ತಾರೆಯರು ಒಗ್ಗಟ್ಟಾಗಿರೋಣ: ಎಲ್ಲ ನಟರಿರುವ ಫೋಟೊ ಹಂಚಿಕೊಂಡು ಜಗ್ಗೇಶ್‌ ಕರೆ

Public TV
1 Min Read

ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ಹಠಾತ್‌ ನಿಧನವು ಕನ್ನಡ ಚಿತ್ರರಂಗವನ್ನು ದಿಗ್ಭ್ರಮೆಗೊಳಿಸಿದೆ. ಚಿತ್ರರಂಗದ ಎಲ್ಲ ನಟರೊಂದಿಗೆ ಸ್ನೇಹ ಬಾಂಧವ್ಯದಿಂದ ಇರುತ್ತಿದ್ದ ನಟ ನಿಧನಕ್ಕೆ ಎಲ್ಲರೂ ಕಂಬನಿ ಮಿಡಿದಿದ್ದಾರೆ. ಅಲ್ಲದೇ ಇನ್ಮುಂದೆ ಚಿತ್ರರಂಗದ ಪ್ರತಿ ನಟರು ಸ್ಟಾರ್‌ವಾರ್‌, ಫ್ಯಾನ್‌ವಾರ್‌ ಎಂಬ ವೈಮನಸ್ಸನ್ನು ಪಕ್ಕಕ್ಕಿಟ್ಟು ಒಟ್ಟಾಗಿ ಬಾಳೋಣ ಎಂಬಂತಹ ಸಂದೇಶ ಸಾರಲಾಗಿದೆ.

ಹೌದು, ಸ್ಯಾಂಡಲ್‌ವುಡ್‌ನ ಪ್ರಮುಖ ನಟರ ಭಾವಚಿತ್ರಗಳು ಒಟ್ಟಿಗೆ ಇರುವ ಫೋಟೊವೊಂದು ಟ್ವಿಟರ್‌ನಲ್ಲಿ ವೈರಲ್‌ ಆಗಿದೆ. “ಯುನೈಟೆಡ್‌ ಕೆಎಫ್‌ಐ ಕನ್ನಡ ಚಿತ್ರರಂಗ, ಯುನೈಟೆಡ್‌ ಕೆಎಫ್‌ಐ ಫ್ಯಾನ್ಸ್‌” ಎಂಬ ಸಾಲುಗಳು ಆ ಫೋಟೊದಲ್ಲಿದ್ದು, ನಾವೆಲ್ಲರೂ ಒಗ್ಗಟ್ಟಾಗಿರೋಣ ಎಂಬ ಸಂದೇಶವನ್ನು ಬಿಂಬಿಸುತ್ತಿದೆ. ಇದನ್ನೂ ಓದಿ: ಅವನು ಇನ್ನೂ ನನ್ನ ಮಡಿಲಲ್ಲಿ, ಆಲೋಚನೆಗಳಲ್ಲಿ ಶಾಶ್ವತವಾಗಿದ್ದಾನೆ: ರಾಘವೇಂದ್ರ ರಾಜ್‍ಕುಮಾರ್

ಈ ಫೋಟೊವನ್ನು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ನಟ ಜಗ್ಗೇಶ್‌, “ಈ ಭಾವ ನನ್ನ ಕಣ್ಣಲ್ಲಿ ಆನಂದಭಾಷ್ಪ ತರಿಸಿತು. ಮಾನ್ಯರೆ ನಾವೆಲ್ಲಾ ಶಾರದೆಯ ಮಕ್ಕಳು ಚಿತ್ರರಂಗ ನಮ್ಮ ಮನೆ. ಕನ್ನಡಿಗರು ನಮ್ಮ ಬಂಧುಗಳು. ನಮ್ಮ ಈ ಒಗ್ಗಟ್ಟು ರಾಜಣ್ಣನ ಕಾಲದಲ್ಲಿ ಇತ್ತು. ಮತ್ತೆ ಬರೋದಿಲ್ಲವೆ ಎಂಬ ಕೊರಗು ಕಾಡುತ್ತಿತ್ತು. ಈಗ ಇದನ್ನ ನೋಡಿ ಹಾಲುಜೇನು ಸವಿದಂತೆ ಆಯಿತು. ಈ ಒಗ್ಗಟ್ಟಿನ ಮಂತ್ರ ಯಾವ ಅಡೆತಡೆ ಇಲ್ಲದೆ ಮುಂದುವರಿಯಲಿ. ಲವ್‌ ಆಲ್‌…” ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ಚಿತ್ರರಂಗದಲ್ಲಿ ನಟರು, ಅಭಿಮಾನಿಗಳು ಪರಸ್ಪರ ವೈಮನಸ್ಸು ಸಾಧಿಸುವುದು ಸಾಮಾನ್ಯ. ಕನ್ನಡ ಚಿತ್ರರಂಗದಲ್ಲೂ ಅಂತಹ ಹಲವಾರು ಸನ್ನಿವೇಶಗಳು ನಡೆದಿವೆ. ಆಗ ಚಿತ್ರರಂಗದ ಹಿರಿಯರು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸುತ್ತಿದ್ದ ಉದಾಹರಣೆಗಳೂ ಇವೆ. ಇದನ್ನೂ ಓದಿ: ಶೇರ್‌ ಮಾಡೋದನ್ನು ನಿಲ್ಲಿಸಿ – ವೈರಲ್ ಆಗಿರುವ ಅಪ್ಪು ಫೋಟೋ ಸೀಕ್ರೆಟ್ ರಿವಿಲ್

ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಪ್ರತಿಭಾನ್ವಿತ ನಟರ ಸಾಲು ಸಾಲು ಸಾವುಗಳು (ಚಿರಂಜೀವಿ ಸರ್ಜಾ, ಸಂಚಾರಿ ವಿಜಯ್‌, ಪುನೀತ್‌ ರಾಜ್‌ಕುಮಾರ್) ಚಿತ್ರರಂಗದಲ್ಲಿ ಬೇಸರ ಮೂಡಿಸಿದೆ. ಇರುವಷ್ಟು ದಿನ ನಾವೆಲ್ಲ ಒಟ್ಟಾಗಿ, ಯಾವುದೇ ವಿವಾದಗಳಿಗೆ ಆಸ್ಪದ ನೀಡದೇ ಬಾಳೋಣ ಎಂಬ ಆಶಯಗಳನ್ನು ಹಿರಿಯ ನಟರು ವ್ಯಕ್ತಪಡಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *