ಘೋಷಣೆಯಲ್ಲೇ ಉಳಿದ ಹಾರಂಗಿ ಜಲಾಶಯದ ಹೂಳು ತೆಗೆಯುವ ಕ್ರಮ

Public TV
2 Min Read

ಮಡಿಕೇರಿ: ಕೊಡಗು ಜಿಲ್ಲೆ 2018ರಲ್ಲಿ ಪ್ರವಾಹ, ಭೂಕುಸಿತದಿಂದ ಅಕ್ಷರಶಃ ಕುಸಿದು ಹೋಗಿತ್ತು. ಅದರಲ್ಲೂ ಮಡಿಕೇರಿ ತಾಲೂಕಿನ ಹಟ್ಟಿಹೊಳೆಯಿಂದ ಗಾಳಿಬೀಡು ತನಕ ಒಂದರ್ಥದಲ್ಲಿ ಸರ್ವನಾಶವೇ ಆಗಿತ್ತು. ಅದಕ್ಕೆ ಮುಖ್ಯವಾಗಿ ಹಾರಂಗಿ ಜಲಾಶಯದಲ್ಲಿ ಅಪಾರ ಪ್ರಮಾಣದ ಹೂಳು ತುಂಬಿದ್ದೇ ಕಾರಣ ಎಂದು ಅಂದಾಜಿಸಲಾಗಿತ್ತು.

ಹೀಗಾಗಿಯೇ 2018-19ರ ಬಜೆಟ್ ನಲ್ಲಿ ಅಂದಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಹಾರಂಗಿ ಜಲಾಶಯದ ಹೂಳು ತೆಗೆಯುವುದಕ್ಕೆ 130 ಕೋಟಿ ರೂಪಾಯಿ ಘೋಷಿಸಿದ್ದರು. ಅದಾದ ಬಳಿಕ 2020 ರ ಮೇ, ಏಪ್ರಿಲ್ ತಿಂಗಳಿನಲ್ಲಿ ಬೋಟ್ ಮತ್ತು ಏರಿಯಲ್ ಸರ್ವೇ ಮಾಡಲಾಗಿತ್ತು. ಅದು ಬಿಟ್ಟರೆ ಇದುವರೆಗೆ ಹೂಳು ತೆಗೆಯುವುದಕ್ಕೆ ಕ್ರಮಕೈಗೊಳ್ಳಲೇ ಇಲ್ಲ. ಇದನ್ನೂ ಓದಿ:  ಮಾಲೀಕ ಯುದ್ಧಕ್ಕೆ ಹೋಗಿದ್ದಾರೆ, ಅವರ ಮಕ್ಕಳನ್ನು ಬಿಟ್ಟು ನಾನು ಬರಲ್ಲ ಎಂದ ವಿದ್ಯಾರ್ಥಿನಿ!

ಹೌದು ಇದೀಗ ಮತ್ತೊಂದು ರಾಜ್ಯ ಬಜೆಟ್‍ನ ಹೊಸ್ತಿಲಿನಲ್ಲಿದ್ದೇವೆ. ಆದರೆ ಹೂಳು ತೆಗೆಯುವುದಕ್ಕಾಗಿ ಘೋಷಣೆಯಾಗಿ 3 ವರ್ಷಗಳೇ ಕಳೆದಿವೆ. ಈ ಬಾರಿಯೂ ಹೂಳು ತೆಗೆಯುವ ಯಾವ ಲಕ್ಷಣಗಳು ಕಾಣುತ್ತಿಲ್ಲ. 8.5 ಟಿಎಂಸಿ ಹಾರಂಗಿ ಜಲಾಶಯದಲ್ಲಿ ಈಗಲೂ 7 ಟಿಎಂಸಿ ಅಡಿ ನೀರು ಇದೆ. ಫೆಬ್ರವರಿ ತಿಂಗಳ ಕೊನೆಯಿಂದ ಕಾಲುವೆಗಳಿಗೆ ನೀರು ಹರಿಸಲಿದ್ದು, ಏಪ್ರಿಲ್ ಮೇ ತಿಂಗಳಿನಲ್ಲಿ ನೀರೇನೋ ಒಂದಷ್ಟು ಪ್ರಮಾಣದಲ್ಲಿ ಕಡಿಮೆ ಆಗಬಹುದು. ಆದರೆ ವಿಪರ್ಯಾಸವೆಂದರೆ ಹೂಳು ತೆಗೆಯುವುದಕ್ಕೆ ಸಂಬಂಧಿಸಿದಂತೆ ಇದುವರೆಗೆ ಟೆಂಡರ್ ಆಗಿಲ್ಲ.

ಇನ್ನೂ ಒಂದು ವೇಳೆ ಟೆಂಡರ್ ಆಗಿ ಯಾರಾದರೂ ಹೂಳು ತೆಗೆಯುವುದಕ್ಕೆ ಮುಂದೆ ಬಂದರೂ ಅದು ಜೂನ್ ತಿಂಗಳಲ್ಲಿ ಆರಂಭವಾಗುವ ಮಳೆಗಾಲಕ್ಕೂ ಮುನ್ನ ಮುಗಿಯಲು ಸಾಧ್ಯವಿಲ್ಲ. ಏಕೆಂದರೆ 8.5 ಟಿಎಂಸಿ ಸಾಮಥ್ರ್ಯದ ಜಲಾಶಯದಲ್ಲಿ ಬರೋಬ್ಬರಿ ಎರಡು ಟಿಎಂಸಿ ಪ್ರಮಾಣದಷ್ಟು ಹೂಳು ತುಂಬಿದೆ. ಹೀಗಾಗಿ ಜಲಾಶಯದ ಸಾಮಥ್ರ್ಯ ಕಡಿಮೆಯಾಗಿದ್ದು, ತೀವ್ರ ಮಳೆಯಾದಾಗಲೆಲ್ಲ ಜಲಾಶಯಕ್ಕೆ ಹರಿದು ಬರುವ ಅಷ್ಟೂ ನೀರನ್ನು ನದಿಗೆ ಹರಿಸಲಾಗುತ್ತದೆ. ಹೀಗಾಗಿ ಕುಶಾಲನಗರ, ಕೂಡಿಗೆ ಕಣಿವೆ ಗ್ರಾಮಗಳ ಸುತ್ತಮುತ್ತ ಪ್ರತೀ ವರ್ಷ ಪ್ರವಾಹ ಸೃಷ್ಟಿಯಾಗುತ್ತಿದೆ. ಇದು ಈ ಬಾರಿಯೂ ಎದುರಾಗುವ ಎಲ್ಲಾ ಸಾಧ್ಯತೆಗಳಿವೆ. ಇದನ್ನೂ ಓದಿ: ಮತ್ತೊಬ್ಬ ರಾಜಕಾರಣಿ ಪುತ್ರ ಚಂದನವನದಲ್ಲಿ ‘ಗತವೈಭವ’ ಮಾಡಲು ಎಂಟ್ರಿ!

ಒಟ್ಟಿನಲ್ಲಿ ಜಲಾಶಯದಲ್ಲಿ ಭಾರೀ ಪ್ರಮಾಣದಲ್ಲಿ ತುಂಬಿರುವ ಹೂಳನ್ನು ತೆಗೆದು ಪ್ರವಾಹದ ಆತಂಕ ತಪ್ಪಿಸುವುದಕ್ಕಾಗಿ 130 ಕೋಟಿ ರೂಪಾಯಿಯನ್ನು ಬಜೆಟ್‍ನಲ್ಲಿಯೇ ಘೋಷಿಸಿ ಮೂರು ವರ್ಷಗಳಾಗಿದ್ದರೂ ಅದು ಘೋಷಣೆಯಾಗಿ ಉಳಿದಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *