ನಾನು 10 ವರ್ಷ ಪಟ್ಟ ಕಷ್ಟಕ್ಕೆ ನ್ಯಾಯ ಸಿಕ್ಕಿದೆ, ನ್ಯಾಯಾಲಯದ ತೀರ್ಪನ್ನು ಸ್ವಾಗತ ಮಾಡ್ತೀನಿ: ಯೋಗೀಶ್ ಗೌಡ ಪತ್ನಿ

2 Min Read

– ನನ್ನ ಗಂಡನ ಸ್ಥಾನದಲ್ಲಿ ನನ್ನ ಮಗ ಬರಬೇಕು: ಮಲ್ಲಮ್ಮ

ಧಾರವಾಡ: ನಾನು ಹತ್ತು ವರ್ಷ ಪಟ್ಟ ಕಷ್ಟಕ್ಕೆ ನ್ಯಾಯ ಸಿಕ್ಕಿದೆ. ನ್ಯಾಯಾಲಯದ ತೀರ್ಪನ್ನು ಸ್ವಾಗತ ಮಾಡುವೆ ಎಂದು ಯೋಗೀಶ್ ಗೌಡ ಪತ್ನಿ (Yogesh Gowda Wife) ಮಲ್ಲಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ (Yogesh Gowda Murder Case) ಶಾಸಕ ವಿನಯ್ ಕುಲಕರ್ಣಿ (Vinay Kulkarni) ಸೇರಿದಂತೆ 16 ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ. ಈ ಹಿನ್ನೆಲೆ ಇದೇ ಮೊದಲ ಬಾರಿಗೆ ‘ಪಬ್ಲಿಕ್ ಟಿವಿ’ಯೊಂದಿಗೆ ಮಾತನಾಡಿದ ಪತ್ನಿ ಮಲ್ಲಮ್ಮ, ನನಗೆ ಇದು ಸಮಾಧಾನ ತಂದಿಲ್ಲ. ನನ್ನ ಗಂಡನ ಸ್ಥಾನದಲ್ಲಿ ನನ್ನ ಮಗ ಬರಬೇಕು. ನಮ್ಮ ಕ್ಷೇತ್ರದ ಜನ ಮಗನನ್ನು ಮಡಿಲಲ್ಲಿ ಹಾಕಿಕೊಳ್ಳಬೇಕು. ಅವರ ತಂದೆಯಂತೆ ಮಗ ಬೆಳೆಯಬೇಕು. ಆಗ ನನ್ನ ಗಂಡನ ಆತ್ಮಕ್ಕೆ ಶಾಂತಿ ಸಿಗಲಿದೆ. ಹತ್ತು ವರ್ಷ ನಾನು ಹೇಗೆ ಕಷ್ಟಪಟ್ಟು ಮಕ್ಕಳನ್ನು ಬೆಳೆಸಿದ್ದೆನೆ ನನಗೆ ಗೊತ್ತು. ನನ್ನ ಮೇಲೆ ಬಂದ ನಿಂದನೆ ಬಗ್ಗೆ ನಾನು ಏನು ಮಾತನಾಡಲ್ಲ. ನಾನು ಯಾಕೆ ಹಾಗೆ ಮಾಡಿದೆ ಅಂತ ಪತ್ನಿಯಾದ ಪ್ರತಿಯೊಂದು ಮಹಿಳೆಗೆ ಗೊತ್ತಾಗುತ್ತದೆ. ನನಗೆ ಯಾರು ಏನು ನಿಂದನೆ ಮಾಡಿದ್ರು ಇಂದಿಗೆ ಕ್ಷಮಿಸಿ ಬಿಡುವೆ ಎಂದರು. ಇದನ್ನೂ ಓದಿ: ಮುಸ್ಲಿಂ ನಾಯಕರಿಗೆ ಕಾಂಗ್ರೆಸ್‌ ಸಹಾಯ ಮಾಡಿದಷ್ಟು ಯಾರೂ ಮಾಡಿಲ್ಲ, ಮಾಡೋದಿಲ್ಲ: ಡಿಕೆಶಿ

ಎಚ್ಚರಿಕೆ ಕೊಟ್ಟರು, ಮೊದಲೇ ಕೊಟ್ಟಿದ್ದರೆ ನನ್ನ ಗಂಡ ಉಳಿಯುತ್ತಿದ್ದ. ಈಗ ಎಲ್ಲಾ ಕಷ್ಟ ಅನುಭವಿಸಿದ ನಮಗೆ ಎಲ್ಲರೂ ಎಚ್ಚರಿಕೆ ಕೊಟ್ಟರೆ ಉಪಯೋಗವೇನು. ನಮ್ಮದು ಪ್ರೇಮ ವಿವಾಹ, ಹೀಗಾಗಿ ನನ್ನ ಗಂಡನ ಮನೆಯವರು, ತವರು ಮನೆಯವರು ಯಾರು ನನ್ನ ಸಹಾಯಕ್ಕೆ ಬರಲಿಲ್ಲ. ನನ್ನ ಕ್ಷೇತ್ರದ ಜನರು ನನಗೆ ಬೆನ್ನೆಲುಬಾಗಿ ನಿಂತಿದ್ದಾರೆ. ನನ್ನ ಗಂಡ 28 ಲಕ್ಷ ಸಾಲ ಮಾಡಿದ್ದರು. ಆ ಸಾಲ ತೀರಿಸಿಕೊಂಡು ನಾನು ಜೀವನ ನಡೆಸಿಕೊಂಡು ಹೋದರು. ನನ್ನ ಗಂಡನ ಕಡೆಯವರು, ತವರು ಮನೆಯವರು ಕೈ ಹಿಡಿದ್ದರೆ ನನ್ನ ಗಂಡ ಸಾಯುತ್ತಿರಲಿಲ್ಲಾ. ನಾನು ರಾಜಕೀಯ ಕ್ಷೇತ್ರಕ್ಕೆ ಬರುವುದಕ್ಕಿಂತ ನನ್ನ ಮಕ್ಕಳು ರಾಜಕೀಯಕ್ಕೆ ಬಂದರೆ ಸಂತಸ. ನನ್ನ ಪುತ್ರನನ್ನು ಜಿಲ್ಲಾಪಂಚಾಯಿತಿ ಚುನಾವಣೆ ನಿಲ್ಲಿಸುವ ಆಕಾಂಕ್ಷೆಯಿದೆ. ಅವನ ಪದವಿ ಮುಗಿದ ಬಳಿಕ ನನ್ನ ಕ್ಷೇತ್ರದ ಜನರು ನಿರ್ಧಾರ ಮಾಡಲಿ ಎಂದು ಹೇಳಿದರು. ಇದನ್ನೂ ಓದಿ: ವಿನಯ್ ಕುಲಕರ್ಣಿ ತಪ್ಪು ಮಾಡಿಲ್ಲ ಅಂತ ಭಾವಿಸಿದ್ದೇನೆ: ಡಿಕೆಶಿ

Share This Article