ಮದಲೂರು ಕೆರೆಗೆ ನೀರು ಬಿಡಲು ಸಾಧ್ಯವಿಲ್ಲ- ಮಾಧುಸ್ವಾಮಿ ಮತ್ತೊಮ್ಮೆ ಸ್ಪಷ್ಟನೆ

Public TV
2 Min Read

ತುಮಕೂರು: ಶಿರಾ ತಾಲೂಕು ಮದಲೂರು ಕೆರೆಗೆ ಯಾವುದೇ ಕಾರಣಕ್ಕೂ ನೀರು ಬೀಡಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್ ಮುಖಂಡ ಟಿ.ಬಿ.ಜಯಚಂದ್ರ ಅವರ ರಾಜಕೀಯ ದಾಳಕ್ಕೆ ಬಲಿಯಾಗಲು ನಾನು ತಯಾರಿಲ್ಲ. ಮದಲೂರು ಕೆರೆಗೆ ನೀರು ಹರಿಸಲಾಗದು, ಏನಾದರೂ ಮಾಡಿಕೊಳ್ಳಲಿ ಎಂದು ಸುದ್ದಿಗಾರರಿಗೆ ತಿಳಿಸಿದರು. ಶಿರಾ ತಾಲೂಕಿಗೆ ಹಂಚಿಕೆಯಾಗಿರುವ 0.9 ಟಿಎಂಸಿ ನೀರನ್ನು ಆ ಭಾಗಕ್ಕೆ ಬಳಸಿಕೊಳ್ಳುವಂತೆ ಹೈಕೋರ್ಟ್ ಹೇಳಿದೆ. ಹಂಚಿಕೆಯಾಗಿರುವ ನೀರನ್ನು ಕಳ್ಳಂಬೆಳ್ಳ ಕೆರೆಗೆ ತುಂಬಿಸಿ, ಶಿರಾ ಕೆರೆಗೆ ನೀರು ಹರಿಸುವುದರ ಒಳಗೆ ಮುಗಿದು ಹೋಗುತ್ತದೆ. ಮದಲೂರು ಕೆರೆಗೆ ಎಲ್ಲಿಂದ ನೀರು ಕೊಡುವುದು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮದಲೂರು ಕೆರೆಗೆ ನೀರು ಬಿಡಲ್ಲ ಎನ್ನಲು ಮಾಧುಸ್ವಾಮಿಗೆ ನೈತಿಕತೆ ಇಲ್ಲ: ಟಿ.ಬಿ.ಜಯಚಂದ್ರ

ಜಯಚಂದ್ರ ಅವರು ಶಿರಾ ಕೆರೆಗೆ ನೀರು ಬಿಡುವುದು ಬೇಡ. ಅದೇ ನೀರನ್ನು ಮದಲೂರು ಕೆರೆಗೆ ಹರಿಸಿ ಎಂದು ಹೇಳಿದರೆ ಆಗ ಮಾತ್ರ ನೀರು ಬಿಡಬಹುದು. ಇದಕ್ಕೆ ಶಿರಾ ನಗರದ ಜನರನ್ನು ಒಪ್ಪಿಸಿಕೊಂಡು ಬರಲಿ ಎಂದು ಸವಾಲು ಹಾಕಿದರು. 0.9 ಟಿಎಂಸಿ ನೀರನ್ನು ತಾಲೂಕಿನ ಎಲ್ಲಿಗೆ ಬೇಕಾದರೂ ಹರಿಸಿಕೊಳ್ಳಲಿ. ಶಿರಾ ನಗರದಲ್ಲಿ 60 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಅಲ್ಲಿನ ಜನರು ಕುಡಿಯಲು ಕೆರೆ ನೀರನ್ನೇ ಆಶ್ರಯಿಸಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಶಿರಾ ಕೆರೆಗೆ ಬಿಡದೆ ಬೇರೆಡೆಗೆ ಕೊಡಲು ಸಾಧ್ಯವಿಲ್ಲ. ಮದಲೂರು ಕೆರೆ ಬಳಿ ಕುಡಿಯುವ ನೀರು ಸರಬರಾಜು ಮಾಡಲು ಯಾವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಸುಮ್ಮನೆ ಕೆರೆಗೆ ಬಿಡಲಾಗುತ್ತದೆಯೆ? ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲೇ ನೀರು ಕೊಡಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮಯುದ್ಧ- ಎಂ.ಬಿ.ಪಾಟೀಲ್ ಧರ್ಮ ದಾಳಕ್ಕೆ ಕಾಂಗ್ರೆಸ್ ಮೌನ

ಶಿರಾ, ಮದಲೂರು ನಾಲೆ ಮಧ್ಯದಲ್ಲಿ ಸಾಕಷ್ಟು ಬ್ಯಾರೇಜ್‍ಗಳನ್ನು ಜಯಚಂದ್ರ ನಿರ್ಮಿಸಿದ್ದಾರೆ. ಈ ಬ್ಯಾರೇಜ್‍ಗಳನ್ನು ತುಂಬಿಸಿ ಮುಂದಕ್ಕೆ ನೀರು ತೆಗೆದುಕೊಂಡು ಹೋಗಲು ಸಾಧ್ಯವೇ ಇಲ್ಲ. ಬ್ಯಾರೇಜ್‍ಗಳನ್ನು ತೆರವುಮಾಡಿ, ಪೈಪ್‍ಲೈನ್ ನಿರ್ಮಿಸಿದರೆ ಈಗಲೂ ನೀರು ಬಿಡಲು ಸಿದ್ಧ. ಆಗ ಬೇಕಾದರೆ ರಾಜಿಮಾಡಿಕೊಳ್ಳುತ್ತೇನೆ. ಈಗ ಪೈಪ್‍ಲೈನ್ ನಿರ್ಮಿಸಿ, ನೀರು ಬಿಡುವುದು ಅಸಾಧ್ಯದ ಕೆಲಸ. ಅವರು ಮಾಡಿದ ಅವಾಂತರದಿಂದ ಇಷ್ಟೆಲ್ಲ ಸಮಸ್ಯೆಗಳಾಗಿವೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *