ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಭೇಟಿ ನೀಡಬಹುದು – ಜಿಲ್ಲಾಡಳಿತದಿಂದ ನಿರ್ಬಂಧ ತೆರವು

Public TV
2 Min Read

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳಾದ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಈ ಹಿಂದೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳದ ನಿಬರ್ಂಧ ಹಿಂಪಡೆದು ಸಾರ್ವಜನಿಕರಿಗೆ ಮುಕ್ತ ಪ್ರವೇಶಕ್ಕೆ ಹಾಗೂ ಸೇವೆಗಳನ್ನು ನಡೆಸಲು ಷರತ್ತುಗಳನ್ನು ಪಾಲಿಸುವ ನಿಬಂಧನೆಗಳಿಗೊಳಪಟ್ಟು ಜಿಲ್ಲಾಡಳಿತ ಅನುಮತಿ ನೀಡಿದೆ. ಇದನ್ನೂ ಓದಿ:  ಗಾಂಧಿ ಜಯಂತಿಯಂದು 31ನೇ ಜಿಲ್ಲೆ ವಿಜಯನಗರಕ್ಕೆ ಅಧಿಕೃತ ಚಾಲನೆ

ಏನಿದು ಷರತ್ತು?
ಎರಡೂ ದೇವಾಲಯಗಳಲ್ಲಿ ಕೋವಿಡ್ ಸಮುಚಿತ ವರ್ತನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು. ದೇವಾಲಯದ ಆಡಳಿತ ವರ್ಗವು ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸುವ ಜವಾಬ್ದಾರಿಯನ್ನು ಹೊಂದಿರಬೇಕು. ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುವ ಆಡಳಿತ ಮಂಡಳಿ, ಅರ್ಚಕರು, ಸಿಬ್ಬಂದಿ ಸೇರಿದಂತೆ ಎಲ್ಲಾ ವರ್ಗದವರು ಪ್ರತಿ 15 ದಿನಗಳಿಗೊಮ್ಮೆ ಆರ್ ಟಿಪಿಸಿಆರ್ ಟೆಸ್ಟ್ ಮಾಡಿಸಿ ನೆಗೆಟಿವ್ ವರದಿಯನ್ನು ಹೊಂದಿರತಕ್ಕದ್ದು ಎಂದು ಆದೇಶವನ್ನು ಹೊರಡಿಸಿದೆ.

ದೇವಾಲಯಗಳಿಗೆ ಸೇವೆಗೆ ಬರುವ ಭಕ್ತರು 2 ಡೋಸ್ ಕೋವಿಡ್ ಲಸಿಕೆ ಪಡೆದಿದ್ದರೂ ಸಹ ಕಡ್ಡಾಯವಾಗಿ 72 ಗಂಟೆಗಳಿಗಿಂತ ಮುಂಚಿತವಾಗಿ ಕೊರೊನಾ ನೆಗೆಟಿವ್ ವರದಿ ಹೊಂದಿದ್ದಲ್ಲಿ ಮಾತ್ರ ಸೇವೆಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದೆ. ಇದನ್ನೂ ಓದಿ: ವಿದ್ಯಾಪೀಠಕ್ಕೆ ಉತ್ತಮ ಪ್ರತಿಕ್ರಿಯೆ – ಎರಡನೇ ದಿನದ ಕಾರ್ಯಕ್ರಮಗಳು ಏನು?

ದೇವಾಲಯಗಳಿಗೆ ಬರುವ ಭಕ್ತರಿಗೆ ಕೋವಿಡ್ ಲಸಿಕೆಯನ್ನು ಪಡೆಯುವ ಬಗ್ಗೆ ಸಲಹೆಗಳನ್ನು ನೀಡುವ ಕುರಿತು ಹಾಗೂ ಜಾಗೃತಿಯನ್ನು ಮೂಡಿಸುವ ಸಲುವಾಗಿ ಅಲ್ಲಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು. ದೇವಾಲಯಕ್ಕೆ ಬರುವ ಸಾರ್ವಜನಿಕರು ಕೋವಿಡ್ ಲಸಿಕೆ ಪಡೆಯದಿದ್ದಲ್ಲಿ, ಅಂತಹವರುಗಳಿಗೆ ಲಸಿಕೆ ನೀಡಲು ಅನುಕೂಲವಾಗುವಂತೆ ಸಂಬಂಧಪಟ್ಟ ತಾಲೂಕು ಆರೋಗ್ಯಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ದೇವಾಲಯಗಳಲ್ಲಿ ಕೋವಿಡ್ ಲಸಿಕಾ ಕೇಂದ್ರಗಳನ್ನು ತೆರೆಯಲು ಹಾಗೂ ಜನಸಂದಣಿಯಾಗದಂತೆ ಲಸಿಕೆ ನೀಡಲು ಕ್ರಮವಹಿಸಬೇಕು. ಇದನ್ನೂ ಓದಿ: ದಾರಿ ಮಧ್ಯೆ ಹೋಟೆಲ್‍ನಲ್ಲಿ ಸಾರ್ವಜನಿಕರಂತೆ ಟೀ ಕುಡಿದ ಸಿಎಂ

ಮೇಲ್ಕಂಡ ದೇವಾಲಯಗಳಲ್ಲಿ ನಡೆಯುವಂತಹ ಪ್ರಮುಖ ಸೇವೆಗಳಾದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ಪಂಚಾಮೃತ ಮಹಾಭಿಷೇಕ, ನಾಗಪ್ರತಿಷ್ಠೆ ಸೇವೆಗಳನ್ನು ಆದಷ್ಟು ಮಿತಿಗೊಳಿಸುವುದು ಹಾಗೂ ಜನಸಂದಣಿಯಾಗದಂತೆ ದಿನವೊಂದಕ್ಕೆ ದೇವಾಲಯದಲ್ಲಿ ಸ್ಥಳವನ್ನು ಹೊಂದಿಕೊಂಡು ಕನಿಷ್ಠ ಸಂಖ್ಯೆಯಲ್ಲಿ ಸೇವೆಗಳನ್ನು ನಡೆಸಲು ವ್ಯವಸ್ಥೆ ಮಾಡುವಂತೆ ಜಿಲ್ಲಾ ದಂಡಾಧಿಕಾರಿಗಳು, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಆದೇಶ ಹೊರಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *