ರಾಜ್ಯದಲ್ಲಿ ಮುಂದುವರಿದ ʻಗ್ಯಾಸ್ ಟ್ರಬಲ್‌ʼ – ಮಾಂಸಹಾರಿ ಹೋಟೆಲ್, ರೆಸ್ಟೋರೆಂಟ್‌ಗಳು ಬಂದ್

3 Min Read

– ಗ್ಯಾಸ್ ಇಲ್ಲ.. ಅನ್ನ-ಸಾಂಬಾರ್ ಮಾತ್ರ ಲಭ್ಯ

ಬೆಂಗಳೂರು: ಮಧ್ಯಪ್ರಾಚ್ಯದ ಯುದ್ಧದ ಎಫೆಕ್ಟ್‌ನಿಂದ ಬೆಂಗಳೂರಿನ ಬಹುತೇಕ ಹೋಟೆಲ್‌ಗಳು (Bengaluru Hotels) ತತ್ತರಿಸಿ ಹೋಗಿದೆ. ಕಮರ್ಷಿಯಲ್ ಸಿಲಿಂಡರ್ (Commercial cylinder) ಅಭಾವ ಹಿನ್ನೆಲೆ ಮಾಂಸಹಾರಿ ಹೋಟೆಲ್‌ಗಳೂ ಸಂಕಷ್ಟಕ್ಕೆ ಸಿಲುಕಿವೆ. ಅದರಂತೆ ಮೆಜೆಸ್ಟಿಕ್‌ನ ಪ್ರಸಿದ್ಧ ಚಿಕನ್ ಕೌಂಟಿ ಫ್ಯಾಮಿಲಿ ರೆಸ್ಟೋರೆಂಟ್ ಬಂದ್ ಆಗಿದೆ. ಗ್ಯಾಸ್ ಅಭಾವದಿಂದ ಸಮಸ್ಯೆ ಎದುರಾಗಿದ್ದು ಹೋಟೆಲ್ ಬಂದ್ ಮಾಡಲಾಗಿದೆ.

ಇನ್ನೂ ನಿನ್ನೆಯಷ್ಟೇ ಕೇಂದ್ರ ಸರ್ಕಾರದಿಂದ (Central Government) ಕಮರ್ಷಿಯಲ್ ಗ್ಯಾಸ್ ನೀಡುವ ಭರವಸೆ ಸಿಕ್ಕಿದ್ದು, ಮುಂದಿನ ವಾರ ಹೋಟೆಲ್‌ಗಳು ಓಪನ್ ಆಗಲಿದ್ಯಾ ಎಂಬ ಪ್ರಶ್ನೆ ಉದ್ಬವಿಸಿದೆ.

ಎಂಪೈರ್ ಹೋಟೆಲ್‌ನಲ್ಲಿ 60% ಮೆನು ಕಟ್
ಭಾನುವಾರದ ಬಾಡೂಟಕ್ಕೂ ವಾರ್‌ನ ಬಿಸಿ ತಟ್ಟಿದೆ. ಬೆಂಗಳೂರಿನ ಪ್ರತಿಷ್ಟಿತ ಎಂಪೈರ್ ಹೊಟೇಲ್‌ನಲ್ಲಿ ಶೇಕಡ 60 ರಷ್ಟು ಮೆನುಗೆ ಕತ್ತರಿ ಹಾಕಲಾಗಿದೆ. ಸಿಲಿಂಡರ್ ಹೆಚ್ಚು ಬಳಕೆಯಾಗುವ ಐಟಂಗಳನ್ನ ಮೆನುವಿನಿಂದ ತೆಗೆಯಲಾಗಿದೆ. ಅದರಂತೆ ಮಟನ್, ಗ್ರಿಲ್ ಚಿಕನ್, ಶವರ್ಮಾ ಇರುವುದಿಲ್ಲ. ಸಿಲಿಂಡರ್ ಸಮಸ್ಯೆ ಬಗೆಹರಿಯುವವರಿಗೂ ಈ ಐಟಂಗಳು ಸಿಗುವುದಿಲ್ಲ ಎಂದು ಹೊಟೇಲ್‌ನ ಹೊರಭಾಗದಲ್ಲಿ ಬೋರ್ಡ್ ಹಾಕಲಾಗಿದೆ. ಅಲ್ಲದೇ, ನಗರದ ಎಲ್ಲಾ ಎಂಪೈರ್ ಹೋಟೆಲ್‌ಗಳಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದೆ.

ಸೌತ್ ಮೀಲ್ಸ್, ನಾರ್ಥ್ ಮೀಲ್ಸ್‌ಗೆ ಬ್ರೇಕ್
ಇಷ್ಟು ದಿನ ಹೋಟೆಲ್‌ಗಳಲ್ಲಿ ಸಣ್ಣ-ಪುಟ್ಟ ಐಟಂಗೆ ಬ್ರೇಕ್ ಬೀಳುತ್ತಿತ್ತು. ಸಿಲಿಂಡರ್ ಸಮಸ್ಯೆ ಮುಂದುವರಿದಂತೆ, ಹಲವು ತಿಂಡಿ-ತಿನಿಸುಗಳನ್ನ ಕಡಿತ ಮಾಡಲಾಗಿದೆ. ನಗರದ ಪ್ರಿಯದರ್ಶಿನಿ ಹೋಟೆಲ್‌ನಲ್ಲಿ ಸೌತ್ ಇಂಡಿಯನ್ ಮೀಲ್ಸ್ ಹಾಗೂ ನಾರ್ಥ್ ಇಂಡಿಯನ್ ಮೀಲ್ಸ್ ಕೂಡ ಇರುವುದಿಲ್ಲ. ಜೊತೆಗೆ ಚೈನೀಸ್ ಐಟಂ ಹಾಗೂ ನಾರ್ಥ್ ಇಂಡಿಯನ್ ಕರೀಸ್ ಕೂಡ ಇರುವುದಿಲ್ಲ. ನಿಗದಿತ ಸಮಯಕ್ಕೆ ಬಂದ್ರೆ ದೋಸೆ ಸಿಗಲಿದೆ. ಇನ್ನು ಗ್ಯಾಸ್ ಇಲ್ಲದ ಹಿನ್ನೆಲೆ ಅನ್ನ-ಸಾಂಬಾರ್ ಮಾತ್ರವೇ ಸಿಗಲಿದೆ. ನಾಳೆಯಿಂದ ಗ್ಯಾಸ್ ಸಿಕ್ಕಿದ್ರೆ, ಪರಿಸ್ಥಿತಿ ನೋಡಿಕೊಂಡು ಮೆನ್ಯು ಬದಲಾವಣೆ ಮಾಡ್ತೀವಿ ಅಂತಿದ್ದಾರೆ ಹೋಟೆಲ್‌ನ ಮಾಲೀಕರು.

ಧಾರವಾಡಲ್ಲೂ ಸಿಲಿಂಡರ್‌ ಅಭಾವ
ಇರಾನ್-ಇಸ್ರೇಲ್ ಯುದ್ಧದಿಂದ ಗ್ಯಾಸ್ ಸಮಸ್ಯೆಯಂತೂ ದಿನದಿಂದ ದಿನಕ್ಕೆ ಹೆಚ್ಚಾಗ್ತಲೇ ಇದೆ. ಇತ್ತ ಹೋಟೆಲ್‌ಗಳಲ್ಲಿ ಕಮರ್ಷಿಯಲ್ ಸಿಲಿಂಡರ್ ಪ್ರಾಬ್ಲಂ ಹೆಚ್ಚಾಗಿರುವ ಹಿನ್ನೆಲೆ ಹೋಟೆಲ್ ಮಾಲೀಕರು ಸೌದೆಗೆ ಮೊರೆ ಹೋಗಿದ್ದಾರೆ. ಧಾರವಾಡದ ಕಮಲ್ ನಾನ್‌ವೆಜ್ ಹೋಟೆಲ್‌ನಲ್ಲಿ ಸೌದೆ ಬಳಸಿ ಅಡುಗೆ ತಯಾರಿಸುತ್ತಿದ್ದಾರೆ. ಚಿಕನ್ ಬಿರಿಯಾನಿ, ಎಗ್ ಮಸಾಲಾ ಮಾತ್ರ ಲಭ್ಯವಿದ್ದು, ಕಬಾಬ್, ಚಿಕನ್ ಡ್ರೈ ಸೇರಿದಂತೆ ಫಾಸ್ಟ್ ಫುಡ್ ಬಂದ್ ಮಾಡಲಾಗಿದೆ. ಇನ್ನು, ಸಿಲಿಂಡರ್ ಸಮಸ್ಯೆ ಹೀಗೆ ಮುಂದುವರಿದ್ರೆ ಹೋಟೆಲ್ ಬಂದ್ ಮಾಡುತ್ತೇವೆ ಎಂದಿದ್ದಾರೆ.

ಇರಾನ್ ಮತ್ತು ಇಸ್ರೇಲ್ ವಾರ್ ಬಿಸಿ ಈಗ ಗಡಿ ಜಿಲ್ಲೆ ಬೀದರ್‌ನ ಸ್ಮಾಲ್ ಗ್ಯಾಸ್ ಸಿಲಿಂಡರ್‌ಗೂ ತಟ್ಟಿದೆ. ವಿದ್ಯಾರ್ಥಿಗಳು, ಬ್ಯಾಚುರ್ಸ್‌, ಬಂಗಾರದ ಅಂಗಡಿಗಳು, ಕಬ್ಬಿಣ ರಾಡ್ ಕಟ್ ಮಾಡಲು 5 ಕೆಜಿಯ ಸಿಲಿಂಡರ್ ಬಳಸುತ್ತಿದ್ದರು. ಸ್ಟಾಕ್ ಇರದ ಕಾರಣ 5 ಕೆಜಿ ಸಿಲಿಂಡರ್‌ನ ಬೆಲೆ 700 ರೂಪಾಯಿ ಮಾಡಿದ್ದಾರೆ. ಒಂದ್ಕಡೆ ಸ್ಟಾಕ್ ಇಲ್ಲ. ಮತ್ತೊಂದು ಕಡೆ ದುಪ್ಪಟ್ಟು ಬೆಲೆ. ಇದರಿಂದ ಜನರ ಕಂಗಾಲಾಗಿ ಹೋಗಿದ್ದಾರೆ.

ಕೊಡಗಿನಲ್ಲೂ ಹೋಟೆಲ್‌ಗಳು ಬಂದ್‌
ರಾಜ್ಯದ ಹಲವೆಡೆ ಅನೇಕ ಹೋಟೆಲ್‌ಗಳು ಬಂದ್ ಆಗಿದೆ. ಪ್ರವಾಸಿಗರನ್ನೇ ಅವಲಂಬಿಸಿಕೊಂಡು ಬದುಕು ಕಟ್ಟಿಕೊಂಡ ಅನೇಕ ಉದ್ಯಮಗಳ ಮೇಲೆ ಇದೀಗಾ ಯುದ್ಧದ ನೆರಳು ಬಿದ್ದಿದೆ. ವರ್ಷ ಇಡೀ ಕರ್ನಾಟಕದ ಕಾಶ್ಮೀರ ಕೊಡಗು ಜಿಲ್ಲೆಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಆದರೆ ಇದೀಗ ವಾಣಿಜ್ಯ ಸಿಲಿಂಡರ್‌ಗಳ ಸಮಸ್ಯೆ ಇರೋದ್ರಿಂದ ಹೋಟೆಲ್‌ಗಳು ಬಂದ್ ಆಗಿದೆ. ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ಮುಗಿಲ್ ಪೇಟೆಗೂ ಕರೆದುಕೊಂಡು ಹೋಗುವ ನೂರಾರು ಜೀಪ್ ಚಾಲಕರಿಗೂ ಪ್ರವಾಸಿಗರು ಇಲ್ಲದೇ ಕಂಗಾಲಾಗಿದ್ದಾರೆ. ನೂರಾರು ಜೀಪ್‌ಗಳನ್ನು ತೋಟಗಳಲ್ಲಿ ನಿಲ್ಲಿಸಿ ಚಾಲಕರು ತೋಟ ಕೆಲಸಕ್ಕೆ ಇಳಿದಿದ್ದಾರೆ.

Share This Article