– ಎಲ್ಲಿ ಬಿಜೆಪಿ ಇದೆಯೋ ಅಲ್ಲಿ ಅಭಿವೃದ್ಧಿ, ‘ವಿಕಾಸ’ವಿದೆ
– ಉತ್ತಮ ಭವಿಷ್ಯಕ್ಕಾಗಿ ಹಗಲು ರಾತ್ರಿ ಕೆಲಸ ಮಾಡುತ್ತೇವೆ; ನಮೋ ಭರವಸೆ
ನವದೆಹಲಿ: ಬಂಗಾಳದ (Bengal) ಗೆಲುವಿನ ಗಂಗೋತ್ರಿಯಿಂದ ಗಂಗಾ ಸಾಗರದ ತನಕ ಕಮಲ ಅರಳಿದೆ. ಹೊಸ ಸೂರ್ಯೋದಯವಾಗಿದ್ದು, ಬಂಗಾಳ ಭಯಮುಕ್ತವಾಗಿದೆ. ಇಲ್ಲಿನ ಜನರಿಗೆ ನಾನು ಭರವಸೆ ನೀಡುತ್ತೇನೆ. ನಿಮ್ಮ ಉತ್ತಮ ಭವಿಷ್ಯಕ್ಕಾಗಿ ಹಗಲು ರಾತ್ರಿ ಕೆಲಸ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಬಂಗಾಳ ಜನತೆಗೆ ಭರವಸೆ ನೀಡಿದ್ದಾರೆ.
ಪಂಚರಾಜ್ಯ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಬಿಜೆಪಿ (BJP) ಕಚೇರಿಯಲ್ಲಿ ವಿಜಯೋತ್ಸವದ ಭಾಷಣ ಮಾಡಿದ ಪ್ರಧಾನಿ ಮೋದಿ, ಬಂಗಾಳ, ಅಸ್ಸಾಂ (Assam), ಪುರುಚೇರಿಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಲು ಕಾರಣರಾದ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದರು.

ಭಾರತ ಪ್ರಜಾಪ್ರಭುತ್ವದ ತಾಯಿ
ಮುಂದುವರಿದು… ನಿತಿನ್ ನಬಿನ್ ಅಧ್ಯಕ್ಷರಾದ ಬಳಿಕ ಇದು ಮೊದಲ ಗೆಲುವು, ಅವರ ಮಾರ್ಗದರ್ಶನ ಬಹಳ ಮೌಲ್ಯಯುತವಾದದ್ದು. ಉಪ ಚುನಾವಣೆಯಲ್ಲೂ ಜನರು ನಮ್ಮಗೆ ಆರ್ಶಿವಾದ ಮಾಡಿದ್ದಾರೆ, ಮಹಾರಾಷ್ಟ್ರದಲ್ಲಿ ಸುನೇತ್ರಾ ಪವಾರ್ ಕೂಡ ಗೆಲುವು ಸಾಧಿಸಿದ್ದಾರೆ. ಉಪ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ. ಚುನಾವಣೆಯಲ್ಲಿ ಗೆಲುವು ಸೋಲು ಸ್ವಾಭಾವಿಕ, ಆದ್ರೆ ಐದು ರಾಜ್ಯದ ಜನರು ಇಂದು ಭಾರತ ಪ್ರಜಾಪ್ರಭುತ್ವದ ತಾಯಿʼ ಅನ್ನೋದನ್ನ ವಿಶ್ವಕ್ಕೆ ತೋರಿಸಿದ್ದಾರೆ ಎಂದು ಬಣ್ಣಿಸಿದರು.
ಭಾರತದ ಸಂವಿಧಾನಕ್ಕೆ ಗೆಲುವು
ಪ್ರಜಾಪ್ರಭುತ್ವ ನಮ್ಮ ತಂತ್ರ ಅಲ್ಲ, ನಮ್ಮ ನರ ನಾಡಿಗಳಲ್ಲಿ ಸಂಚರಿಸುವ ಶಕ್ತಿ. ಹಾಗಾಗಿ ಇಂದು ಭಾರತದ ಪ್ರಜಾಪ್ರಭುತ್ವಕ್ಕೆ ಮಾತ್ರವಲ್ಲ, ಭಾರತದ ಸಂವಿಧಾನಕ್ಕೂ ಗೆಲುವಾಗಿದೆ. ಅಸ್ಸಾಂ, ತಮಿಳುನಾಡು, ಪುದುಚೇರಿ ಕೇರಳದಲ್ಲಿ (Kerala) ಮತದಾನದ ಹೊಸ ದಾಖಲೆ ಸೃಷ್ಟಿಯಾಗಿದೆ. ಇದರಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದೆ. ಅದಕ್ಕಾಗಿ ಚುನಾವಣಾ ಆಯೋಗ, ಎಲ್ಲ ಸಿಬ್ಬಂದಿ ಜೊತೆಗೆ ಭದ್ರತಾಪಡೆಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆ ಗರಿಮೆ ಹೆಚ್ಚಿಸಲು ಇವರ ಕೊಡುಗೆ ಇದೆ, ಇದನ್ನು ನಾವು ನೆನಪಿನಲ್ಲಿಡುತ್ತೇವೆ ಎಂದು ತಿಳಿಸಿದರು.

ಗಂಗಾ ಸಾಗರದ ತನಕ ಕಮಲ ಅರಳಿದೆ
ಈ ದಿನ ಬಂಗಾಳ ಗೆಲುವಿನ ಮೂಲಕ ಗಂಗೋತ್ರಿಯಿಂದ ಗಂಗಾ ಸಾಗರದ ತನಕ ಕಮಲ ಅರಳಿದೆ. ಗಂಗಾಮಾತೆಯ ಆರ್ಶಿವಾದ ನಮ್ಮ ಮೇಲಿದೆ. ಬ್ರಹ್ಮಪುತ್ರ ಹಾಗೂ ಕಾಮಾಖ್ಯ ದೇವಿಯ ಆಶೀರ್ವಾದವೂ ನಮಗೆ ಸಿಕ್ಕಿದೆ. ಹರಿಯಾಣ, ದೆಹಲಿ, ಬಿಹಾರ ನಿರಂತರವಾಗಿ ಗೆಲುವು ಸಾಧಿಸಿದೆ. ಇಂದು ಅಸ್ಸಾಂ ನಲ್ಲಿ 3ನೇ ಬಾರಿಗೆ ಬಿಜೆಪಿ ಎನ್‌ಡಿಎ ಮೇಲೆ ಭರವಸೆ ಇರಿಸಿದ್ದಾರೆ. ಅಸ್ಸಾಂ ಟೀ ಗಾರ್ಡನ್ ಪ್ರದೇಶದಲ್ಲೂ ಬಿಜೆಪಿಗೆ ಬೆಂಬಲ ಸಿಕ್ಕಿದೆ. ಪುದುಚೇರಿ ಜನರು ಎನ್‌ಡಿಎ ಮೇಲೆ ವಿಶ್ವಾಸವಿಟ್ಟಿದ್ದಾರೆ. ಎನ್‌ಡಿಎ ಸರ್ಕಾರ ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ನಿರಂತರ ಕೆಲಸ ಮಾಡಲಿದೆ. ಜನರು ಬಿಜೆಪಿ ಮೇಲೆ ಹೆಚ್ಚು ಭರವಸೆ ಇಟ್ಟಿದ್ದಾರೆ ಎಂದು ಭರವಸೆ ನೀಡಿದರು.
ನಾಗರಿಕ ದೇವೋ ಭವ ನಮ್ಮ ಮಂತ್ರ, ʻಎಲ್ಲಿ ಬಿಜೆಪಿ ಅಲ್ಲಿ ಅಭಿವೃದ್ಧಿʼ, ಬಿಜೆಪಿ ಇದ್ದಲ್ಲಿ ‘ವಿಕಾಸ’ವಿದೆ. ಇಂದು ದೇಶದ 20 ಹೆಚ್ಚು ರಾಜ್ಯಗಳಲ್ಲಿ ಬಿಜೆಪಿ/ಎನ್ ಡಿಎ ಸರ್ಕಾರವಿದೆ. ಗುಜರಾತ್‌ನಲ್ಲಿ ಸ್ಥಳೀಯ ಚುನಾವಣೆಗಳಲ್ಲೂ ಬಿಜೆಪಿಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಸ್ಥಳೀಯ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಮತ ಪ್ರಮಾಣ ಬಿಜೆಪಿಗೆ ಸಿಕ್ಕಿದೆ ಎಂದು ಹೇಳಿದರು.
ಶ್ಯಾಮ ಪ್ರಸಾದ್ ಮುಖರ್ಜಿ ಅವರ ಆತ್ಮಕ್ಕೆ ಇಂದು ಶಾಂತಿ ಸಿಕ್ಕಿದೆ. ದೇಶಕ್ಕಾಗಿ ಬದಕಬೇಕು, ದೇಶಕ್ಕಾಗಿ ಸಾಯಬೇಕು ಎಂದು ಕಾರ್ಯಕರ್ತರಿಗೆ ಹೇಳಿದ್ದರು. ಅವರ ಜೀವನ ಪ್ರತಿಕ್ಷಣವೂ ದೇಶಕ್ಕಾಗಿ ಕಳೆದಿದ್ದಾರೆ. ಅವರು ಸಮೃದ್ಧ ಬಂಗಾಳದ ಕನಸು ಕಂಡಿದ್ದರು, ಈಗ ಅದು ಪೂರ್ಣವಾಗುವ ದಿನ ಬಂದಿದೆ. ಬಂಗಾಳ ಭಯ ಮುಕ್ತವಾಗಿದೆ, ಹೊಸ ಅಧ್ಯಾಯ ಶುರು ವಾಗಿದೆ. ಬಂಗಾಳದಲ್ಲಿ ಇನ್ಮುಂದೆ ಹೊಸ ಸೂರ್ಯೋದಯವಾಗಲಿದೆ ಎಂದು ಪ್ರಧಾನಿ ಶ್ಲಾಘಿಸಿದರು.
ಎಲ್ಲ ಬಂಗಾಳ ಜನರಿಗೆ ಭರವಸೆ ನೀಡುತ್ತೇನೆ, ಉತ್ತಮ ಭವಿಷ್ಯಕ್ಕಾಗಿ ಹಗಲು ರಾತ್ರಿ ಕೆಲಸ ಮಾಡುತ್ತೇವೆ. ಮಹಿಳೆಯರಿಗೆ ಸುರಕ್ಷತೆಯ ವಾತಾವರಣ ಸಿಗಲಿದೆ, ಯುವಕರಿಗೆ ಉದ್ಯೋಗ ಸಿಗಲಿದೆ. ಆಯುಷ್ಮಾನ್ ಭಾರತ ಯೋಜನೆ ಎಲ್ಲರಿಗೂ ಸಿಗುವಂತಾಗಲಿದೆ. ನುಸುಳಕೋರರ ವಿರುದ್ಧ ತನಿಖೆಯೂ ಆಗಲಿದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು.

