ಇಂದು ಹಿಜಬ್, ನಾಳೆ ಸಂವಿಧಾನವೇ ಬೇಡ ಅಂತಾರೆ ಈ ಮಾನಸಿಕತೆಗೆ ಕಾಂಗ್ರೆಸ್ ಕೈಜೋಡಿಸಬಾರದು: ಸಿ.ಟಿ.ರವಿ

Public TV
2 Min Read

ಚಿಕ್ಕಮಗಳೂರು: ಇವತ್ತು ಹಿಜಬ್ ಅಂತಾರೆ, ನಾಳೆ ಸಂವಿಧಾನವೇ ಬೇಡ ಷರಿಯಾತ್ತೇ ಬೇಕು ಅಂತಾರೆ ಅಂತಹ ಮಾನಸಿಕತೆಗೆ ಕಾಂಗ್ರೆಸ್ ಗೊಬ್ಬರ-ನೀರು ಹಾಕುವುದನ್ನು ಬಿಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

HIJAB

ನಗರದ ಎಐಟಿ ವೃತ್ತದ ಬಳಿ ಮಾತನಾಡಿದ ಅವರು, ಖಿಲಾಫತ್ ಚಳವಳಿಗೆ ಗೊಬ್ಬರ-ನೀರು ಹಾಕಿ ದೇಶ ವಿಭಜನೆ ಆಯ್ತು. ಈಗ ಹಿಜಬ್‍ಗೆ ಗೊಬ್ಬರ ನೀರು ಹಾಕುವುದನ್ನು ಕಾಂಗ್ರೆಸ್ ಬಿಡಬೇಕು. ರಾಜ್ಯದಲ್ಲಿ ಶೇ.99ರಷ್ಟು ಜನ ನ್ಯಾಯಾಲಯದ ಆದೇಶ ಪಾಲನೆ ಮಾಡಿ ಸಮವಸ್ತ್ರ ಒಪ್ಪಿಕೊಂಡು ಪರೀಕ್ಷೆ ಬರೆದಿದ್ದಾರೆ. ಶೇ.1ರಷ್ಟು ಜನ ಈ ವಿಷಯವನ್ನು ಜೀವಂತವಾಗಿಡಲು ಬಯಸಿದ್ದಾರೆ. ಅವರ ನಾಟಕ ಕ್ಯಾಮೆರಾ ಅವರ ಕಡೆ ತಿರುಗಲಿ ಎಂದಷ್ಟೇ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಬುಲ್ಡೋಜರ್ ಕಾನೂನು ಜಾರಿ ಬಗ್ಗೆ ಸಿಎಂ ಜೊತೆ ಚರ್ಚೆ: ಆರ್.ಅಶೋಕ್

ಪರೀಕ್ಷೆ ಬರೆಯದೇ ವಾಪಸ್ ಹೋದವರನ್ನು ಕೆಲವರು ಹೀರೋ, ಹೀರೋಯಿನ್ ರೀತಿ ಬಿಂಬಿಸುತ್ತಿದ್ದಾರೆ. ನಿಮಗೆ ಹಿಜಬ್ ದೊಡ್ಡದೋ, ಪರೀಕ್ಷೆ ದೊಡ್ಡದೋ ಎಂದು ಪ್ರಶ್ನಿಸಿದರು. ಹಿಜಬ್ ದೊಡ್ಡದು ಎನ್ನುವವರು ಕ್ಯಾಮೆರಾ ಮುಂದೆ ನಾಟಕ ಆಡ್ತಿದ್ದಾರೆ. ಶೇ.99 ರಷ್ಟು ಜನ ಸರ್ಕಾರದ ನಿಲುವು, ಕೋರ್ಟ್ ತೀರ್ಪು ಒಪ್ಪಿಕೊಂಡಿದ್ದಾರೆ ಅವರಿಗೆ ಸ್ವಾಗತ. 1983 ರಿಂದ ಇಲ್ಲದ ಚಳವಳಿ ಈಗ ಏಕೆ ಶುರುವಾಗುತ್ತದೆ? ಹುಬ್ಬಳ್ಳಿ ಗಲಾಟೆ ಅಚಾನಕ್ಕಾಗಿ ಆಗಿರುವ ಸಂಗತಿಯಲ್ಲ. ಡಿ.ಜೆ ಹಳ್ಳಿ, ಕೆಜೆ ಹಳ್ಳಿ ಗಲಾಟೆಗೂ ಹುಬ್ಬಳ್ಳಿ ಗಲಾಟೆಗೂ ಸಾಮ್ಯತೆ ಇದೆ. ದೇಶದ ಉದ್ದಗಲಕ್ಕೂ ಗಲಭೆ ಎಬ್ಬಿಸುವ ಷಡ್ಯಂತ್ರ ನಡೆದಿದೆ. ಇದೆಲ್ಲವನ್ನು ನೋಡಿದಾಗ ಅವರು ಜಿನ್ನಾ ಮಾನಸಿಕತೆಯಲ್ಲಿ ಇರುವುದು ಸ್ಪಷ್ಟವಾಗಿದೆ ಎಂದಿದ್ದಾರೆ. ಇದನ್ನೂ ಓದಿ: PSI ನೇಮಕಾತಿಯ ಯಾವುದೇ ಬ್ಯಾಚ್‌ನಲ್ಲಿ ಅಕ್ರಮ ನಡೆದಿದ್ದರೂ ತಪ್ಪಿತಸ್ಥರ ವಿರುದ್ಧ ಕ್ರಮ: ಸಿಎಂ

ಜಿನ್ನಾ ಮಾನಸಿಕತೆಯನ್ನು ಗಾಂಧಿ ಮಾನಸಿಕತೆಯಲ್ಲಿ ಎದುರಿಸಲು ಆಗಲ್ಲ. ಗಾಂಧಿ ಮಾನಸಿಕತೆಯಲ್ಲಿ ಎದುರಿಸಿದಾಗ ದೇಶ ವಿಭಜನೆಯ ಬೆಲೆ ತೆರಬೇಕಾಯಿತು. 46 ಲಕ್ಷ ಜನರ ಮಾರಣಹೋಮ ನಡೆಯಿತು. ಅದ್ದರಿಂದ ಜಿನ್ನಾ ಮಾನಸಿಕತೆಯನ್ನು ನಾವು ಸಾವರ್ಕರ್ ಮಾನಸಿಕತೆಯಲ್ಲಿ ಎದುರಿಸಬೇಕು. ಆಗ ಮಾತ್ರ ದೇಶ ಉಳಿಸಿಕೊಳ್ಳಲು ಸಾಧ್ಯ. ಇದೇ ವೇಳೆ, ಪಿಎಸ್‍ಐ ಅಕ್ರಮದಲ್ಲಿ ಕಾಂಗ್ರೆಸ್ ಆಥವಾ ಬಿಜೆಪಿ ಯಾರೇ ಇದ್ದರೂ ಯಾವುದೇ ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಪಿಎಸ್‍ಐ ನೇಮಕಾತಿಯಲ್ಲಿ ಅಕ್ರಮ ಕಂಡು ಬಂದ ಕೂಡಲೇ ಸಿಎಂ ಹಾಗೂ ಗೃಹ ಸಚಿವರಿಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದೇನೆ. ನಮ್ಮ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸುತ್ತಿದೆ. ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಆಗುತ್ತದೆ. ತನಿಖೆಯನ್ನು ಸಿಐಡಿಗೆ ವಹಿಸಿದ್ದು ಎಷ್ಟೇ ಪ್ರಭಾವಿಗಳಿದ್ರು ಕಠಿಣ ಕ್ರಮ ತಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *