ಇದು ಕೊಲೆಗಡುಕ ಸರ್ಕಾರ: ಎಚ್‍ಡಿಕೆ ಕಿಡಿ

Public TV
2 Min Read

ಬೆಂಗಳೂರು: ನೆಲಮಂಗಲದಲ್ಲಿ ಸಾರಿಗೆ ನೌಕರನ ಪತ್ನಿ ಹಾಗೂ ಆಕೆಯ ಮಕ್ಕಳ ಆತ್ಮಹತ್ಯೆ ಘಟನೆ ಹೃದಯ ವಿದ್ರಾವಕ ಎಂದು ನೊಂದು ನುಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಈ ಸಾವುಗಳಿಗೆ ಸರ್ಕಾರವೇ ನೇರ ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಡದಿಯ ತೋಟದಲ್ಲಿ ಇಂದು ಬೆಳಗ್ಗೆ ಆರಂಭವಾದ ಎರಡನೇ ಹಂತದ ‘ಜನತಾ ಪರ್ವ’ ಹಾಗೂ ‘ಮಿಷನ್ 123’ ಕಾರ್ಯಾಗಾರಕ್ಕೆ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕರ್ತವ್ಯದಲ್ಲಿ ಇದ್ದಾಗಲೇ ಕೊರೊನಾ ಮಹಾಮಾರಿಗೆ ತುತ್ತಾಗಿ ಸಾವನ್ನಪ್ಪಿದ ಸಾರಿಗೆ ನೌಕರನ ಕುಟುಂಬಕ್ಕೆ ಸರ್ಕಾರ ಅರು ತಿಂಗಳ ಒಳಗಾಗಿ ಅನುಕಂಪದ ಉದ್ಯೋಗ ನೀಡಿ ಪರಿಹಾರದ ಹಣವನ್ನು ನೀಡಬೇಕು. ಅಲ್ಲದೆ ಕೋವಿಡ್ ವಾರಿಯರ್ಸ್‍ಗಳಿಗೆ ನೀಡುವ ಪರಿಹಾರವನ್ನು ಕೂಡ ನೀಡಿಲ್ಲ. ಗಂಡನನ್ನು ಕಳೆದುಕೊಂಡ ಆ ಹೆಣ್ಣು ಮಗಳಿಗೆ ಕೆಲಸವೂ ಕೊಟ್ಟಿಲ್ಲ ಎಂದು ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಶಾಸಕರ ಸಮಸ್ಯೆ ಕೇಳಲು ನನ್ನ ಮನೆ ಬಾಗಿಲು ಸದಾ ತೆರೆದಿದೆ: ಹೆಚ್‌ಡಿಕೆ

ಆ ಹೆಣ್ಣು ಮಗಳು ಎಷ್ಟು ನೊಂದಿರಬಹುದು. ಈ ಸರ್ಕಾರಕ್ಕೆ ಯಾವ ಗಮನವೂ ಇರಲಿಲ್ಲ. ಆ ಮುಗ್ದ ಮಕ್ಕಳೂ ಸೇರಿ ಆ ಇಡೀ ಕುಟುಂಬವನ್ನು ಬಲಿ ತೆಗೆದುಕೊಂಡ ಈ ಸರ್ಕಾರ ಕೊಲೆಗಡುಕ ಸರ್ಕಾರ ಅಂದರೆ ತಪ್ಪಾಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಇದನ್ನೂ ಓದಿ: ಅರಸೀಕೆರೆಯಲ್ಲಿ ಆಕ್ಸಿಜನ್ ಘಟಕ ಉದ್ಘಾಟನೆ ವೇಳೆ ಜೆಡಿಎಸ್, ಬಿಜೆಪಿ ನಡುವೆ ವಾಕ್ಸಮರ

ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದ ಕುಮಾರಸ್ವಾಮಿ ಅವರು, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

ಟ್ವೀಟ್‍ನಲ್ಲಿ ಏನಿದೆ?
ನೆಲಮಂಗಲದಲ್ಲಿ ಸಾರಿಗೆ ನೌಕರನ ಪತ್ನಿ ಮತ್ತು ಮಕ್ಕಳ ಆತ್ಮಹತ್ಯೆ ಪ್ರಕರಣ ಹೃದಯ ವಿದ್ರಾವಕ. ಈ ಘಟನೆಯನ್ನು ಸರ್ಕಾರ ತಡೆಯಬಹುದಿತ್ತು. ಮೊದಲೇ ಆ ಕುಟುಂಬಕ್ಕೆ ಪರಿಹಾರ, ಅನುಕಂಪದ ಉದ್ಯೋಗ ನೀಡಿದ್ದಿದ್ದರೆ ಮೂರು ಅಮೂಲ್ಯ ಜೀವಗಳು ಉಳಿಯುತ್ತಿದ್ದವು. ಇದು ಕೊಲೆಗಡುಕ ಸರ್ಕಾರ.

ಎಲ್ಲಾ ದುಂದು ವೆಚ್ಚ, ಲೂಟಿ ನಿಲ್ಲಿಸಿ ಸರ್ಕಾರ ಇಂತವರ ನೆರವಿಗೆ ಧಾವಿಸಬೇಕಿತ್ತು. ಇಂತಹ ಪ್ರಕರಣಗಳ ಇತ್ಯರ್ಥಕ್ಕೆ ಮೊದಲ ಆದ್ಯತೆ ನೀಡಬೇಕಿತ್ತು. ರಾಜ್ಯ ಸರ್ಕಾರ ಪೂರ್ಣ ವಿಫಲವಾಗಿದೆ ಹಾಗೂ ಅಧಿಕಾರಿಗಳ ಹೊಣೆಗೇಡಿತನ ಎದ್ದು ಕಾಣುತ್ತದೆ. ಇದನ್ನೂ ಓದಿ: ಮಮತಾಗೆ ಭರ್ಜರಿ ಜಯ – 2024ರಲ್ಲಿ ದೆಹಲಿಯಲ್ಲಿ ನಮ್ಮದೇ ಸರ್ಕಾರ ಎಂದ ಟಿಎಂಸಿ

ಕೂಡಲೇ ಸಂಬಂಧಪಟ್ಟ ಎಲ್ಲ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಸ್ವತಃ ಮುಖ್ಯಮಂತ್ರಿಗಳೇ ಈ ಬಗ್ಗೆ ಗಮನ ಹರಿಸಿ ಕೊರೊನ ಸೋಂಕಿಗೆ ಬಲಿಯಾದ ಸಾರಿಗೆ ನೌಕರರ ಕುಟುಂಬಗಳಿಗೆ ನೆರವುನೀಡಿ, ಮುಂದಿನ ಅನಾಹುತಗಳನ್ನು ತಪ್ಪಿಸಬೇಕು ಎಂದು ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯ ಮಾಡುತ್ತೇನೆ.

 

Share This Article
Leave a Comment

Leave a Reply

Your email address will not be published. Required fields are marked *