ಹಾಸನಾಂಬ ಜಾತ್ರಾ ಮಹೋತ್ಸವ – ಭಕ್ತರಿಗೆ ದರ್ಶನ ಕೊಟ್ಟ ಹಾಸನಾಂಬೆ

Public TV
2 Min Read

ಹಾಸನ: ವಿಶೇಷವಾಗಿ ವರ್ಷಕ್ಕೊಮ್ಮೆ ಮಾತ್ರ ದರ್ಶನ ಭಾಗ್ಯ ಕರುಣಿಸುವ ಹಾಸನದ ಅಧಿದೇವತೆ ತಾಯಿ ಹಾಸನಾಂಬೆ ಜಾತ್ರಾ ಮಹೋತ್ಸವ (Hasanamba jatra mahotsava) ಕ್ಕೆ ಗುರುವಾರ ಶುಭ ಚಾಲನೆ ದೊರೆಯಿತು. ಆಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12.12 ಕ್ಕೆ ಅರಸು ವಂಶಸ್ಥ ನಂಜರಾಜೆ ಅರಸ್ ಸಂಪ್ರದಾಯದಂತೆ ಗೊನೆಯುಳ್ಳ ಬಾಳೆ ಕಂಬ ಕಡಿದ ನಂತರ ಹಲವು ಗಣ್ಯರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲು ತೆರೆಯಿತು. ಈ ವೇಳೆ ಹಾಜರಿದ್ದ ನೂರಾರು ಭಕ್ತರು, ಹಾಸನಾಂಬೆಗೆ ಜಯವಾಗಲಿ ವಿಶೇಷತಃ ಘೋಷವಾಕ್ಯ ಮೊಳಗಿಸಿದರು.

ಅರಸು ವಂಶಸ್ಥ ನಂಜ ರಾಜೆ ಅರಸು ಗೊನೆಯುಳ್ಳ ಬಾಳೆಕಂಬ ಕಡಿದ ನಂತರ ಗರ್ಭಗುಡಿಯಲ್ಲಿ ಮರೆಯಾಗಿದ್ದ ಹಾಸನಾಂಬೆ ವರ್ಷದ ನಂತರ ದರ್ಶನ ಕರುಣಿಸಿದಳು. ಗರ್ಭಗುಡಿ ಬಾಗಿಲು ತೆರೆದ ವೇಳೆ ಕಳೆದ ವರ್ಷ ಹಚ್ಚಿದ್ದ ದೀಪ ಉರಿಯುತ್ತಿದ್ದು, ಹೂವು ಬಾಡಿರಲಿಲ್ಲ, ನೈವೇದ್ಯ ಹಳಸಿರಲಿಲ್ಲ. ಈ ವಿಶೇಷ ಸಂದರ್ಭಕ್ಕೆ ಸಚಿವರಾದ ಕೆ.ಗೋಪಾಲಯ್ಯ (K Gopalaiah), ಶಾಸಕ ಪ್ರೀತಂಗೌಡ (Preetham Gowda), ಡಿಸಿ, ಎಸ್ಪಿ ಸೇರಿದಂತೆ ಹಲವರು ಸಾಕ್ಷಿಯಾದರು. ಮೊದಲ ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇಲ್ಲ ಎಂದು ಹೇಳಿದ್ದರೂ, ಬೆಳಗ್ಗೆಯಿಂದಲೇ ಸಾವಿರಾರು ಮಂದಿ ದೇವಾಲಯದ ಒಳ-ಹೊರಗೆ ಜಮಾಯಿಸಿದ್ದರು. ಕೆಲವರು ಸರತಿ ಸಾಲಿನಲ್ಲಿ ನಿಂತಿದ್ದರು. ಕಡೆಗೆ ಆಗಮಿಸಿದ್ದ ಎಲ್ಲರಿಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಹಾಸನಾಂಬೆ ಹಲವು ಪವಾಡ ಸದೃಶ ಸಂಗತಿಗಳನ್ನು ಮೈಗೂಡಿಸಿಕೊಂಡಿದ್ದಾಳೆ. ಪ್ರತಿ ವರ್ಷ ಗರ್ಭಗುಡಿ ಬಾಗಿಲು ಹಾಕುವಾಗ ಹಚ್ಚಿದ ಹಣತೆ, ಇಟ್ಟ ನೈವೇದ್ಯ, ಮುಡಿಸಿದ ಹೂ ಬಾಡುವುದಿಲ್ಲ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಜೊತೆಗೆ ಬೇಡಿದ ಇಷ್ಟಾರ್ಥಗಳನ್ನು ಅಧಿದೇವತೆ ಈಡೇರಿಸುತ್ತಾಳೆ ಎಂಬ ನಂಬಿಕೆ ಇರುವುದರಿಂದ ಜಿಲ್ಲೆ ಮಾತ್ರವಲ್ಲದೆ ರಾಜ್ಯ, ಹೊರ ರಾಜ್ಯಗಳಿಂದಲೂ ಲಕ್ಷಾಂತರ ದೇವಿ ದರ್ಶನಕ್ಕಾಗಿ ಆಗಮಿಸುತ್ತಾರೆ. ಮಳೆ-ಬಿಸಿಲಿಂದ ರಕ್ಷಿಸಿ ಭಕ್ತರಿಗೆ ಅನುಕೂಲವಾಗಲಿ ಎಂದು ದೇಗುಲದ ಹೊರಗಡೆ ಟೆಂಟ್ ನಿರ್ಮಿಸಲಾಗಿದೆ. ಇದನ್ನೂ ಓದಿ: ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಬ್‌ ನಿಷೇಧ ಮುಂದುವರಿಕೆ – ಸಚಿವ ಬಿ.ಸಿ.ನಾಗೇಶ್

ಅ.14 ರಿಂದ ಬೆಳಗ್ಗೆ 6 ಗಂಟೆಯಿಂದ 4 ಗಂಟೆಯವರೆಗೆ ಸಾರ್ವಜನಿಕ ದರ್ಶನವಿದ್ದು, ಸಂಜೆ 4 ಗಂಟೆಯಿಂದ ದರ್ಶನ ಇರುವುದಿಲ್ಲ. ಅ.15 ರಿಂದ ಅ.24 ರವರೆಗೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾರ್ವಜನಿಕರಿಗೆ ದರ್ಶನವಿರುತ್ತದೆ. ಮಧ್ಯಾಹ್ನ 1 ರಿಂದ 3.30 ರವರೆಗೆ ದರ್ಶನ ಇರುವುದಿಲ್ಲ. 3.30 ರಿಂದ ಭಕ್ತರು ಇರುವವರೆಗೂ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅ.25 ರಂದು ಗ್ರಹಣ ಹಿನ್ನೆಲೆಯಲ್ಲಿ ಸಾರ್ವಜನಿಕ ದರ್ಶನ ಇರುವುದಿಲ್ಲ. ಅ.26 ಬಲಿಪಾಡ್ಯಮಿ ದಿನದಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ದರ್ಶನವಿದ್ದು, 4 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಸಾರ್ವಜನಿಕರಿಗೆ ದರ್ಶನವಿರುತ್ತದೆ. ಅ.27 ರಂದು ಸಾರ್ವಜನಿಕರಿಗೆ ದರ್ಶನ ಇರುವುದಿಲ್ಲ ಮಧ್ಯಾಹ್ನದ ನಂತರ ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಹಾಕಲಾಗುವುದು.

ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ದೇವಾಲಯದ ಒಳ-ಹೊರಗು ಬಣ್ಣ ಬಣ್ಣದ ಹೂ ಹಾಗೂ ವಿದ್ಯುತ್ ದೀಪಗಳಿಂದ ಸಿಂಗಾರ ಮಾಡಲಾಗಿದೆ. ಈ ಬಾರಿ ಹೆಚ್ಚು ದಿನಗಳು ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಇಡಿ ಹಾಸನ ನಗರ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *