Catch Controversy | ಜೇಸನ್‌ ಹೋಲ್ಡರ್‌ ಕ್ಯಾಚ್‌ ವಿವಾದ – ಅಂಪೈರ್‌ ತೀರ್ಪಿನ ವಿರುದ್ಧ ಆಕ್ರೋಶ

2 Min Read

ಅಹಮದಾಬಾದ್‌: ಐಪಿಎಲ್‌ನಲ್ಲಿ (IPL) ವಿವಾದಗಳು (Controversy) ಹೊಸದೇನಲ್ಲ. ಪ್ರತೀ ಪಂದ್ಯದಲ್ಲೂ, ಪ್ರತಿ ಆವೃತ್ತಿಯಲ್ಲೂ ಒಂದಿಲ್ಲಿಂದು ವಿವಾದಗಳನ್ನು ನೋಡುತ್ತಲೇ ಇರುತ್ತೇವೆ. ಆದ್ರೆ ಕೆಲವೊಂದು ಪಂದ್ಯಗಳಲ್ಲಿ ನೀಡುವ ವಿವಾದಿತ ಔಟ್‌ಗಳು ಇಡೀ ಪಂದ್ಯದ ಗತಿಯನ್ನೇ ಬದಲಿಸಿಬಿಟ್ಟಿವೆ. ಇಂದಿನ ಆರ್‌ಸಿಬಿ vs ಗುಜರಾತ್‌ ಟೈಟಾನ್ಸ್‌ (RCB vs GT) ನಡುವಿನ ಪಂದ್ಯದಲ್ಲೂ ಅಂತಹದ್ದೇ ವಿವಾದವೊಂದು ಕಂಡುಬಂದಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ಜೇಸನ್‌ ಹೋಲ್ಡರ್‌ (Jason Holder) ಅವರು ಹಿಡಿದ ಕ್ಯಾಚ್‌ ಈಗ ವಿವಾದಕ್ಕೆ ಕಾರಣವಾಗಿದೆ. ಸೋಷಿಯಲ್‌ ಮೀಡಿಯಾದಲ್ಲೂ (Social Media) ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಅಂಪೈರ್‌ ತೀರ್ಪಿನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ತನ್ನ ಬ್ಲಂಡರ್‌ನಿಂದ ಹೈದರಾಬಾದ್‌ ವಿರುದ್ಧ ಸೋತ ಮುಂಬೈ!

ಆಗಿದ್ದೇನು?
ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಆರ್‌ಸಿಬಿ 7.3 ಓವರ್‌ಗಳಲ್ಲಿ 79 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಆದ್ರೆ 8ನೇ ಓವರ್‌ನಲ್ಲಿ ಟೈಟಾನ್ಸ್‌ ಬೌಲರ್‌ ಅರ್ಶದ್‌ ಖಾನ್‌ (Arshad Khan) ಎಸೆದ 4ನೇ ಎಸೆತವನ್ನು ಆರ್‌ಸಿಬಿ ನಾಯಕ ರಜತ್‌ ಪಾಟಿದಾರ್‌ ಸಿಕ್ಸರ್‌ ಸಿಡಿಸಲು ಯತ್ನಿಸಿದ್ರು. ಈ ವೇಳೆ ಬೌಂಡರಿ ಲೈನ್‌ ಬಳಿಯಿದ್ದ ಜೇಸನ್‌ ಹೋಲ್ಡರ್‌ ಡೈ ಹೊಡೆದು ಕ್ಯಾಚ್‌ ಹಿಡಿದರು. ಕ್ಯಾಚ್‌ ಹಿಡಿದ 2-3 ಸೆಕೆಂಡುಗಳಲ್ಲೇ ಚೆಂಡನ್ನು ನೆಲಕ್ಕೆ ತಾಕಿಸಿದ್ರು, ಇದು ಸ್ಪಷ್ಟವಾಗಿ ಗೋಚರಿಸಿತ್ತು. ಏನಾಯ್ತು ಅಂತ ಪಾಟಿದಾರ್‌ ತಿಳಿಯೋದ್ರೊಳಗೆ 3ನೇ ಅಂಪೈರ್‌ ಔಟ್‌ ತೀರ್ಪು ನೀಡಿದ್ದರು.

ಇತ್ತ ಬೌಂಡರಿ ಲೈನ್‌ ಬಳಿಯಿದ್ದ ಆಫ್‌ ಫೀಲ್ಡ್‌ ಅಂಪೈರ್‌ ಜೊತೆಗೆ ಕೊಹ್ಲಿ ಮಾತನಾಡಿದ್ರೂ ಪ್ರಯೋಜನವಾಗಲಿಲ್ಲ. ಕೊನೆಗೆ ನಾಯಕ ಔಟ್‌ ಎಂದೇ ತೀರ್ಪು ಖಚಿತವಾಗಿ ರಜತ್‌ ಪಾಟಿದಾರ್‌ ಮೈದಾನದಿಂದ ಹೊರಬಂದರು. ಅಂಪೈರ್‌ ತೀರ್ಪಿನ ವಿರುದ್ಧ ಕೊಹ್ಲಿ ತೀವ್ರ ಬೇಸರ ಹೊರಹಾಕಿದ್ರು. ಪಾಟಿದಾರ್‌ ಔಟ್‌ ಬಳಿಕ ರನ್‌ ವೇಗ ಕಡಿತಗೊಳ್ಳುವ ಜೊತೆಗೆ ಅಲ್ಪ ಮೊತ್ತಕ್ಕೆ ಪ್ರಮುಖ ವಿಕೆಟ್‌ಗಳನ್ನು ಆರ್‌ಸಿಬಿ ಕಳೆದುಕೊಂಡಿತು.

ಸದ್ಯ ಜೇಸನ್‌ ಹೋಲ್ಡರ್‌ ಅವರು ಹಿಡಿದ ಈ ಕ್ಯಾಚ್‌ ವಿವಾದಕ್ಕೆ ಕಾರಣವಾಗಿದೆ. ಆರ್‌ಸಿಬಿ ಅಭಿಮಾನಿಗಳು ಕೂಡ ಅಂಪೈರ್‌ ತೀರ್ಪಿನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇನ್ನೂ ಕೆಲವರು ಮ್ಯಾಚ್‌ ಫಿಕ್ಸಿಂಗ್‌ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಡ್ರೆಸ್ಸಿಂಗ್‌ ರೂಮ್‌ನಲ್ಲೇ ವೇಪಿಂಗ್‌ – ರಿಯಾನ್‌ ಪರಾಗ್‌ಗೆ ಪಂದ್ಯ ಶುಲ್ಕದ 25% ದಂಡ, 1 ಡೀಮೆರಿಟ್ ಪಾಯಿಂಟ್

Share This Article