ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ – ಶಾಸಕ ಸ್ಥಾನ ರದ್ದು

2 Min Read

ಬೆಂಗಳೂರು: ಧಾರವಾಡದ (Dharwad) ಜಿಪಂ ಮಾಜಿ ಸದಸ್ಯ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಂಗ್ರೆಸ್‌ ಶಾಸಕ ವಿನಯ್ ಕುಲಕರ್ಣಿಗೆ (Vinay Kulkarni) ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಹಿನ್ನೆಲೆ ಅವರ ಶಾಸಕ ಸ್ಥಾನ ರದ್ದಾಗಿದೆ.

ಬುಧವಾರ ಶಾಸಕರು ಸೇರಿದಂತೆ 16 ಮಂದಿಯನ್ನು ದೋಷಿ ಎಂದು ತೀರ್ಪು ಪ್ರಕಟಿಸಿದ್ದ ಕೋರ್ಟ್‌ (People Representative Court) ಇಂದು (ಶುಕ್ರವಾರ) ಶಿಕ್ಷೆಯ ಅವಧಿ ಪ್ರಕಟಿಸಿದೆ. ಶಿಕ್ಷೆಗೆ ಗುರಿಯಾದ ಹಿನ್ನೆಲೆ ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 8(4) ರ ಪ್ರಕಾರ ತಕ್ಷಣದಿಂದಲೇ ವಿನಯ್‌ ಕುಲಕರ್ಣಿ ಅವರ ಶಾಸಕ ಸ್ಥಾನ ರದ್ದಾಗಿದೆ. ಇದನ್ನೂ ಓದಿ: ಯೋಗೀಶ್‌ ಗೌಡ ಕೊಲೆ ಕೇಸ್‌ – ವಿನಯ್‌ ಕುಲಕರ್ಣಿ ಸೇರಿ 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ತಕ್ಷಣದಿಂದಲೇ ರದ್ದು ಏಕೆ? ನಿಯಮ ಏನು ಹೇಳುತ್ತೆ?
ಜನಪ್ರತಿನಿಧಿ ಕಾಯ್ದೆ, 1951 ರ (The Representation of the People Act, 1951) ಪ್ರಕಾರ ಕೊಲೆ ಕೇಸ್‌ನಲ್ಲಿ ಶಾಸಕರೊಬ್ಬರು ಅಪರಾಧಿ ಎಂದು ಸಾಬೀತಾಗಿ ಕೋರ್ಟ್ ಶಿಕ್ಷೆ ಘೋಷಿಸಿದ ತಕ್ಷಣ, ಅವರ ಶಾಸಕ ಸ್ಥಾನ ಅಧಿಕೃತವಾಗಿ ರದ್ದಾಗುತ್ತದೆ. ಯಾವುದೇ ಶಾಸಕ ಅಥವಾ ಸಂಸದರು ಕ್ರಿಮಿನಲ್ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿ, ಅವರಿಗೆ ನ್ಯಾಯಾಲಯವು ಕನಿಷ್ಠ 2 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯ ಜೈಲು ಶಿಕ್ಷೆ ವಿಧಿಸಿದರೆ, ಅವರು ತಕ್ಷಣವೇ ತಮ್ಮ ಸ್ಥಾನದಿಂದ ಅನರ್ಹಗೊಳ್ಳುತ್ತಾರೆ.

ಕೊಲೆ ಪ್ರಕರಣಗಳಲ್ಲಿ (ಐಪಿಸಿ ಸೆಕ್ಷನ್ 302 ಅಥವಾ ಬಿಎನ್‌ಎಸ್‌ ಸೆಕ್ಷನ್ 103) ಅಪರಾಧ ಸಾಬೀತಾದರೆ ಕನಿಷ್ಠ ಶಿಕ್ಷೆ ಜೀವಾವಧಿ ಕಾರಾಗೃಹ ವಾಸ ಅಥವಾ ಗರಿಷ್ಠ ಮರಣದಂಡನೆ ಆಗಿರುತ್ತದೆ. ಇದು 2 ವರ್ಷಗಳಿಗಿಂತ ಬಹಳ ಹೆಚ್ಚಿರುವುದರಿಂದ, ಕೊಲೆ ಪ್ರಕರಣದಲ್ಲಿ ದೋಷಿಯಾದ ತಕ್ಷಣ ಶಾಸಕ ಸ್ಥಾನ ರದ್ದಾಗುತ್ತದೆ. ಇದನ್ನೂ ಓದಿ: ಮಹಿಳಾ ಸಬಲೀಕರಣ ಅಲ್ಲ, ಭಾರತದ ಚುನಾವಣಾ ನಕ್ಷೆ ಬದಲಿಸುವ ಬಿಲ್: ರಾಹುಲ್ ಗಾಂಧಿ ಆರೋಪ

ಅನರ್ಹತೆಯ ಅವಧಿ ಎಷ್ಟು?
ಕೇವಲ ಶಾಸಕ ಸ್ಥಾನ ರದ್ದಾಗುವುದು ಮಾತ್ರವಲ್ಲ, ಅವರು ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾದ ದಿನದಿಂದ ಮುಂದಿನ 6 ವರ್ಷಗಳ ಕಾಲ ಯಾವುದೇ ಚುನಾವಣೆಗೆ (ಶಾಸಕ, ಸಂಸದ ಇತ್ಯಾದಿ) ಸ್ಪರ್ಧಿಸುವಂತಿಲ್ಲ.

ಲಿಲಿ ಥಾಮಸ್ ಪ್ರಕರಣ (2013): ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಇಂತಹ ಶಿಕ್ಷೆಯಾದ ತಕ್ಷಣವೇ ಅನರ್ಹತೆ ಜಾರಿಗೆ ಬರುತ್ತದೆ, ಮೇಲ್ಮನವಿ ಸಲ್ಲಿಸಲು ಈ ಹಿಂದೆ ಇದ್ದ 3 ತಿಂಗಳ ರಕ್ಷಣೆ ಇರುವುದಿಲ್ಲ. ಪಕ್ಷಾಂತರಕ್ಕೆ ಸಂಬಂಧಿಸಿದ ಅನರ್ಹತೆಯನ್ನ ಸ್ಪೀಕರ್ ಅಥವಾ ಸದನದ ಅಧ್ಯಕ್ಷರು ನಿರ್ಧರಿಸುತ್ತಾರೆ. ಕ್ರಿಮಿನಲ್ ಶಿಕ್ಷೆಗೆ ಸಂಬಂಧಿಸಿದಂತೆ, ಅಪರಾಧ ಸಾಬೀತಾದ ತಕ್ಷಣ ಅನರ್ಹತೆ ಅನ್ವಯವಾಗುತ್ತದೆ.

ವಿನಯ್ ಕುಲಕರ್ಣಿ ಮುಂದಿನ ದಾರಿ ಏನು?
ಜನಪ್ರತಿನಿಧಿ ನ್ಯಾಯಾಲಯವು ಶಿಕ್ಷೆ ಪ್ರಕಟಿಸಿದ ತಕ್ಷಣವೇ ಶಾಸಕರು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು. ಮೇಲಿನ ನ್ಯಾಯಾಲಯವು ಕೇವಲ ಅವರ ಜೈಲು ಶಿಕ್ಷೆಯ ಮೇಲಷ್ಟೇ ಅಲ್ಲದೇ, ಅವರ ಮೇಲಿನ ಅಪರಾಧ ನಿರ್ಣಯದ ಮೇಲೂ ತಡೆಯಾಜ್ಞೆ ನೀಡಿದರೆ ಮಾತ್ರ ಅವರ ಶಾಸಕ ಸ್ಥಾನ ಮರಳಿ ಸಿಗುತ್ತದೆ. ಕೇವಲ ಜಾಮೀನು ಸಿಕ್ಕರೆ ಸ್ಥಾನ ಉಳಿಯುವುದಿಲ್ಲ. ಇದನ್ನೂ ಓದಿ: ಸೂಕ್ಷ್ಮ ನಿರ್ಧಾರ ತೆಗೆದುಕೊಳ್ಳಿ, ತಿದ್ದುಪಡಿಗಳನ್ನು ಬೆಂಬಲಿಸಿ: ಮಹಿಳಾ ಮೀಸಲಾತಿ ಕಾನೂನು ಬೆಂಬಲಕ್ಕೆ ಮೋದಿ ಮನವಿ

Share This Article