೇಕು. ಮಕ್ಕಳಿಗೆ ಬಟ್ಟೆ ತೆಗೆದುಕೊಳ್ಳುವವರು, ಕಾಲೇಜಿಗೆ ಶುಲ್ಕ ಕಟ್ಟುವವರು ಪೋಷಕರು. ವಿದ್ಯಾರ್ಥಿಗಳಿಗೆ ಪುಸ್ತಕ ಕೊಡಿಸುವವರು ಪೋಷಕರು. ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳಬೇಕಾದವರು ಪೋಷಕರು ಈಗ ಹೊರಗಿನವರು ಹಸ್ತಕ್ಷೇಪ ಮಾಡುವುದು ಯಾಕೆ? ವಿದ್ಯಾರ್ಥಿಗಳು ಇದೆಲ್ಲವನ್ನು ಬಿಟ್ಟು ಶಿಕ್ಷಣದ ಕಡೆಗೆ ಗಮನ ಕೊಡಲಿ ಎಂದು ಸಲಹೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *