ಚನ್ನಪಟ್ಟಣದಲ್ಲಿ HDK V/s CPY- ಕ್ರೆಡಿಟ್ ವಾರ್‌ನಿಂದ ಕಾಮಗಾರಿ ಕುಂಠಿತ

Public TV
2 Min Read

ರಾಮನಗರ: ವಿಧಾನಸಭಾ ಚುನಾವಣೆ (Vidhanasabha Election) ಸಮೀಪ ಹಿನ್ನೆಲೆ ಗೊಂಬೆನಾಡು ಚನ್ನಪಟ್ಟಣದಲ್ಲಿ ಇದೀಗ ರಾಜಕೀಯ ಜಟಾಪಟಿ ಉಂಟಾಗಿದೆ. ಹಾಲಿ ಮತ್ತು ಮಾಜಿ ಶಾಸಕರ ಕ್ರೆಡಿಟ್ ವಾರ್ ನಿಂದಾಗಿ ಕ್ಷೇತ್ರದ ಬಹುತೇಕ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ರಸ್ತೆ ಕಾಮಗಾರಿ ಆರಂಭವಾಗದೇ ಸಾರ್ವಜನಿಕರು ಹೈರಾಣಾಗಿದ್ದು ಜನಪ್ರತಿನಿಗಳ ವಿರುದ್ಧ ಹಿಡಿಶಾಪ ಹಾಕಿದ್ದಾರೆ.

ಚುನಾವಣೆಗೆ ಇನ್ನು ಕೆಲವು ತಿಂಗಳು ಬಾಕಿ ಇವೆ. ಬೊಂಬೆನಗರಿ ಚನ್ನಪಟ್ಟಣದಲ್ಲಿ ಚುನಾವಣಾ ಕಾವು ಜೋರಾಗುತ್ತಿದೆ. ರಸ್ತೆ ಕಾಮಗಾರಿ ವಿಚಾರದಲ್ಲೂ ರಾಜಕೀಯ ಜಟಾಪಟಿ ಏರ್ಪಟ್ಟಿದೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಮತ್ತು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (CP Yogeshwar) ನಡುವಿನ ಈ ಜಟಾಪಟಿಯಲ್ಲಿ ಹಲವು ಕಾಮಗಾರಿಗಳು ಆರಂಭವಾಗದೇ ನೆನೆಗುದಿಗೆ ಬಿದ್ದಿವೆ. ರಸ್ತೆ ತುಂಬೆಲ್ಲಾ ಗುಂಡಿಗಳು ರಾರಾಜಿಸುತ್ತಿದ್ದು, ವಾಹನ ಚಲಾಯಿಸಲು ಸವಾರರು ಹರಸಾಹಸ ಪಡ್ತಿದ್ದಾರೆ. ಗುಂಡಿ ರಸ್ತೆಗಳಿಗೆ ಬಿದ್ದು ಜನ ಗಾಯಕ್ಕೊಳಗಾಗ್ತಿದ್ದಾರೆ.

ಚನ್ನಪಟ್ಟಣ ತಾಲೂಕಿನ ಕೆಂಗಲ್ ಗ್ರಾಮದಿಂದ ಕಣ್ವ ಜಲಾಶಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ರಸ್ತೆ ತುಂಬೆಲ್ಲ ಸಾಲು ಸಾಲು ಗುಂಡಿಗಳು ಬಿದ್ದಿವೆ. ಸಾಕಷ್ಟು ಜನ ಗುಂಡಿ ತಪ್ಪಿಸಲು ಹೋಗಿ ಆಯಾತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ರಸ್ತೆ ಹದಗೆಟ್ಟು ಐದು ವರ್ಷಗಳೇ ಕಳೆದಿವೆ. ಇದನ್ನೂ ಓದಿ: ಒಕ್ಕಲಿಗರ ಮತಗಳು ಬಿಜೆಪಿಗೆ ವಾಲುತ್ತಿರುವುದು ಹೆಚ್‌ಡಿಕೆಗೆ ಆತಂಕ ಹೆಚ್ಚಿಸಿದೆ – ಸಿ.ಪಿ.ಯೋಗೇಶ್ವರ್

ರಸ್ತೆ ಅಭಿವೃದ್ಧಿಗಾಗಿ ಈಗಾಗಲೇ ಸರ್ಕಾರದಿಂದ ಅನುದಾನ ಸಹಾ ಬಿಡುಗಡೆಯಾಗಿದೆ. ಆದರೆ ಚನ್ನಪಟ್ಟಣ ತಾಲೂಕಿನಲ್ಲಿ ಪ್ರತಿಯೊಂದು ಕಾಮಗಾರಿ ವಿಚಾರವಾಗಿ ಮಾಜಿ ಸಿಎಂ ಎಚ್?.ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟು ಕಾಮಗಾರಿಗಳು ನಡೆಯುತ್ತಿಲ್ಲ. ಇಬ್ಬರು ನಾಯಕರ ಜಟಾಪಟಿಯಿಂದಾಗಿ ಜನಸಾಮಾನ್ಯರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.

ಒಟ್ಟಾರೆ ರಾಜಕೀಯ ಮೇಲಾಟಕ್ಕೆ ಬೊಂಬೆನಾಡು ಚನ್ನಪಟ್ಟಣ ಬಡವಾಗ್ತಿದೆ. ನಾಯಕರ ಕ್ರೆಡಿಟ್ ವಾರ್ ಹಲವು ಕಾಮಗಾರಿಗೆ ವಿಘ್ನವನ್ನ ಉಂಟುಮಾಡಿದೆ. ಇದರಿಂದ ಜನಸಾಮಾನ್ಯರು ಮಾತ್ರ ನರಕಯಾತನೆ ಅನುಭಿಸುವಂತಾಗಿದೆ. ಇನ್ನಾದರೂ ಜನಪ್ರತಿನಿಧಿಗಳು ತಮ್ಮ ರಾಜಕೀಯ ಬದಿಗಿಟ್ಟು ಸಮಸ್ಯೆ ಸರಿಪಡಿಸುವತ್ತ ಗಮನಹರಿಸಬೇಕಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *