ಈಗಲ್‍ಟನ್ ರೆಸಾರ್ಟ್ ಒತ್ತುವರಿ ಮಾಡಿದ ಜಾಗ ಕ್ರೀಡಾ ಸಮುಚ್ಚಯ ನಿರ್ಮಾಣಕ್ಕೆ ನೀಡಿ: ಡಾ.ನಾರಾಯಣಗೌಡ

Public TV
2 Min Read

-ಸಿಎಂ ಹಾಗೂ ಕಂದಾಯ ಸಚಿವರಿಗೆ ಪತ್ರ

ಬೆಂಗಳೂರು: ರಾಮನಗರ ಜಿಲ್ಲಾಡಳಿತ ಮಾಡಿದ ಕಾರ್ಯ ಶ್ಲಾಘನೀಯ. ಬಿಡದಿಯಲ್ಲಿರುವ ಈಗಲ್‍ಟನ್ ರೆಸಾರ್ಟ್ ಒತ್ತುವರಿ ಮಾಡಿಕೊಂಡಿದ್ದ 77 ಎಕರೆ 18 ಗುಂಟೆ ಜಾಗವನ್ನು ಕೋರ್ಟ್ ಆದೇಶದಂತೆ ತೆರವು ಮಾಡಿ ಸರ್ಕಾರದ ವಶಕ್ಕೆ ಪಡೆದುಕೊಳ್ಳಲಾಗಿದೆ. ವಿಶಾಲವಾಗಿರುವ ಈ ನಿವೇಶನ ಕ್ರೀಡಾ ಚಟುವಟಿಕೆಗೆ ಯೋಗ್ಯವಾಗಿದೆ. ಆದ್ದರಿಂದ ಈ ಸ್ಥಳವನ್ನು ಕ್ರೀಡಾ ಸಮುಚ್ಚಯ ನಿರ್ಮಾಣಕ್ಕಾಗಿ ನೀಡಿ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ನಮ್ಮ ರಾಜ್ಯದ ಕ್ರೀಡಾಪಟುಗಳಿಗೆ ಒಲಂಪಿಕ್ಸ್ ಕ್ರೀಡಾಕೂಟ, ಏಷಿಯಾ ಗೇಮ್ಸ್ ಸೇರಿದಂತೆ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ತರಬೇತಿ ನೀಡಲು ವಿಶಾಲ ಪ್ರದೇಶದಲ್ಲಿ ಬೃಹತ್ತಾದ ಕ್ರೀಡಾ ಸಮುಚ್ಚಯ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಕ್ರೀಡಾ ಇಲಾಖೆ ಇದಕ್ಕಾಗಿ ವಿಶಾಲ ನಿವೇಶನವನ್ನೂ ಹುಡುಕುತ್ತಿದೆ. ಪ್ರಸ್ತುತ ರಾಮನಗರದ ಬಿಡದಿಯಲ್ಲಿ ಈಗಲ್‍ಟನ್ ರೆಸಾರ್ಟ್ ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಗೋಮಾಳ ಒತ್ತುವರಿ ತೆರವು ಮಾಡಿ ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡಿದೆ. ಗಾಲ್ಫ್ ಕೋರ್ಟ್ ಕೂಡ ಈ ಸ್ಥಳದಲ್ಲಿದೆ. ಸಮತಟ್ಟಾಗಿರುವ ಈ ವಿಶಾಲ ಪ್ರದೇಶ ಕ್ರೀಡಾ ಸಮುಚ್ಚಯ ನಿರ್ಮಾಣಕ್ಕೆ ಯೋಗ್ಯವಾಗಿದೆ. ಬೆಂಗಳೂರಿಗೂ ಈ ಪ್ರದೇಶ ಸಮೀಪದಲ್ಲಿದೆ. ಆದ್ದರಿಂದ 77 ಎಕರೆ 18 ಗುಂಟೆ ಈ ಪ್ರದೇಶವನ್ನು ಕ್ರೀಡಾ ಇಲಾಖೆಗೆ ಹಸ್ತಾಂತರಿಸಿ ಎಂದು ನಾರಾಯಣಗೌಡ ಅವರು ಬಸವರಾಜ ಬೊಮ್ಮಾಯಿ ಹಾಗೂ ಆರ್.ಅಶೋಕ್ ಅವರಿಗೆ ಪತ್ರದ ಮೂಲಕ ಬೇಡಿಕೆ ಇಟ್ಟಿದ್ದಾರೆ. ಇದನ್ನೂ ಓದಿ: ಬಾಳೆಎಲೆಯಲ್ಲಿ ಮೂಡಿದ ಮೋದಿ ಚಿತ್ರ

ಪ್ರಸ್ತುತ ಬೆಂಗಳೂರಿನ ಕಂಠೀರವ ಕ್ರೀಡಾಂಗಣವನ್ನು ಆಧುನೀಕರಣ ಮಾಡಲಾಗುತ್ತಿದೆ. ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಕ್ರೀಡಾಂಗಣ ಉನ್ನತೀಕರಿಸಲಾಗುತ್ತಿದೆ. ಆದರೆ ಬೆಂಗಳೂರಿಗೆ ಅತ್ಯಂತ ಸಮೀಪವಿರುವ ಇಷ್ಟೊಂದು ವಿಶಾಲ ಪ್ರದೇಶದಲ್ಲಿ ಬೃಹತ್ತಾದ ಕ್ರೀಡಾ ಸಮುಚ್ಚಯ ನಿರ್ಮಿಸಿದರೆ ಕ್ರೀಡಾಪಟುಗಳಿಗೆ ಹೆಚ್ಚು ಅನುಕೂಲವಾಗಲಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣವೂ ಸಮೀಪದಲ್ಲೇ ಇದೆ. ಬೆಂಗಳೂರು ಮೈಸೂರು ನಡುವೆ ವಿಶಾಲ ರಸ್ತೆಯೂ ನಿರ್ಮಾಣವಾಗುತ್ತಿದೆ. ಇದರಿಂದಾಗಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಆಯೋಜಿಸಲು ಈ ಸ್ಥಳ ಪ್ರಶಸ್ತವಾಗಲಿದೆ. ಆದ್ದರಿಂದ ರಾಮನಗರದ ಬಿಡದಿಯಲ್ಲಿ ಈಗಲ್‍ಟನ್ ರೆಸಾರ್ಟ್ ನಿಂದ ಒತ್ತುವರಿ ತೆರವು ಮಾಡಿರುವ ಸರ್ಕಾರಿ ಗೋಮಾಳವನ್ನು ಕ್ರೀಡಾ ಇಲಾಖೆಗೆ ಹಸ್ತಾಂತರಿಸಿ ಕ್ರೀಡೆಗೆ ಪ್ರೋತ್ಸಾಹಿಸಿ ಎಂದು ನಾರಾಯಣಗೌಡ ಅವರು ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ ಯಾವುದೇ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ: ಬಿಎಸ್‍ವೈ

Share This Article
Leave a Comment

Leave a Reply

Your email address will not be published. Required fields are marked *