Women’s T20 World Cup; ಭಾರತ vs ಪಾಕಿಸ್ತಾನ ಫೈಟ್‌ – ಟೀಂ ಇಂಡಿಯಾಗೆ ಇಂದು ನಿರ್ಣಾಯಕ ಪಂದ್ಯ

Public TV
1 Min Read

ದುಬೈ: ಮಹಿಳಾ ಟಿ20 ವಿಶ್ವಕಪ್‌ 2024 ಟೂರ್ನಿಯಲ್ಲಿ ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಟೀಂ ಇಂಡಿಯಾ ಇಂದು (ಭಾನುವಾರ) ಬದ್ಧವೈರಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ. ಆರಂಭಿಕ ಪಂದ್ಯದಲ್ಲೇ ಹೀನಾಯ ಸೋಲನುಭವಿಸಿದ್ದ ಟೀಂ ಇಂಡಿಯಾಗೆ ಇಂದಿನ ಪಂದ್ಯ ನಿರ್ಣಾಯಕವಾಗಿದೆ.

ದುಬೈನ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಹಿಳೆಯರ ಟೀಂ ಇಂಡಿಯಾ, ಫಾತಿಮಾ ಸನಾ ನೇತೃತ್ವದ ಪಾಕಿಸ್ತಾನವನ್ನು ಎದುರಿಸಲಿದೆ. ನ್ಯೂಜಿಲೆಂಡ್‌ ವಿರುದ್ಧ ಭಾರತ ತಂಡದ ವನಿತೆಯರು ಸೋಲನುಭವಿಸಿದ್ದರು. ನಂತರ ಶ್ರೀಲಂಕಾ ವಿರುದ್ಧ ಜಯ ಗಳಿಸಿತ್ತು.

ಶುಕ್ರವಾರ ಕೀವಿಸ್‌ ವಿರುದ್ಧ ಭಾರತ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ವೈಫಲ್ಯದಿಂದ 58 ರನ್‌ಗಳಿಂದ ಸೋಲೊಪ್ಪಿಕೊಂಡಿತು. ತಂಡವು ಈಗ ಕಳಪೆ ನೆಟ್‌ ರನ್‌ರೇಟ್‌ ಹೊಂದಿದ್ದು, 5 ತಂಡಗಳಿರುವ ‘ಎ’ ಗುಂಪಿನಲ್ಲಿ ಕೊನೆ ಸ್ಥಾನದಲ್ಲಿದೆ.

ಪಾಕ್‌ ವಿರುದ್ಧ ಪಂದ್ಯ ಸೇರಿ ಇನ್ನೂ ಒಟ್ಟು 3 ಪಂದ್ಯಗಳನ್ನು ಟೀಂ ಇಂಡಿಯಾ ಆಡಲಿದೆ. ಈ ಎಲ್ಲಾ ಪಂದ್ಯಗಳಲ್ಲೂ ಗೆಲ್ಲುವ ಅಗತ್ಯ ಇದೆ. ಇಂದಿನ ಪಂದ್ಯ ಮಾಡು ಇಲ್ಲವೇ ಮಡಿ ಕದನವಾಗಿದೆ. ಒಂದು ವೇಳೆ ಪಾಕ್‌ ವಿರುದ್ಧ ಸೋತರೆ ಭಾರತ ಸೆಮಿಫೈನಲ್‌ನಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ.

ಭಾರತ-ಪಾಕಿಸ್ತಾನ ನಡುವೆ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಇದು 8 ನೇ ಪಂದ್ಯ. ಈ ಹಿಂದಿನ 7 ಪಂದ್ಯಗಳಲ್ಲಿ ಭಾರತ 5 ರಲ್ಲಿ ಜಯ ಸಾಧಿಸಿದ್ದು, 2ರಲ್ಲಿ ಸೋಲನುಭವಿಸಿದೆ. ಇಂದು ಮಧ್ಯಾಹ್ನ 3:30ಕ್ಕೆ ಪಂದ್ಯ ಆರಂಭವಾಗಲಿದೆ.

ಟೀಂ ಇಂಡಿಯಾ ಆಟಗಾರರು: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಹರ್ಮನ್‌ಪ್ರೀತ್ ಕೌರ್ (ಕ್ಯಾಪ್ಟನ್), ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೇಟ್‌ ಕೀಪರ್), ಪೂಜಾ ವಸ್ತ್ರಾಕರ್, ದೀಪ್ತಿ ಶರ್ಮಾ, ಅರುಂಧತಿ ರೆಡ್ಡಿ, ಶ್ರೇಯಾಂಕ ಪಾಟೀಲ್, ಆಶಾ ಸೋಭಾನಾ, ರೇಣುಕಾ ಸಿಂಗ್‌.

ಪಾಕ್‌ ಆಟಗಾರರು: ಮುನೀಬಾ ಅಲಿ (ವಿಕೇಟ್‌ ಕೀಪರ್), ಗುಲ್ ಫಿರೋಜಾ, ಸಿದ್ರಾ ಅಮೀನ್, ಒಮೈಮಾ ಸೊಹೈಲ್, ನಿದಾ ದಾರ್, ತುಬಾ ಹಸನ್, ಫಾತಿಮಾ ಸನಾ (ಕ್ಯಾಪ್ಟನ್), ಅಲಿಯಾ ರಿಯಾಜ್, ಡಯಾನಾ ಬೇಗ್, ನಶ್ರಾ ಸಂಧು, ಸಾದಿಯಾ ಇಕ್ಬಾಲ್.‌

Share This Article