ಬಾಡೂಟವನ್ನೂ ಭಯೋತ್ಪಾದನೆಯಂತೆ ವೈಭವೀಕರಿಸುತ್ತಿದೆ, ಕಾಂಗ್ರೆಸ್‌ ಹೊಸತೊಡಕು ವಿರೋಧಿ: ಜೆಡಿಎಸ್‌ ಕಿಡಿ

Public TV
2 Min Read

ಬೆಂಗಳೂರು: ಬಾಡೂಟವನ್ನೂ ಭಯೋತ್ಪಾದನೆಯಂತೆ ವೈಭವೀಕರಿಸುತ್ತಿದೆ. ಕಾಂಗ್ರೆಸ್‌ (Congress) ಹೊಸತೊಡಕು ವಿರೋಧಿ, ಹಿಂದೂ ವಿರೋಧಿ ಕಾಂಗ್ರೆಸ್‌ ಎಂದು ಜೆಡಿಎಸ್‌ (JDS) ಕಿಡಿಕಾರಿದೆ.

ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರ ಬಿಡದಿ ತೋಟದ ಮನೆಯಲ್ಲಿ ಔತಣಕೂಟವನ್ನು ಚುನಾವಣಾಧಿಕಾರಿಗಳು ರದ್ದು ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್‌ ಆಕ್ರೋಶ ವ್ಯಕ್ತಪಡಿಸಿ ಊಟಕ್ಕೂ ಕಾಂಗ್ರೆಸ್ ಕಲ್ಲು ಹಾಕಿ ವಿಕೃತಿ ಮೆರೆದಿದೆ ಎಂದು ಬರೆದಿದೆ.

ಪೋಸ್ಟ್‌ನಲ್ಲಿ ಏನಿದೆ?
ಯುಗಾದಿ (Ugadi) ಹಿಂದೂಗಳ ಹೊಸವರ್ಷ. ಯುಗಾದಿ ಹಿಂದೂಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ಅಸ್ಮಿತೆ. ಈ ಹಬ್ಬದ ಮರುದಿನದ ಸಂಭ್ರಮ ಹೊಸತೊಡಕು(Hosatodaku) ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಕಾಂಗ್ರೆಸ್‌ ನಮ್ಮ ಸಂಪ್ರದಾಯ, ಸಂಸ್ಕೃತಿ, ಆಚರಣೆಯ ಮೇಲೆಯೂ ‘ಕಾಕದೃಷ್ಟಿ’ ಬೀರಿದೆ. ಬಾಡೂಟವನ್ನೂ ಭಯೋತ್ಪಾದನೆಯಂತೆ ವೈಭವೀಕರಿಸುತ್ತಿದೆ.

ಪ್ರತೀ ಹಿಂದೂ ಮನೆಯಲ್ಲಿ ನಡೆಯುವಂತೆ ಕುಮಾರಸ್ವಾಮಿ ಅವರ ಮನೆಯಲ್ಲಿಯೂ ಹೊಸತೊಡಕು ಆಚರಣೆ ನಡೆಯುತ್ತಿದೆ. ಅದರಲ್ಲಿ ವಿಶೇಷವೇನೂ ಇಲ್ಲ. ಹೊಸತೊಡಕು ಊಟಕ್ಕೆ ಸಂಬಂಧಿಕರು, ಸ್ನೇಹಿತರು ಹಾಗೂ ರಾಜಕೀಯ ಸಹಪಾಠಿಗಳನ್ನು ಅವರು ಆಹ್ವಾನಿಸಿದ್ದಾರೆ. ಮಾಂಸದ ಅಡುಗೆ ಈ ದಿನದ ಸಾಮಾನ್ಯ ತಿನಿಸು. ಈ ಊಟಕ್ಕೂ ಕಾಂಗ್ರೆಸ್ ಕಲ್ಲು ಹಾಕಿ ವಿಕೃತಿ ಮೆರೆದಿದೆ.  ಇದನ್ನೂ ಓದಿ: ಕೇಜ್ರಿವಾಲ್‌ ಬಂಧನ ಬಳಿಕ ಎಎಪಿಗೆ ಮತ್ತೊಂದು ಶಾಕ್‌ – ಸಚಿವ ರಾಜ್‌ಕುಮಾರ್‌ ಆನಂದ್‌ ರಾಜೀನಾಮೆ

ಮತಕ್ಕಾಗಿ ಹಣ, ಹೆಂಡ, ಸೀರೆ, ಕುಕ್ಕರ್, ಫ್ರಿಜ್ಡ್, ಕೂಪನ್ ಹಂಚುವ ಸತ್ಸಂಪ್ರದಾಯ ರೂಢಿಸಿಕೊಂಡಿರುವ ಕಾಂಗ್ರೆಸ್, ಕಾವೇರಿ ಅಮ್ಮನ ಹೆಸರಿನಲ್ಲಿ ನಡೆಸಿದ ಮೇಕೆದಾಟು ಪಾದಯಾತ್ರೆಯಲ್ಲಿ ನದಿಯಂತೆ ಹರಿಸಿದ ಮಾಂಸ, ಮದ್ಯದ ಹೊಳೆಯನ್ನು ಕಾಣದವರು ಯಾರೂ ಇಲ್ಲ. ಆದರೆ, ಆ ಪಕ್ಷದ ಕಾಮಾಲೆ ಕಣ್ಣು ಹಿಂದೂಗಳ ಹಬ್ಬಗಳ ಮೇಲೆಯೇ ಬಿದ್ದಿದೆ. ಜಾತಿ, ಧರ್ಮಗಳ ತುಷ್ಠೀಕರಣ ಜಾಡ್ಯ ಕಾಂಗ್ರೆಸ್ ಪಕ್ಷವನ್ನು ಅಂಟಿಕೊಂಡಿದೆ.

ಕಾಂಗ್ರೆಸ್ ಸೋಲಿನ ಹತಾಶೆಯಿಂದ ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷಗಳನ್ನು ಟೀಕಿಸುವ ಭರದಲ್ಲಿ ನಮ್ಮ ಹಿಂದೂ ಸಂಪ್ರದಾಯದ ಬಗ್ಗೆ ಅವಹೇಳನ ಮಾಡಿದೆ. ಅದರ ಕೊಳಕುತನ ಅದರ ಟ್ವೀಟ್ ನಲ್ಲಿ ಎದ್ದು ಕಾಣುತ್ತಿದೆ. ನಿರಂತರವಾಗಿ ಹಿಂದೂ ವಿರೋಧಿ, ದ್ರೋಹಿ ಆಗಿರುವ ಕಾಂಗ್ರೆಸ್ ಗೆ ಹೊಸತೊಡಕುಗಿಂತ ಇಫ್ತಾರ್ ಕೂಟದಲ್ಲಿಯೇ ಹೆಚ್ಚು ಪ್ರೀತಿ. ಜನ್ಮದಾರಭ್ಯ ಬಂದಿದ್ದನ್ನು ನಾವಂತೂ ಅವಹೇಳನ ಮಾಡುವುದಿಲ್ಲ.

Share This Article