7 ಸಾವಿರ ರನ್‌ ಪೂರೈಸಿದ ರಾಹುಲ್‌ – ಕೊಹ್ಲಿ, ರೋಹಿತ್‌ ಸೇರಿ ಹಲವರ ದಾಖಲೆ ಉಡೀಸ್‌

Public TV
2 Min Read

ಲಕ್ನೋ: ಇಲ್ಲಿನ ಅಟಲ್‌ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಶನಿವಾರ ಗುಜರಾತ್‌ ಟೈಟಾನ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಮಂದಗತಿಯ ಬ್ಯಾಟಿಂಗ್‌ ನಡೆಸಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ನಾಯಕ ಕೆ.ಎಲ್‌ ರಾಹುಲ್‌ (KL Rahul) 68ರನ್‌ ಗಳಿಸುವ ಮೂಲಕ ಟಿ20 ಕ್ರಿಕೆಟ್‌ (T20 Cricket) ಇತಿಹಾಸದಲ್ಲಿ 7 ಸಾವಿರ ರನ್‌ ಪೂರೈಸಿದ ವಿಶೇಷ ಸಾಧನೆ ಮಾಡಿದ್ದಾರೆ. ಈ ಮೂಲಕ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ (Rohit Sharma), ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat kohli), ಶಿಖರ್‌ ಧವನ್‌, ಸುರೇಶ್‌ ರೈನಾ ಅವರ ದಾಖಲೆಗಳನ್ನ ಉಡೀಸ್‌ ಮಾಡಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ 7 ಸಾವಿರ ರನ್‌ ಪೂರ್ಣಗೊಳಿಸಲು ಕೆ.ಎಲ್‌ ರಾಹುಲ್‌ 210 ಪಂದ್ಯಗಳ 197 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ. ಆ ಮೂಲಕ ವೇಗವಾಗಿ 7,000 ರನ್ ಪೂರ್ಣಗೊಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಆರ್‌ಸಿಬಿ ಮಾಜಿ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ 212 ಇನ್ನಿಂಗ್ಸ್‌, ಶಿಖರ್‌ ಧವನ್‌ 246, ಸುರೇಶ್‌ ರೈನಾ 251, ರೋಹಿತ್‌ ಶರ್ಮಾ 258 ಇನ್ನಿಂಗ್ಸ್‌ಗಳಲ್ಲಿ ಈ ದಾಖಲೆ ಮಾಡಿದ್ದರೆ, ಕೆ.ಎಲ್‌ ರಾಹುಲ್‌ ಕೇವಲ 197 ಇನ್ನಿಂಗ್ಸ್‌ಗಳಲ್ಲೇ ಈ ದಾಖಲೆ ಮಾಡುವ ಮೂಲಕ ಮೈಲುಗಲ್ಲು ಸಾಧಿಸಿದ್ದಾರೆ.

2020ರ ಐಪಿಎಲ್ ಟೂರ್ನಿಯಲ್ಲಿ ಆರೆಂಜ್ ಕ್ಯಾಪ್ ವಿನ್ನರ್‌ ಆಗಿದ್ದ ರಾಹುಲ್, 116 ಐಪಿಎಲ್‌ ಪಂದ್ಯಗಳಿಂದ 4 ಶತಕ, 33 ಅರ್ಧಶತಕ ಗಳೊಂದಿಗೆ 4,151 ರನ್ ಬಾರಿಸಿದ್ದರೆ. ಒಟ್ಟಾರೆ 210 ಪಂದ್ಯಗಳಿಂದ 6 ಶತಕ, 61 ಅರ್ಧಶತಕಗಳ ನೆರವಿನಿಂದ 7,054 ರನ್ ಚಚ್ಚಿದ್ದಾರೆ. ಇದರಲ್ಲಿ 72 ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 2,265 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು 2 ಶತಕ ಹಾಗೂ 22 ಅರ್ಧಶತಕಗಳೂ ಸೇರಿವೆ. ಅಜೇಯರಾಗಿ 110 ರನ್‌ ಗಳಿಸಿದ್ದು ಇವರ ವೈಯಕ್ತಿಕ ಗರಿಷ್ಠ ಸ್ಕೋರ್‌ ಆಗಿದೆ.

ವಿಶ್ವ ಕ್ರಿಕೆಟಿಗರ ಪೈಕಿ ರಾಹುಲ್‌ ವೇಗವಾಗಿ 7 ಸಾವಿರ ರನ್‌ ಗಳಿಸಿದ ಆಟಗಾರರ ಸಾಲಿನಲ್ಲಿ 3ನೇ ಸ್ಥಾನ ಅಲಂಕರಿಸಿದ್ದಾರೆ. ಪಾಕಿಸ್ತಾನದ ಬಾಬರ್ ಅಜಂ 187 ಇನಿಂಗ್ಸ್‌ಗಳಲ್ಲಿಯೇ ಈ ಮೈಲುಗಲ್ಲು ಸಾಧಿಸಿದ್ದರು.

Share This Article