24 ಗಂಟೆಯಲ್ಲಿ ಬರೋಬ್ಬರಿ 10 ಡೋಸ್ ಕೋವಿಡ್ ಲಸಿಕೆ ಪಡೆದ ಭೂಪ!

Public TV
1 Min Read

ವೆಲ್ಲಿಂಗ್ಟನ್: ಪ್ರಸ್ತುತ ಪರಿಸ್ಥಿತಿಯಲ್ಲಿ ಕೋವಿಡ್-19 ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಲಸಿಕೆಗಳನ್ನು ಪಡೆಯಲು ಪ್ರಪಂಚದಾದ್ಯಂತ ಸೂಚನೆ ನೀಡಲಾಗುತ್ತಿದೆ. ಬಹುತೇಕ ಎಲ್ಲಾ ಕಂಪನಿಗಳೂ ಇಂತಿಷ್ಟು ದಿನಗಳ ಅಂತರದಲ್ಲಿ ಎರಡು ಡೋಸ್ ಪಡೆಯಬಹುದಾದಂತಹ ಲಸಿಕೆಗಳನ್ನೇ ತಯಾರಿಸಿವೆ.

ಆದರೆ ಇಲ್ಲೊಬ್ಬ ವ್ಯಕ್ತಿ ಒಂದೇ ದಿನದಲ್ಲಿ ಬರೋಬ್ಬರಿ 10 ಕೋವಿಡ್-19 ಲಸಿಕೆಗಳನ್ನು ಪಡೆದಿದ್ದು, ವಿಷಯ ತಿಳಿದ ತಜ್ಞರು ಕಳವಳಗೊಂಡಿದ್ದಾರೆ. ನ್ಯೂಜಿಲೆಂಡ್‌ನ ವ್ಯಕ್ತಿ ಈ ರೀತಿಯಾಗಿ ಲಸಿಕೆಗಳನ್ನು ಪಡೆದಿರುವುದಕ್ಕೆ ಮುಖ್ಯ ಕಾರಣ ಇನ್ನೂ ತಿಳಿದು ಬಂದಿಲ್ಲ.

ವ್ಯಕ್ತಿ ಒಂದೇ ದಿನದಲ್ಲಿ ಹಲವಾರು ಲಸಿಕಾ ಕೇಂದ್ರಗಳಿಗೆ ತೆರಳಿ, ಪ್ರತೀ ಡೋಸ್‌ಗೂ ಹಣವನ್ನು ಪಾವತಿ ಮಾಡಿಯೇ ತೆಗೆದುಕೊಂಡಿರುವುದು ತಿಳಿದುಬಂದಿದೆ. ಈ ರೀತಿಯಾಗಿ ಮಿತಿ ಮೀರಿ ಲಸಿಕೆಗಳನ್ನು ತೆಗೆದುಕೊಂಡಿರುವುದು ಅವನ ಜೀವಕ್ಕೆ ಅಪಾಯವಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಕೋವಿಡ್ ಸ್ಫೋಟ- 28 ವಿದ್ಯಾರ್ಥಿಗಳು ಸೇರಿ 49 ಮಂದಿಗೆ ಸೋಂಕು

ಈ ಘಟನೆಗೆ ನ್ಯೂಜಿಲೆಂಡ್ ಆರೋಗ್ಯ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸುತ್ತಿರುವ ಸಚಿವಾಲಯ ಮುಂದೆ ಇಂತಹ ಘಟನೆ ಎಂದಿಗೂ ಮರುಕಳಿಸದಂತೆ ಎಚ್ಚರ ವಹಿಸಿದೆ. ಕೋವಿಡ್-19 ಲಸಿಕೆಗಳನ್ನು ಅತಿಯಾಗಿ ತೆಗೆದುಕೊಂಡಿರುವ ವ್ಯಕ್ತಿಗಳು ಇದ್ದಲ್ಲಿ ತಕ್ಷಣವೇ ವೈದ್ಯರನ್ನು ಭೇಟಿ ಮಾಡಲು ಸೂಚಿಸಿದೆ. ಇಲ್ಲಿಯವರೆಗೆ ಮಿತಿ ಮೀರಿ ಡೋಸ್‌ಗಳನ್ನು ಪಡೆದುಕೊಂಡಿರುವ ವ್ಯಕ್ತಿಗಳ ಯಾವುದೇ ಡೇಟಾ ಸಂಗ್ರಹವಾಗಿಲ್ಲ ಎನ್ನಲಾಗಿದೆ.

ಆಕ್ಲೆಂಡ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ನಿಕ್ಕಿ ಟರ್ನರ್, ಕೋವಿಡ್ ಲಸಿಕೆಯನ್ನು ಹೆಚ್ಚಾಗಿ ಪಡೆದಿರುವ ಯಾವುದೇ ವರದಿಗಳು ಲಭ್ಯವಿಲ್ಲದಿದ್ದರೂ ಇದು ಮಾನವನ ಜೀವಕ್ಕೆ ಒಳ್ಳೆಯದಲ್ಲ. ಇದರಿಂದ ಅಡ್ಡ ಪರಿಣಾಮಗಳು ಹೆಚ್ಚಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದನ್ನೂ ಓದಿ: ಮಂಗಳಮುಖಿಯರ ಗ್ಯಾಂಗ್ ಮಧ್ಯೆ ಮಾರಾಮಾರಿ – 6 ಮಂದಿಗೆ ಗಾಯ

Share This Article
Leave a Comment

Leave a Reply

Your email address will not be published. Required fields are marked *