ಜಗ್ಗೇಶ್ ಹುಲಿ ಉಗುರು ಕೇಸ್ ನಲ್ಲಿ ಸಹಾಯಕ್ಕೆ ಬಂದಿದ್ದು ಡಿಕೆಶಿ

Public TV
1 Min Read

ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಹುಲಿ ಉಗುರು (Tiger Claw) ಚೈನ್ ಹಾಕಿಕೊಂಡು ಹೋಗಿದ್ದು ಭಾರೀ ಸದ್ದು ಮಾಡಿತ್ತು. ಹುಲಿ ಉಗುರಿನ ಪೆಂಡೆಂಟ್ ಧರಿಸೋದು ಕಾನೂನು ಅಡಿಯಲ್ಲಿ ಶಿಕ್ಷಾರ್ಹಪರಾಧ ಎಂದು ಗೊತ್ತಿದ್ದರೂ, ಹೀಗೆ ಸಂತೋಷ್ ಹಾಕಿಕೊಂಡಿದ್ದು ದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿತ್ತು. ವರ್ತೂರು ಜೈಲಿಗೆ ಹೋಗುತ್ತಿದ್ದಂತೆಯೇ ಸಾಕಷ್ಟು ಸೆಲೆಬ್ರಿಟಿಗಳು ಕೂಡ ಈ ಹುಲಿ ಉಗುರಿನ ಚೈನು ಧರಿಸಿರೋದು ಬೆಳಕಿಗೆ ಬಂದಿತ್ತು. ಅದರಲ್ಲಿ ಜಗ್ಗೇಶ್ ಕೂಡ ಒಬ್ಬರು.

ಹಿರಿಯ ನಟ ಜಗ್ಗೇಶ್ (Jaggesh), ಯುವ ರಾಜಕಾರಣಿ ಮತ್ತು ನಟ ನಿಖಿಲ್ ಕುಮಾರಸ್ವಾಮಿ, ನಟ ದರ್ಶನ್, ಆರ್ಯವರ್ಧನ್ ಗುರೂಜಿ, ನಟಿ ಅಮೂಲ್ಯ ಮಕ್ಕಳು ಹೀಗೆ ಅನೇಕರು ಹುಲಿ ಉಗುರಿನ ಪೆಂಡೆಂಟ್ ಧರಿಸಿ ಸಂಕಷ್ಟಕ್ಕೆ ಸಿಲುಕಿದ್ದರು. ಅದರಲ್ಲೂ ಜಗ್ಗೇಶ್ ಈ ಪ್ರಕರಣದಲ್ಲಿ ಇನ್ನೇನು ಬಂಧನವಾಗುತ್ತಾರೆ ಅಂತೆಲ್ಲ ಸುದ್ದಿ ಬಂದಿತ್ತು.

ಇಂತಹ ಸುದ್ದಿಯಿಂದ ಬೇಸತ್ತಿದ್ದ ಜಗ್ಗೇಶ್, ಮಾಧ್ಯಮಗಳಲ್ಲಿ ಸುದ್ದಿ ಬಾರದಂತೆ ತಡೆಗಟ್ಟುವುದಾಗಿ ಕೋರ್ಟ್ ಮೆಟ್ಟಿಲು ಏರಿದ್ದರು. ಇದಕ್ಕೆ ಸಹಾಯ ಮಾಡಿದ್ದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar). ಈ ವಿಷಯವನ್ನು ಸ್ವತಃ ಜಗ್ಗೇಶ್ ಅವರೇ ಹೇಳಿದ್ದಾರೆ. ರಂಗನಾಯಕ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಇದನ್ನು ಬಹಿರಂಗ ಪಡಿಸಿದ್ದಾರೆ.

 

ಸುದ್ದಿಗಳ ಹಾವಳಿಯನ್ನು ತಡೆಯೋಕೆ ಆಗದೇ ನಾನು ಡಿ.ಕೆ.ಶಿವಕುಮಾರ್ ಅವರ ಮೊರೆ ಹೋದೆ. ಅವರು ಯಾರಿಗೆ ತಿಳಿಸಬೇಕೋ ತಿಳಿಸಿದರು. ಅಲ್ಲಿಗೆ ನಾನು ಬಚಾವ್ ಆದೆ ಎಂದು ಜಗ್ಗೇಶ್ ಹೇಳಿದ್ದಾರೆ. ಅನಿವಾರ್ಯವಾಗಿ ನಾನು ಕೋರ್ಟಿನಿಂದ ಸ್ಟೇ ತರಬೇಕಾಯಿತು ಎಂದು ಅವರು ಮಾತನಾಡಿದ್ದಾರೆ.

Share This Article