ಆಂಧ್ರದಲ್ಲಿ ಎನ್ಆರ್‌ಸಿ ಜಾರಿ ಇಲ್ಲ- ಜಗನ್ ಘೋಷಣೆ

Public TV
1 Min Read

ಹೈದರಾಬಾದ್: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್‌ಸಿ) ಜಾರಿ ವಿರುದ್ಧ ದೇಶಾದ್ಯಂತ ವಿರೋಧ ವ್ಯಕ್ತವಾಗಿ ಪ್ರತಿಭಟನೆ ಕಾವು ಹೆಚ್ಚಾಗುತ್ತಿದೆ. ಈ ನಡುವೆ ಎನ್‍ಆರ್ ಸಿಯನ್ನು ತಮ್ಮ ರಾಜ್ಯದಲ್ಲಿ ಜಾರಿ ಮಾಡುವುದಿಲ್ಲ ಎಂಬ ಮುಖ್ಯಮಂತ್ರಿಗಳ ಸಾಲಿಗೆ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಹೊಸ ಸೇರ್ಪಡೆಯಾಗಿದ್ದಾರೆ.

ರಾಜ್ಯಗಳಲ್ಲಿ ಎನ್‍ಆರ್ ಸಿ ಜಾರಿ ಕುರಿತು ಪಕ್ಷದ ಸಂಸದರು ಅಸಮ್ಮತಿ ಸೂಚಿಸಿದ ಹಿನ್ನೆಲೆಯಲ್ಲಿ ಜಗನ್ ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಗನ್, ಎನ್ಆರ್‌ಸಿ ಜಾರಿ ಮಾಡುವ ಕುರಿತು ನನ್ನ ಸಹೋದದರಿಗೆ ಅಭಿಪ್ರಾಯ ತಿಳಿಸುವಂತೆ ಹೇಳಿದ್ದೆ. ಸದ್ಯ ಈ ಕುರಿತು ಸ್ಪಷ್ಟ ನಿರ್ಧಾರವನ್ನು ಮಾಡಿದ್ದು, ಆಂಧ್ರಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಎನ್ಆರ್‌ಸಿ ಕಾಯ್ದೆಯನ್ನು ಜಾರಿ ಮಾಡುವುದಿಲ್ಲ ಎಂದಿದ್ದಾರೆ.

ಎನ್‍ಆರ್ ಸಿ ಬೆಂಬಲ ನೀಡದಿರುವ ಕುರಿತ ಈ ನಿರ್ಧಾರ ಪ್ರಕಟಿಸುವ ಮುನ್ನ ಜಗನ್, ತಮ್ಮ ಸಂಪುಟದ ಉಪಮುಖ್ಯಮಂತ್ರಿ ಅಜ್ಮತ್ ಬಾಷಾ ಅವರ ಅಭಿಪ್ರಾಯ ಪಡೆದಿದ್ದರು. ಜಗನ್ ಅವರ ಈ ನಿರ್ಧಾರ ಎನ್‍ಆರ್ ಸಿ ಜಾರಿ ಮಾಡುವ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳುದ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ಅವರ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಕಾಂಗ್ರೆಸ್ ಪಕ್ಷ ಸಹ ಸಿಎಂ ಕೆಸಿಆರ್ ಅವರಿಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಭಾನುವಾರವರೆಗೂ ಡೆಡ್ ಲೈನ್ ನೀಡಿತ್ತು. ಆದರೆ ಈ ಕುರಿತು ಕೆಸಿಆರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ‘ಈ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ನಮ್ಮ ಸರ್ಕಾರ ಪ್ರಾಮಾಣಿಕ ನಾಗರಿಕರನ್ನು ರಕ್ಷಿಸುತ್ತದೆ. ಕೇಂದ್ರ ಸರ್ಕಾರ ಆದೇಶಗಳನ್ನು ನೀಡಿದಾಗ ಈ ಕುರಿತು ಮಾತನಾಡೋಣ’ ಎಂಬುವುದು ಅವರ ಸದ್ಯದ ನಿರ್ಧಾರ ಎಂದು ಅವರ ಅಪ್ತ ವಲಯದಿಂದ ಕೇಳಿ ಬಂದಿದೆ.

ದೇಶದಲ್ಲಿ ಇದುವರೆಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಿಹಾರ್ ಸಿಎಂ ನಿತಿಶ್ ಕುಮಾರ್, ಒಡಿಶಾ ಸಿಎಂ ನವೀನ್ ಪಟ್ನಾಯಕ್, ಪಂಜಾಬ್ ಸಿಎಂ ಅಮರೀಂದರ್ ಸಿಂಗ್, ಮಧ್ಯ ಪ್ರದೇಶ ಸಿಎಂ ಕಮಲ್‍ನಾಥ್, ರಾಜಸ್ಥಾನ ಸಿಎಂ ಆಶೋಕ್ ಗೆಹ್ಲೋಟ್, ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಎನ್ಆರ್‌ಸಿ ಜಾರಿ ಮಾಡುವುದಿಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *