ತೆಲಂಗಾಣ ಸಿಎಂ ರೇವಂತ್ ರೆಡ್ಡಿ ನಿವಾಸದ ಮುಂದೆ ಪ್ರತಿಭಟನೆಗೆ ಕರೆ – ಬಿಜೆಪಿ ಅಧ್ಯಕ್ಷ ರಾಮಚಂದರ್ ರಾವ್‌ಗೆ ಗೃಹಬಂಧನ

2 Min Read

ಹೈದರಾಬಾದ್: ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯ (Womens Reservation Bill) ಕುರಿತು ಕಾಂಗ್ರೆಸ್ (Congress) ಪಕ್ಷದ ನಿಲುವನ್ನು ವಿರೋಧಿಸಿ ತೆಲಂಗಾಣ (Telangana) ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿಯವರ (Revanth Reddy) ನಿವಾಸದ ಹೊರಗೆ ಬಿಜೆಪಿ (BJP) ಪ್ರತಿಭಟನೆಗೆ ಕರೆ ನೀಡಿದೆ. ಈ ಹಿನ್ನೆಲೆ ಹೈದರಾಬಾದ್‌ನಲ್ಲಿರುವ ರಾಜ್ಯ ಬಿಜೆಪಿ (BJP) ಅಧ್ಯಕ್ಷ ಎನ್. ರಾಮಚಂದರ್ ರಾವ್ ಅವರನ್ನು ಪೊಲೀಸರು ಗೃಹಬಂಧನದಲ್ಲಿ ಇರಿಸಿದ್ದಾರೆ.

ಸಂಸತ್ತಿನಲ್ಲಿ ಕಲಾಪದ ವೇಳೆ ಮಸೂದೆಗೆ ಕಾಂಗ್ರೆಸ್ ಬೆಂಬಲ ನೀಡದಿರುವುದನ್ನು ವಿರೋಧಿಸಿ ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸಲು ಬಿಜೆಪಿ ಪ್ಲ್ಯಾನ್‌ ಮಾಡಿತ್ತು. ಇದರ ಬೆನ್ನಲ್ಲೇ ರಾಮಚಂದರ್ ರಾವ್ ಅವರನ್ನು ಪೊಲೀಸರು ಗೃಹಬಂಧನದಲ್ಲಿ ಇರಿಸಿದ್ದಾರೆ. ಪೊಲೀಸರ ಕ್ರಮವನ್ನು ರಾವ್‌ ಟೀಕಿಸಿದ್ದು, ಪ್ರಜಾಪ್ರಭುತ್ವ, ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಎಂದು ಕರೆದಿದ್ದಾರೆ. ಇದನ್ನೂ ಓದಿ: ಇಂದು ರಾತ್ರಿ ದೇಶವನ್ನು ಉದ್ದೇಶಿಸಿ ಮೋದಿ ಭಾಷಣ

ಶುಕ್ರವಾರ (ಏ.17) ಸಂಜೆ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ನಾಯಕರು ಹೈದರಾಬಾದ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ರಾಹುಲ್ ಗಾಂಧಿಯವರ ಪ್ರತಿಕೃತಿಯನ್ನು ಸುಟ್ಟು ಅಸಮಾಧಾನ ಹೊರಹಾಕಿದ್ದರು. ಈ ಮೂಲಕ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಕುರಿತು ಕಾಂಗ್ರೆಸ್ ಪಕ್ಷದ ನಿಲುವಿನ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು.

ಪಕ್ಷದ ಉನ್ನತ ಮೂಲಗಳ ಪ್ರಕಾರ, ಭಾರತದಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಂಘಟಿತ ಪ್ರತಿಭಟನೆಗೆ ಬಿಜೆಪಿ ತನ್ನ ರಾಜ್ಯ ಘಟಕಗಳಿಗೆ ನಿರ್ದೇಶನ ನೀಡಿದೆ. ಲಿಂಗ ಸಮಾನತೆಗಾಗಿ ಐತಿಹಾಸಿಕ ಹೆಜ್ಜೆ ಇಡುವುದನ್ನು ತಡೆಯುವಲ್ಲಿ ವಿರೋಧ ಪಕ್ಷದ ಪಾತ್ರವನ್ನು ಬಹಿರಂಗಪಡಿಸುವುದು ಈ ಅಭಿಯಾನದ ಗುರಿಯಾಗಿದೆ ಎಂದು ವರದಿಯಾಗಿದೆ.

ಮಸೂದೆಯ ಪರವಾಗಿ ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸಿ ಮತ್ತು ಶಾಸಕಾಂಗ ಸಂಸ್ಥೆಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸುವ ಸರ್ಕಾರದ ಬದ್ಧತೆಯನ್ನು ಎತ್ತಿ ತೋರಿಸುವ ಉದ್ದೇಶದಿಂದ ಪ್ರತಿಭಟನೆಗೆ ಸಿದ್ಧತೆ ನಡೆಯುತ್ತಿದೆ.‌

ಲೋಕಸಭೆಯಲ್ಲಿ ಮಸೂದೆಯ ಪರವಾಗಿ 298 ಮತ್ತು ವಿರುದ್ಧ 230 ಮತಗಳು ಬಿದ್ದಿದ್ದವು ಎಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಘೋಷಿಸಿದ್ದರು. ಮಸೂದೆಯನ್ನು ಅಂಗೀಕರಿಸಲು ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಅಗತ್ಯವಿದೆ. ಈ ಬೆಂಬಲ ಪಡೆಯಲು ಬಿಜೆಪಿ ನೇತೃತ್ವದ ಸರ್ಕಾರ ವಿಫಲವಾಗಿದೆ. ಇದನ್ನೂ ಓದಿ: ವಿಪಕ್ಷ ತಪ್ಪು ಮಾಡಿದೆ, ಅದರ ಪರಿಣಾಮ ಎದುರಿಸುತ್ತೆ: ಮಹಿಳಾ ಮೀಸಲಾತಿ ಮಸೂದೆ ಸೋಲಿಸಿದ್ದಕ್ಕೆ ಮೋದಿ ಕಿಡಿ

Share This Article