ಅಂದು ತಂದೆ, ಇಂದು ತಾಯಿ – ದೇವಿ ಪ್ರಸಾದದಿಂದ ಮಕ್ಕಳು ಅನಾಥರಾದ್ರು!

Public TV
3 Min Read

ಮೈಸೂರು: ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ದೇವಾಲಯದ ವಿಷ ಪ್ರಸಾದ ಸೇವನೆ ಪ್ರಕರಣದಲ್ಲಿ ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, ಸೋಮವಾರ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ನಿಧನರಾಗಿದ್ದಾರೆ.

ಬೆಳಗ್ಗೆ 8:45ಕ್ಕೆ ಮೋನಿ ಬಾಯಿ ಮೃತಪಟ್ಟಿದ್ದಾರೆ. ಮೈಲಿ ಬಾಯಿ ಪತಿ ಕೃಷ್ಣ ನಾಯಕ್ ಸಹ ಮೊನ್ನೆ ನಿಧನವಾಗಿದ್ದರು. ಮೃತರು ಕೋಟೆಪುದೆ ಗ್ರಾಮದವರು ಎಂದು ತಿಳಿದು ಬಂದಿದೆ. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೈಲಿಬಾಯಿ ಕೂಡ ಮೃತಪಟ್ಟಿದ್ದಾರೆ. ಇತ್ತ ಅಪ್ಪ ಅಮ್ಮನನ್ನ ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ.

ಏನಾಗಿತ್ತು?
ಸುಳವಾಡಿ ಗ್ರಾಮದ ಮಾರಮ್ಮನ ದೇವಸ್ಥಾನಕ್ಕೆ ಮಾರ್ಟಳ್ಳಿಯ ಕೃಷ್ಣ ನಾಯ್ಕ ಪತ್ನಿ ಮೈಲಿ ಬಾಯಿ ಜೊತೆ ಹೋಗಿದ್ದರು. ನಮಗೆ ಕೆಲಸ ಸರಿಯಾಗಿ ಸಿಗುತ್ತಿಲ್ಲ. ನಮ್ಮ ಕುಟುಂಬಕ್ಕೆ ದಯೆ ತೋರು ಎಂದು ಮಾರಮ್ಮನಿಗೆ ಪೂಜೆಯನ್ನೂ ಸಲ್ಲಿಸಿದ್ದರು. ಪೂಜೆ ಬಳಿಕ ದೇಗುಲದಲ್ಲಿ ಪ್ರಸಾದ ವಿತರಣೆ ಮಾಡಿದ್ದು, ಅದನ್ನು ದೇವಸ್ಥಾನದಲ್ಲೇ ಕೃಷ್ಣ ನಾಯ್ಕ ದಂಪತಿ ತಿಂದಿದ್ದರು. ಮನೆಗೆ ಬಂದು ಮಗಳಿಗೆ ಪ್ರಸಾದ ಕೊಟ್ಟಿದ್ದರು. ಆದರೆ ಮಗಳು ಪ್ರಿಯಾ ತಕ್ಷಣ ಪ್ರಸಾದ ತಿನ್ನಲಿಲ್ಲ. ಇದಾದ ಸ್ವಲ್ಪ ಸಮಯದಲ್ಲೇ ಕೃಷ್ಣ ನಾಯ್ಕರ ಪತ್ನಿ ಮೈಲಿ ಬಾಯಿಗೆ ವಾಂತಿ, ತಲೆ ಸುತ್ತು ಶುರುವಾಗಿದೆ. ಆದರೆ ತಾವು ತಿಂದಿದ್ದು ವಿಷಪೂರಿತ ಆಹಾರ ಎಂದು ಗೊತ್ತಾಗದ ಕೃಷ್ಣ ನಾಯ್ಕ ಪತ್ನಿಯ ಬಳಿ, ಬಿಸಿಲಿನಿಂದಾಗಿ ಹೀಗಾಗಿದೆ. ಏನೂ ಆಗಲ್ಲ ಎಂದು ಸಮಾಧಾನ ಮಾಡಿದ್ದರು.

ಸಮಯ ಕಳೆದಂತೆ ಪತ್ನಿಯ ವಾಂತಿ ಮತ್ತಷ್ಟು ಹೆಚ್ಚಾಗುತ್ತಿದ್ದಂತೆ ಪತ್ನಿಯನ್ನು ಕರೆದುಕೊಂಡು ಅವರು ಸಮೀಪದ ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಇವರಂತೆಯೇ ಆಗಮಿಸಿದ್ದವರನ್ನು ನೋಡಿದ್ದಾರೆ. ಅಲ್ಲಿ ವಿಚಾರಿಸಿದಾಗ ಪ್ರಸಾದಲ್ಲಿ ವಿಷ ಸೇರ್ಪಡೆಯಾಗಿರುವ ವಿಚಾರ ಗೊತ್ತಾಗಿದೆ. ಆದರೆ ಅಲ್ಲಿ ಸೂಕ್ತ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ಅವರನ್ನು ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದರು. ಅಷ್ಟರಲ್ಲೇ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಹೀಗಾಗಿ ಅವರನ್ನು ಅಂಬುಲೆನ್ಸ್ ನಲ್ಲಿ ಮೈಸೂರಿಗೆ ಕರೆದುಕೊಂಡು ಹೋಗಲಾಗಿತ್ತು. ಮೈಸೂರು ತಲುಪೋ ಮುನ್ನವೇ ಕೃಷ್ಣ ನಾಯ್ಕ ಅವರಿಗೂ ವಾಂತಿ ಶುರುವಾಗಿದೆ. ಅವರನ್ನು ನೇರವಾಗಿ ಕೆ.ಆರ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅಲ್ಲಿ ವೆಂಟಿಲೇಟರ್ ಕೊರತೆ ಹಿನ್ನೆಲೆಯಲ್ಲಿ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ಬಂದ 5 ನಿಮಿಷಕ್ಕೇ ಅಪ್ಪ ನನ್ನ ಬಿಟ್ಟು ಬಿಟ್ಟು ಹೊರಟು ಹೋದ್ರು ಎಂದು ಕಣ್ಣೀರು ಹಾಕುತ್ತಲೇ ನಡೆದ ಘಟನೆಯನ್ನು ಮೃತ ಕೃಷ್ಣ ನಾಯ್ಕರ ಪುತ್ರಿ ಪ್ರಿಯಾ ವಿವರಿಸಿದ್ದರು.

ನನ್ನ ಅಮ್ಮನೂ ಕ್ರಿಟಿಕಲ್ ಸ್ಟೇಜಲ್ಲಿದ್ದಾರೆ. ಅಪ್ಪ ಅಮ್ಮ ಊರು ಬಿಟ್ಟು ಬೇರೆ ಊರಲ್ಲಿ ಕೆಲಸ ಮಾಡಿ ನಮ್ಮ ವಿದ್ಯಾಭ್ಯಾಸವನ್ನು ನೋಡಿಕೊಳ್ಳುತ್ತಿದ್ದರು. ಆದರೆ ಈಗ ಅಪ್ಪನನ್ನು ಕಳೆದುಕೊಂಡಿದ್ದೇವೆ. ಅಮ್ಮನೂ ಕ್ರಿಟಿಕಲ್ ಸ್ಟೇಜಲ್ಲಿದ್ದಾರೆ. ಏನೂ ಹೇಳೋಕಾಗಲ್ಲ ಅಂತಿದ್ದಾರೆ. ಅವರನ್ನು ಉಳಿಸಿಕೊಡಿ. ಅವರೂ ಹೋದರೆ ನಮ್ಮ ವಿದ್ಯಾಭ್ಯಾಸವೇ ನಿಂತು ಹೋಗುತ್ತದೆ. ನಮ್ಮ ಕುಟುಂಬದಲ್ಲಿ ನಾನು ಚಿಕ್ಕವಳು. ಅಕ್ಕ ಹಾಗೂ ನನಗೊಬ್ಬ ತಮ್ಮ ಇದ್ದಾರೆ. ಎಲ್ರೂ ಹೋದ್ರೆ ನಮ್ಮನ್ನು ಓದಿಸುವವರು ಯಾರಿದ್ದಾರೆ..? ನಮ್ಮ ಅಮ್ಮನ ಚಿಕಿತ್ಸೆಗೆ ನೆರವಾಗಿ. ಯಾರು ಏನೋ ಮಾಡ್ಕೊಂಡು ನಮ್ಮ ಅಪ್ಪನನ್ನು ನನ್ನಿಂದ ಕಿತ್ತುಕೊಂಡಿದ್ದಾರೆ. ನಮ್ಮ ಅಮ್ಮನನ್ನು ಹೇಗಾದರೂ ಮಾಡಿ ಉಳಿಸಿಕೊಡಿ ಸಾರ್ ಎಂದು ಪ್ರಿಯಾ ಗೋಗರೆದಿದ್ದಳು.

ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎಂಬಂತೆ ಏನೂ ಅರಿಯದ ಈ ಮುಗ್ಧ ಮಕ್ಕಳ ಅಪ್ಪ ಯಾರದೋ ಸಿಟ್ಟು, ದ್ವೇಷಕ್ಕೆ ಬಾರದ ಲೋಕಕ್ಕೆ ಹೋಗಿದ್ದಾರೆ. ಆದರೆ ಇಂದು ಅಮ್ಮ ಕೂಡ ಮಕ್ಕಳನ್ನು ತಬ್ಬಲಿ ಮಾಡಿ ಅಗಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *