ಭಾರತ, ಚೀನಾ ಸಂಘರ್ಷಕ್ಕೆ ಕಾರಣ ಏನು? ಅರುಣಾಚಲದ ಗಡಿಯಲ್ಲಿ ನಿಜವಾಗಿ ಏನಾಯ್ತು?

Public TV
3 Min Read

ನವದೆಹಲಿ: ಅರುಣಾಚಲ ಪ್ರದೇಶದ(Arunachal Pradesh) ತವಾಂಗ್ ಸೆಕ್ಟರ್‌ನಲ್ಲಿ ಭಾರತದ ಸೈನಿಕರು(Indian Army) ಮತ್ತೆ ಕೆಚ್ಚೆದೆಯ ಹೋರಾಟ ನಡೆಸಿದ್ದಾರೆ. ಯಾವುದೇ ಸಿದ್ಧತೆ ಇಲ್ಲದೇ ಇದ್ದರೂ ಆಕ್ರಮಣಕಾರಿ ಹೋರಾಟ ಮಾಡಿ ಚೀನಿ ಸೈನಿಕರನ್ನು ನಮ್ಮ ಹೆಮ್ಮೆಯ ಯೋಧರು ಓಡಿಸಿದ್ದಾರೆ. ಈ ಘರ್ಷಣೆಯ ಬಳಿಕ  ಚೀನಾ(China) ʼವಾರ್ನಿಂಗ್‌ ಶಾಟ್‌ʼ ಮೂಲಕ ಎಚ್ಚರಿಕೆಯ ಸಂದೇಶ ಕಳುಹಿಸಿದ್ದ ವಿಚಾರವೂ ಈಗ ಬೆಳಕಿಗೆ ಬಂದಿದೆ.

ಡಿಸೆಂಬರ್ 9ರಂದು ಭಾರತ-ಚೀನಾ ಸೇನೆಗಳ ನಡುವೆ ನಡೆದ ಸಂಘರ್ಷದ ಹಿನ್ನೆಲೆ, ಮುನ್ನೆಲೆಗಳನ್ನು ಕೆದಕುತ್ತಾ ಹೋದಂತೆ ಚೀನಾ ಕುತಂತ್ರದ ಸ್ಫೋಟಕ ಮಾಹಿತಿಗಳು ಮಾಹಿತಿಗಳು ಲಭ್ಯ ಆಗುತ್ತಿವೆ.

ಸಂಘರ್ಷಕ್ಕೆ ಕಾರಣ ಏನು?
ಚೀನಾದ ಗಡಿಯಿಂದ ಕೇವಲ 100 ಕಿಲೋಮಿಟರ್ ದೂರದಲ್ಲಿರುವ ಉತ್ತರಾಖಂಡ್‍ನ ಔಲಿಯಲ್ಲಿ ನವೆಂಬರ್ 17ರಿಂದ ಕೈಗೊಂಡಿದ್ದ ಭಾರತ-ಅಮೆರಿಕ ಸೇನೆಗಳ ಜಂಟಿ ಸೈನಿಕ ಶಿಕ್ಷಣ ಕಾರ್ಯಕ್ರಮ ʼಯುದ್ಧ್ ಅಭ್ಯಾಸ್-2022ʼ ಡಿಸೆಂಬರ್ 2ರಂದು ಮುಗಿದಿತ್ತು. ಈ ಜಂಟಿ ಸಮರಾಭ್ಯಾಸಕ್ಕೆ ಚೀನಾ ಆರಂಭದಿಂದಲೂ ತಗಾದೆ ತೆಗೆಯುತ್ತಲೇ ಇತ್ತು.

ನವೆಂಬರ್ 30ರಂದು ಮಾತನಾಡಿದ್ದ ಚೀನಾದ ವಿದೇಶಾಂಗ ಇಲಾಖೆ ಪ್ರತಿನಿಧಿ, ಗಡಿ ಒಪ್ಪಂದಗಳನ್ನು ಭಾರತ ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದ್ದರು. ಇದಕ್ಕೆ ಭಾರತ ನಾವು ಯಾರೊಂದಿಗೆ ಯುದ್ಧ ಮಾಡಬೇಕು ಎಂಬುದನ್ನು ಮೂರನೇ ದೇಶದಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿತ್ತು. ನಮ್ಮ ಮತ್ತು ಭಾರತದ ವಿಚಾರದಲ್ಲಿ ಮೂಗುತೂರಿಸಬೇಡಿ ಎಂದು ಅಮೆರಿಕಗೂ ಚೀನಾ ಎಚ್ಚರಿಕೆ ನೀಡಿತ್ತು.

ಭಾರತ-ಅಮೆರಿಕ ಜಂಟಿ ಸಮರಾಭ್ಯಾಸ ಮುಗಿದ ಒಂದು ವಾರಕ್ಕೆ ಸರಿಯಾಗಿ, ಪೂರ್ವ ತಯಾರಿಯೊಂದಿಗೆ ತವಾಂಗ್ ಗಡಿಗೆ ಬಂದ ಚೀನಾ ಸೇನೆ ಸಂಘರ್ಷಕ್ಕೆ ಇಳಿದಿತ್ತು.

ಗಡಿಯಲ್ಲಿ ಆಸಲಿಗೆ ಆಗಿದ್ದೇನು?
ಡಿ.9ರ ಬೆಳಗ್ಗೆ ಯಾಂಗ್‍ಟ್ಸೆ ಬಳಿಯ ಗಡಿ ವಾಸ್ತವ ರೇಖೆ(ಎಲ್‍ಎಸಿ) ಬಳಿ ದೊಣ್ಣೆ, ರಾಡ್ ಸಮೇತ ಚೀನಾದ 600 ಸೈನಿಕರು ಬಂದಿದ್ದಾರೆ. ಎಲ್‌ಎಸಿ ದಾಟಿ ಮುಂದಕ್ಕೆ ಬರುತ್ತಿದ್ದಂತೆ ಅಲ್ಲೇ ಗಸ್ತು ತಿರುಗುತ್ತಿದ್ದ 50 ಭಾರತದ ಸೈನಿಕರು ಅವರನ್ನು ತಡೆದು ಪ್ರಶ್ನೆ ಮಾಡಿದ್ದಾರೆ.

ಪ್ರಶ್ನೆ ಮಾಡಿದ ಕೂಡಲೇ ಚೀನಿ ಸೈನಿಕರು ಭಾರತೀಯ ಸೈನಿಕರ ಜೊತೆ ಮುಷ್ಠಿ ಯುದ್ಧಕ್ಕೆ ಮುಂದಾಗಿದ್ದಾರೆ. ಅನೀರಿಕ್ಷಿತ ದಾಳಿ ವಿಚಲಿತಗೊಳ್ಳದ ಭಾರತ ಸೈನಿಕರು ಸರಿಯಾಗಿ ತಿರುಗೇಟು ನೀಡಿದ್ದಾರೆ. ನಂತರ ದೊಣ್ಣೆ ಹಿಡಿದು ಎರಡು ಕಡೆಯ ಸೈನಿಕರು ಬಡಿದಾಡಿಕೊಂಡಿದ್ದಾರೆ, ಪರಸ್ಪರ ಕಲ್ಲು ತೂರಿದ್ದಾರೆ.

ಕಡಿಮೆ ಸಂಖ್ಯೆಯಲ್ಲಿದ್ದರೂ ಭಾರತದ ಸೈನಿಕರ ಆಕ್ರಮಣಕ್ಕೆ ಚೀನಾ ಸೈನಿಕರು ದಂಗಾಗಿದ್ದಾರೆ. ವಿಷಯ ತಿಳಿದ ಕೂಡಲೇ ಸಮರೋಪಾದಿಯಲ್ಲಿ ರಣತಂತ್ರ ರೂಪಿಸಿದ ಭಾರತೀಯ ಸೇನೆಯ ಮೂರು ಸೇನಾ ಯೂನಿಟ್‌ಗಳು ಸ್ಥಳಕ್ಕೆ ಆಗಮಿಸಿವೆ. ಘರ್ಷಣೆಯ ವೇಳೆ ಕೆಲ ಚೀನಿ ಸೈನಿಕರನ್ನು ಭಾರತದ ಸೈನಿಕರು ವಶಕ್ಕೆ ಪಡೆದಿದ್ದರು. ಭಾರತದ ಯೋಧರ ಸಾಹಸಕ್ಕೆ ಬೆಚ್ಚಿದ ಚೀನಿ ಸೈನಿಕರು ಮರಳಿ ತಮ್ಮ ನೆಲೆಯತ್ತ ತೆರಳಿದ್ದಾರೆ. ಅಷ್ಟೇ ಅಲ್ಲದೇ ಭಾರತೀಯ ಸೈನಿಕರು ಮತ್ತೆ ದಾಳಿ ನಡೆಸಬಹುದು ಎಂಬ ಕಾರಣಕ್ಕೆ ಚೀನಿ ಸೈನಿಕರು ʼವಾರ್ನಿಂಗ್‌ ಶಾಟ್‌ʼ ಸಿಡಿಸಿ ಎಚ್ಚರಿಕೆ ನೀಡಿದ್ದಾರೆ.

ಗಲ್ವಾನ್‌ ಗಲಾಟೆಯ ಬಳಿಕ ಚೀನಾ ತನ್ನ ಗಡಿ ಭಾಗದಲ್ಲಿ ಯಾವಾಗ ಬೇಕಾದರೂ ದಾಳಿ ನಡೆಸಬಹುದು ಎನ್ನುವುದು ಭಾರತೀಯ ಯೋಧರಿಗೆ ತಿಳಿದಿತ್ತು. ಈ ಕಾರಣಕ್ಕೆ ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಚೀನಾ ಯೋಧರಿಗಿಂತಲೂ ಶಕ್ತಿಶಾಲಿ ಆಯುಧಗಳನ್ನು ಭಾರತದ ಸೈನಿಕರು ಹೊಂದಿದ್ದರು.  ಒಟ್ಟು  ಸಂಘರ್ಷ 25-30 ನಿಮಿಷಗಳ ಕಾಲ ನಡೆದಿತ್ತು ಎಂದು ಮೂಲಗಳನ್ನು ಆಧಾರಿಸಿ ವರದಿಯಾಗಿದೆ. ಇದನ್ನೂ ಓದಿ: ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಚೀನಾ ರಾಯಭಾರ ಕಚೇರಿಯಿಂದ ದೇಣಿಗೆ: ಅಮಿತ್ ಶಾ

ಭಾರತದ ಸೈನಿಕರ ಮೇಲೆ ದಾಳಿ ನಡೆಸಲೆಂದೇ ಚೀನಾ ಸಿದ್ಧತೆ ನಡೆಸಿಕೊಂಡು ಬಂದಿದ್ದರೂ ಭಾರತದ ಸೈನಿಕರ ಹೋರಾಟದ ಕಿಚ್ಚಿಗೆ ತಲೆಬಾಗಿದ್ದಾರೆ. ಈ ಘರ್ಷಣೆಯಲ್ಲಿ ಭಾರತದ 9 ಮಂದಿ ಚೀನಾದ 22 ಸೈನಿಕರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘರ್ಷಣೆಯ ಬಳಿಕ ಡಿ .11ರಂದು ಕಮಾಂಡರ್ ಮಟ್ಟದಲ್ಲಿ ಧ್ವಜ ಸಭೆ ನಡೆದು, ಶಾಂತಿ, ಯಥಾಸ್ಥಿತಿಗೆ ಉಭಯ ದೇಶಗಳ ಒಪ್ಪಿಗೆ ನೀಡಿವೆ.

ಏನಿದು ವಾರ್ನಿಂಗ್‌ ಶಾಟ್‌?
ಮಿಲಿಟರಿಯಲ್ಲಿ ವಾರ್ನಿಂಗ್‌ ಶಾಟ್‌ಗೆ ವಿಶೇಷ ಮಹತ್ವವಿದೆ. ಒಂದು ದೇಶದ ಸೈನಿಕರು ತನ್ನ ಶಕ್ತಿ ಪ್ರದರ್ಶನಕ್ಕೆ ಮುನ್ನಾ ವಿರೋಧಿ ಪಡೆಯ ಸೈನಿಕರಿಗೆ ನೀಡುವ ಕೊನೆಯ ಎಚ್ಚರಿಕೆಯನ್ನು ವಾರ್ನಿಂಗ್‌ ಶಾಟ್‌ ಎಂದು ಕರೆಯಲಾಗುತ್ತದೆ. ಈ ಎಚ್ಚರಿಕೆಯನ್ನು ಉಲ್ಲಂಘಿಸಿಯೂ ಮುಂದುವರೆದರೆ ನಾವು ಯಾವುದೇ ರೀತಿಯ ಹೋರಾಟಕ್ಕೆ ಸಿದ್ಧ ಎಂಬ ಸಂದೇಶವನ್ನು ವಾರ್ನಿಂಗ್‌ ಶಾಟ್‌ ಮೂಲಕ ಕಳುಹಿಸಲಾಗುತ್ತದೆ.

ಚೀನಾ- ಭಾರತದ ಗಡಿಯನ್ನು ಗಸ್ತು ತಿರುಗುವಾಗ ಶಸ್ತ್ರಾಸ್ತ್ರಗಳನ್ನು ಒಯ್ಯುವಂತಿಲ್ಲ. ಹೀಗಿದ್ದರೂ ಎಲ್‌ಸಿಎಯನ್ನು ದಾಟಿ ಬಂದ ಚೀನಾ ಭಾರತದ ಸೈನಿಕರಿಂದ ಪೆಟ್ಟು ತಿಂದು ಹೋಗಿದ್ದು ಮಾತ್ರವಲ್ಲದೇ ವಾರ್ನಿಂಗ್‌ ಶಾಟ್‌ ಸಹ ಸಿಡಿಸಿದ್ದು ಅಚ್ಚರಿಗೆ ಕಾರಣವಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *