ಇದು ಕೇವಲ ಆರಂಭ ಅಷ್ಟೇ, ಅಂತ್ಯ ಅಲ್ಲ: ಗುಡುಗಿದ ಕನಕಪುರ ಬಂಡೆ

Public TV
3 Min Read

– ನಿಮ್ಮ ಹೆಸರಿಗೆ ಧಕ್ಕೆ ಬರದಂತೆ ಜೀವನ ನಡೆಸ್ತೇನಿ
– ಅಭಿಮಾನಿಗಳಿಗೆ ಮಾತು ಕೊಟ್ಟ ಡಿಕೆಶಿ
– ಇದು ಒಂದು ದಿನ ಅಧ್ಯಾಯವಲ್ಲ, ಮುಂದಿದೆ

ಬೆಂಗಳೂರು: ಇದು ಕೇವಲ ಆರಂಭ ಅಷ್ಟೇ ಅಂತ್ಯವಲ್ಲ ಎಂದು ಬೆಂಗಳೂರಿಗೆ ಬಂದಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ.

ನಗರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಮಾಜಿ ಸಚಿವರು, ಹಗಲು-ರಾತ್ರಿ ನನಗೋಸ್ಕರ ಹೋರಾಟ ಮಾಡಿ, ಪೂಜೆ ಸಲ್ಲಿಸಿದ ನಿಮಗೆ ಅಭಿನಂದನೆಗಳು. ಕಾಂಗ್ರೆಸ್ ಪ್ರಾಮಾಣಿಕ ಕಾರ್ಯಕರ್ತನಾದ ನನ್ನ ಮೇಲೆ ಆದ ಅನ್ಯಾಯವನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ರಿ. ನಿಮಗೆ ನನಗೆ ಧನ್ಯವಾದ ಎಂದು ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಕೈ ಮುಗಿದರು.

ಇದು ಒಂದು ದಿನಕ್ಕೆ ಮುಗಿಯುವ ಅಧ್ಯಾಯವಲ್ಲ. ಇದು ಆರಂಭ ಅಷ್ಟೇ, ಅಂತ್ಯ ಅಲ್ಲ. ನಾನು ಯಾರಿಂದಲೂ ಲಂಚ ಪಡೆದಿಲ್ಲ. ಯಾರಿಗೂ ಹೆದರುವ ಅಗತ್ಯವಿಲ್ಲ. ಜೈಲಿನಲ್ಲಿ ಇರಿಸಿದ್ದಕ್ಕೆ ನಾನು ಎದೆಗುಂದಿಲ್ಲ ಎಂದು ಗುಡುಗಿದರು.

ಎಲ್ಲರಿಗೂ ಅಭಿನಂದನೆ:
ತಾಯಿ, ಮಗಳು ಸೇರಿದಂತೆ ನೂರಕ್ಕೂ ಅಧಿಕ ಸ್ನೇಹಿತರು ಹಾಗೂ ಬಂಧುಗಳಿಗೆ ಕಿರುಕುಳ ಕೊಟ್ಟಿದ್ದನ್ನು ನೀವು ನೋಡಿದ್ದೀರಿ. ನನ್ನ ಮಗಳನ್ನು ನಿಮ್ಮ ಮಗಳು ಎಂಬ ಕಾಳಜಿ ತೋರಿದ್ರಿ. ಸಂಕಷ್ಟದ ವೇಳೆ ನನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಶ್ರೀ ಗುರುಗುಂಡಾ ಬ್ರಹ್ಮೇಶ್ವರ ಸ್ವಾಮಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ, ಕನ್ನಡಪರ ಸಂಘಟನೆಗಳು, ನನ್ನ ಅಭಿಮಾನಿಗಳು ಪ್ರತಿಭಟನೆ ನಡೆಸಿ ಬಿಡುಗಡೆಗೆ ಒತ್ತಾಯಿಸಿದರು. ಇದನ್ನು ನಾನು ಯಾವತ್ತೂ ಮರೆಯುವುದಿಲ್ಲ ಎಂದು ತಿಳಿಸಿದರು.

ನಾನು ಒಂದು ಕುಟುಂಬದ ಆಸ್ತಿಯಲ್ಲ. ನಿಮ್ಮೆಲ್ಲರ ಕುಟುಂಬದ ಆಸ್ತಿ. ನಿಮ್ಮ ಹೆಸರಿಗೆ ಧಕ್ಕೆ ಬರದಂತೆ ಜೀವನ ನಡೆಸುತ್ತೇನೆ. ಮಾತನಾಡುವುದು ಬಹಳ ಬಾಕಿ ಇದೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲು ಮುಖಂಡರು ಸಿದ್ಧತೆ ನಡೆಸಿದ್ದಾರೆ. ಅಲ್ಲಿ ಎಲ್ಲ ವಿಚಾರವಾಗಿ ಮಾತನಾಡುತ್ತೇನೆ. ಯಾರಿಂದಲೂ ನನ್ನ ಶಕ್ತಿಯನ್ನು ಕುಂದಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಬುಧವಾರ ಜಾಮೀನು ಸಿಕ್ಕರೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಈ ವೇಳೆ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿ ಡಿಕೆಶಿಯನ್ನು ಅದ್ಧೂರಿಯಾಗಿ ಬರಮಾಡಿಕೊಂಡರು. ಮೆರವಣಿಗೆ ಮೂಲಕ ಮಾಜಿ ಸಚಿವರನ್ನು ಕೆಪಿಸಿಸಿ ಕಚೇರಿಯತ್ತ ಕರೆದೊಯ್ಯಲಾಗುತ್ತಿದೆ. ಇದರಿಂದಾಗಿ ನಗರದ ಕೆಲವೆಡೆ ಟ್ರಾಫಿಕ್ ಸಮಸ್ಯೆ ಉಂಟಾಗಿದೆ.

ಡಿಕೆ ಶಿವಕುಮಾರ್ ಆಗಮನದ ಹಿನ್ನೆಲೆಯಲ್ಲಿ ನಗರದ ಮೇಕ್ರಿ ಸರ್ಕಲ್ ನಲ್ಲಿ ಅಪಾರ ಅಭಿಮಾನಿಗಳು ಸೇರಿದ್ದರಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಇತ್ತ ಮಾಜಿ ಮೇಯರ್ ಪದ್ಮಾವತಿ ತಮ್ಮ ಬೆಂಬಲಿಗರೊಂದಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿ ಡಿಕೆ ಶಿವಕುಮಾರ್ ಅವರನ್ನು ಸ್ವಾಗತಿಸಿದ್ದು, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಇತರ ಗಣ್ಯರು ಈ ವೇಳೆ ಉಪಸ್ಥಿತರಿದ್ದರು.

ಡಿಕೆಶಿಗೆ ಹೂ ಮಳೆ:
ಪ್ರಯಾಣಿಕರ ಭದ್ರತಾ ದೃಷ್ಟಿಯಿಂದ ವಿಮಾನ ನಿಲ್ದಾಣದ ಆವರಣದೊಳಗೆ ಡಿಕೆ ಶಿವಕುಮಾರ್ ಅವರ ಅಭಿಮಾನಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಟೋಲ್ ಗೇಟ್ ಬಳಿಯೇ ದೇವಿ ಕುಣಿತ, ಗೊಂಬೆ ಕುಣಿತ, ಕಂಸಾಳೆ, ಡೊಳ್ಳು ಕುಣಿತ, ಹೂವಿನ ಮಳೆಗೆ ಜೆಸಿಬಿ ಸಿದ್ಧತೆ ಮಾಡಿಕೊಂಡಿದ್ದರು.

ಅಕ್ರಮ ಹಣ ವರ್ಗಾವಣೆಯ ಆರೋಪ ಹೊತ್ತು ತಿಹಾರ್ ಜೈಲು ಸೇರಿದ್ದ ಡಿಕೆಶಿಗೆ ಬುಧವಾರ ದೆಹಲಿ ಹೈಕೋರ್ಟಿನಿಂದ ಜಾಮೀನು ಸಿಕ್ಕಿದೆ. ಆದರೆ ಅಂದು ಬೆಂಗಳೂರಿಗೆ ದೌಡಾಯಿಸದೆ ಎರಡು ದಿನ ದೆಹಲಿಯಲ್ಲೇ ಉಳಿದುಕೊಂಡ ಅವರು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಗಾಂಧಿ, ಖಜಾಂಚಿ ಅಹ್ಮದ್ ಪಟೇಲ್, ಉಸ್ತುವಾರಿ ಕೆ.ಸಿ ವೇಣುಗೋಪಾಲ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದರು. ಅಲ್ಲದೆ ಜಾಮೀನಿಗೆ ಕಾರಣರಾದ ಹಿರಿಯ ವಕೀಲರಾದ ಮುಕುಲ್ ರೊಹ್ಟಗಿ, ಅಭಿಷೇಕ ಮನುಸಿಂಘ್ವಿ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿ ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚೆ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *