ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಬಾಲಕಿಯರ ಮೇಲುಗೈ – ಗ್ರಾಮೀಣ ಮಕ್ಕಳು ಟಾಪ್

Public TV
2 Min Read

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಶೇ.61.88ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪಿಯುಸಿ ಬೋರ್ಡ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಫಲಿತಾಂಶ ಪ್ರಕಟ ಮಾಡಿದರು.

2020ರಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇ. 61.80ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ಬಾರಿ 61.88ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ ಫಲಿತಾಂಶದಲ್ಲಿ ಉತ್ತೀರ್ಣ ಪ್ರಮಾಣ 0.08ರಷ್ಟು ಏರಿಕೆಯಾಗಿದೆ. ಇದನ್ನೂ ಓದಿ: ದ್ವಿತೀಯ ಪಿಯು ಫಲಿತಾಂಶ ಪ್ರಕಟ – ಟಾಪರ್ಸ್ ಯಾರ‍್ಯಾರು ಗೊತ್ತಾ?

ಕೋವಿಡ್ ಭೀತಿಯ ನಡುವೆಯು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸಲಾಯಿತು. ಹೊಸ ವಿದ್ಯಾರ್ಥಿಗಳು, ಪುನರಾವರ್ತಿತ ಹಾಗೂ ಖಾಸಗಿ ವಿದ್ಯಾರ್ಥಿಗಳು ಸೇರಿದಂತೆ ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 6,83,563 ವಿದ್ಯಾರ್ಥಿಗಳ ಪೈಕಿ 4,22,966 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ. 48.71ರಷ್ಟು ವಿದ್ಯಾರ್ಥಿಗಳು, ವಾಣಿಜ್ಯ ಶೇ. 64.97ರಷ್ಟು ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ. 72.53ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದನ್ನೂ ಓದಿ: ನಾಳೆ ಬೆಂಗ್ಳೂರಿನ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಗಿಲ್ಲ ಅವಕಾಶ – ಯಾವೆಲ್ಲ ರಸ್ತೆಗಳು?

2020ರಲ್ಲಿ ನಗರ ಭಾಗದಲ್ಲಿನ ಕಾಲೇಜ್‍ಗಳ ಫಲಿತಾಂಶ ಉತ್ತಮವಾಗಿತ್ತು. ಈ ಬಾರಿ ಗ್ರಾಮಾಂತರ ಪ್ರದೇಶಗಳ ಕಾಲೇಜ್‍ಗಳ ಫಲಿತಾಂಶ ಉತ್ತಮವಾಗಿದೆ. ರಾಜ್ಯದ 56 ಕಾಲೇಜ್‍ಗಳಲ್ಲಿ ಶೇ.100ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 91,106 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಥಮ ದರ್ಜೆಯಲ್ಲಿ 2,14,115, ದ್ವಿತೀಯ ದರ್ಜೆ 68,444 ಹಾಗೂ 49,301 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಹಿಂದಿನ ವರ್ಷಗಳಂತೆ ಕರಾವಳಿ ಜಿಲ್ಲೆಗಳಲ್ಲಿ ಈ ಬಾರಿಯು ಉತ್ತೀರ್ಣ ಪ್ರಮಾಣ ಉತ್ತಮವಾಗಿದೆ. ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ಉಡುಪಿ ದ್ವಿತೀಯ ಸ್ಥಾನ ಹಾಗೂ ವಿಜಯಪುರ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ರಾಯಚೂರು, ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳು ಕ್ರಮವಾಗಿ ಕೊನೆಯ ಮೂರು ಸ್ಥಾನದಲ್ಲಿವೆ. ಉತ್ತೀರ್ಣ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳ ಫಲಿತಾಂಶ ಸುಧಾರಣೆ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು. ಇದನ್ನೂ ಓದಿ: ಅಂಗನವಾಡಿ ಶಿಕ್ಷಕಿಯಾಗಿ ದಲಿತೆ ನೇಮಕವಾಗಿದ್ದಕ್ಕೆ ಮಕ್ಕಳನ್ನು ಕಳುಹಿಸದ ಮೇಲ್ಜಾತಿ ಪಾಲಕರು!

ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಪ್ರತಿಯನ್ನು ಪಡೆಯಲು ಇಂದಿನಿಂದಲೇ ಅವಕಾಶ ಕಲ್ಪಿಸಲಾಗಿದೆ. ಅನುತ್ತೀರ್ಣ ವಿದ್ಯಾರ್ಥಿಗಳು ಮರುಮೌಲ್ಯಮಾಪನ ಫಲಿತಾಂಶಕ್ಕೆ ಕಾಯದೇ, ಪೂರಕ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸುವುದು ಉತ್ತಮ ಎಂದು ಸಚಿವರು ಸಲಹೆ ನೀಡಿದರು. ಜೂನ್ ತಿಂಗಳಾಂತ್ಯಕ್ಕೆ ಪೂರಕ ಪರೀಕ್ಷೆ ದಿನಾಂಕವನ್ನು ಪ್ರಕಟಿಸಲಾಗುತ್ತದೆ. ಆಗಸ್ಟ್ ತಿಂಗಳಲ್ಲಿ ಪರೀಕ್ಷೆ ನಡೆಯಲಿವೆ.

ಪರೀಕ್ಷೆಯನ್ನು ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಚಿವರು ದೂರವಾಣಿ ಕರೆ ಮಾಡಿ ಶುಭಾಶಯ ತಿಳಿಸಿದರು. ಫಲಿತಾಂಶದಲ್ಲಿ ಹಿನ್ನೆಡೆಯಾದವರು ನಿರಾಶರಾಗಬಾರದು. ಈ ಪರೀಕ್ಷೆಯೇ ಅಂತಿಮವಲ್ಲ. ಎಲ್ಲವನ್ನು ಧೈರ್ಯವಾಗಿ ಎದುರಿಸುವ ಮಾನಸಿಕತೆಯನ್ನು ಹೊಂದಬೇಕು. ಪರೀಕ್ಷೆ ಹಾಗೂ ಫಲಿತಾಂಶ ನಮ್ಮ ಶೈಕ್ಷಣಿಕ ಜೀವನದ ಒಂದು ಭಾಗವಷ್ಟೇ. ಪೂರಕ ಪರೀಕ್ಷೆ ಬರೆಯುವ ಮೂಲಕ ಯಶಸ್ಸು ಸಾಧಿಸಿ ಶೈಕ್ಷಣಿಕ ಜೀವನ ಮುಂದುವರಿಸಬೇಕು ಎಂದು ಸಚಿವರು ಕಿವಿ ಮಾತು ಹೇಳಿದರು.

Live Tv

Share This Article
Leave a Comment

Leave a Reply

Your email address will not be published. Required fields are marked *