ಗುರು ರಾಯರ ವೈಭವೋತ್ಸವಕ್ಕೆ ಅದ್ಧೂರಿ ತೆರೆ

Public TV
1 Min Read

ರಾಯಚೂರು: ಕಳೆದ ಆರು ದಿನಗಳಿಂದ ನಡೆದ ಗುರು ರಾಯರ ವೈಭವೋತ್ಸವ ಸಂಭ್ರಮಕ್ಕೆ ವಿದ್ಯುಕ್ತವಾಗಿ ತೆರೆ ಬಿದ್ದಿದೆ. ರಾಯರ ಹುಟ್ಟುಹಬ್ಬವನ್ನು ಭಕ್ತರು ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ.

ಕಲಿಯುಗದ ಕಾಮಧೇನು ಅಂತಲೇ ಕರೆಯುವ ಮಂತ್ರಾಲಯದ ಗುರು ರಾಘವೇಂದ್ರ ಶ್ರೀಗಳ 425ನೇ ಹುಟ್ಟುಹಬ್ಬ ಸೋಮವಾರ ನೆರವೇರಿತು. ಈ ದಿನವನ್ನು ಭಕ್ತರು ವರ್ಧಂತೋತ್ಸವವಾಗಿ ಆಚರಣೆ ಮಾಡಿದರು. ರಾಯರ ವರ್ಧಂತ್ಯೋತ್ಸವ ಹಾಗೂ ಪಟ್ಟಾಭಿಷೇಕ ಹಿನ್ನೆಲೆಯಲ್ಲಿ ಮಂತ್ರಾಲಯದಲ್ಲಿ 7 ದಿನಗಳ ಕಾಲ ಗುರು ವೈಭವೋತ್ಸವ ಆಚರಣೆ ಮಾಡಲಾಯಿತು. ಇದನ್ನೂ ಓದಿ: ರಾಯರ ಸನ್ನಿಧಿಯಲ್ಲಿ ಹಾಡು ಹೇಳಿ ಭಾವುಕರಾದ ಪುನೀತ್

ಈ 7 ದಿನ ಬೆಳಗ್ಗೆಯಿಂದಲೇ ಸುಪ್ರಭಾತ, ನಿರ್ಮಾಲ್ಯ, ಮೂಲ ರಾಮದೇವರ ಪೂಜೆ ನಡೆದಿದ್ದು, ಸೋಮವಾರ ರಾಯರ ಪಾದುಕೆಗಳನ್ನು ನವರತ್ನ ಖಚಿತ ರಥದಲ್ಲಿಟ್ಟು ಮೆರವಣಿಗೆ ಮಾಡಲಾಯಿತು. ಹಿಂದಿನಿಂದ ಬಂದ ಪರಂಪರೆಯನ್ನು ಮಠದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮೆರವಣಿಗೆ ಬಳಿಕ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಭಕ್ತರಿಗೆ ಆಶಿರ್ವಚನ ನೀಡಿದರು.

ಪ್ರತಿ ಬಾರಿಯಂತೆ ಈ ಬಾರಿಯೂ ವರ್ಧಂತಿ ಉತ್ಸವಕ್ಕೆ ವಿಶೇಷವಾಗಿ ತಿರುಪತಿ ತಿರುಮಲ ದೇವಾಲಯದಿಂದ ರಾಯರಿಗೆ ಶೇಷವಸ್ತ್ರಗಳ ಸಮರ್ಪಣೆ ನಡೆಯಿತು. ಇನ್ನೂ ತಮಿಳುನಾಡಿನ ಚೆನೈನ ನಾದಹಾರ ಸೇವಾ ಟ್ರಸ್ಟ್ ನ 400ಕ್ಕೂ ಹೆಚ್ಚು ಕಲಾವಿದರು ಒಟ್ಟಿಗೆ ಹಾಡುವ ಮೂಲಕ ನಾದಸೇವೆಯನ್ನು ಮಾಡಿದರು. ಕಳೆದ 16 ವರ್ಷಗಳಿಂದ ನಾದಹಾರ ಸೇವೆಯನ್ನು ಈ ಭಕ್ತರು ನೆರವೇರಿಸತ್ತಾ ಬಂದಿದ್ದಾರೆ. ದೇಶದ ಮೂಲೆ ಮೂಲೆಯಿಂದ ಬಂದ ಭಕ್ತರು ಭಾವಪರವಶರಾಗಿದ್ದರು.

ಗುರು ವೈಭವೋತ್ಸವ ಹಿನ್ನೆಲೆ ಮಠದಲ್ಲಿ ಪ್ರತಿದಿನ ಸಂಜೆ ಸಾಂಸ್ಕøತಿಕ ಕಾರ್ಯಕ್ರಮಗಳ ಜೊತೆ ಪ್ರವಚನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಮಾಡಲಾಯಿತು. ಸೋಮವಾರ ಉತ್ಸವಕ್ಕೆ ತೆರೆ ಬಿದ್ದಿದು, ನಾನಾ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮಠಕ್ಕೆ ಆಗಮಿಸಿದ ಭಕ್ತರು ಗುರುವೈಭವೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾದರು.

Share This Article
Leave a Comment

Leave a Reply

Your email address will not be published. Required fields are marked *