ಚೌತಿ ದಿನ ಚಂದ್ರನನ್ನು ನೋಡಿದ್ದಕ್ಕೆ ‘ಕಳ್ಳ’ನಾದ ಕೃಷ್ಣ

Public TV
3 Min Read

ಪ್ರತಿ ತಿಂಗಳು ಹಿಂದೂಗಳು ಕೃಷ್ಣ ಚತುರ್ಥಿಯಂದು ಸಂಕಷ್ಟ ಆಚರಿಸುತ್ತಾರೆ. ಅಂದು ಉಪವಾಸ ವ್ರತ ಆಚರಿಸುತ್ತಾರೆ. ಸಂಕಷ್ಟ ಹರ ಚತುರ್ಥಿಯ ವಿಶೇಷತೆಗಳೇನು ಎಂಬುದರ ಕುರಿತಾದ ಕಿರು ಮಾಹಿತಿ ಇಲ್ಲಿದೆ.

ಬಹಳ ಹಿಂದೆ ಯಾದವ ಕುಲದಲ್ಲಿ ಸತ್ರಾರ್ಜಿತ ಎಂಬ ರಾಜನಿದ್ದನು. ಸತ್ರಾರ್ಜಿತ ನೂರು ವರ್ಷ ಸೂರ್ಯ ಉಪಾಸನೆ ಮಾಡಿ ಸೂರ್ಯದೇವನನ್ನು ಒಲಿಸಿಕೊಂಡಿದ್ದನು. ಸತ್ರಾರ್ಜಿತನ ಭಕ್ತಿಗೆ ಪ್ರಸನ್ನನಾದ ಸೂರ್ಯದೇವ ‘ಸ್ಯಮಂತಕ’ ಹೆಸರಿನ ದಿವ್ಯವಾದ ಮಣಿಯನ್ನು ನೀಡಿದ್ದನು. ಈ ಮಣಿ ಸೂರ್ಯನಂತೆ ಪ್ರಕಾಶಮಾನವಾಗಿ ಹೊಳೆಯುತಿತ್ತು. ಈ ಮಣಿಯಿಂದ ರಾಜನ ಖಜಾನೆಯಲ್ಲಿ ಬಂಗಾರ ಪ್ರಾಪ್ತಿಯಾಗುತಿತ್ತು. ಹೀಗಾಗಿ ಸತ್ರಾರ್ಜಿತ ರಾಜ ಪ್ರತಿದಿನ ಸಹಸ್ರಾರು ಜನರಿಗೆ ಭೋಜನದ ವ್ಯವಸ್ಥೆ ಕಲ್ಪಿಸುತ್ತಿದ್ದನು.

ಕೆಲವು ವರ್ಷಗಳ ಬಳಿಕ ಸತ್ರಾರ್ಜಿತನ ಬಳಿ ಸ್ಯಮಂತಕ ಮಣಿ ಇರುವ ವಿಷಯ ಶ್ರೀಕೃಷ್ಣನಿಗೆ ತಿಳಿಯಿತು. ಶ್ರೀಕೃಷ್ಣ ಆ ಮಣಿ ತನಗೆ ನೀಡಬೇಕೆಂದು ಹೇಳಿ ಕಳುಹಿಸಿದ್ದನು. ಆದ್ರೆ ಸತ್ರಾರ್ಜಿತ ಮಣಿ ನೀಡಲು ಒಪ್ಪಿಗೆ ಸೂಚಿಸಲಿಲ್ಲ. ಸತ್ರಾರ್ಜಿತ ಮಣಿ ನೀಡಲು ಹಿಂದೇಟು ಹಾಕಿದ್ದರಿಂದ ಬಲವಂತದಿಂದ ಪಡೆಯುವುದು ಸರಿಯಲ್ಲ ಎಂಬ ತೀರ್ಮಾನಕ್ಕೆ ಬಂದು ಕೃಷ್ಣ ಸುಮ್ಮನಿದ್ದ. ಇದನ್ನೂ ಓದಿ: ಗಣೇಶ ಮೋದಕ ಪ್ರಿಯ ಯಾಕೆ?

ಒಂದು ದಿನ ಸತ್ರಾರ್ಜಿತನ ಬಂಧು ಪ್ರಸೇನ ಈ ಮಣಿಯನ್ನು ಧರಿಸಿಕೊಂಡು ಬೇಟೆಗೆ ತೆರಳಿದ್ದ. ಈ ಸಂದರ್ಭದಲ್ಲಿ ಅರಣ್ಯದಲ್ಲಿ ಪ್ರಸೇನ ಮೇಲೆ ದಾಳಿ ಮಾಡಿದ ಸಿಂಹವೊಂದು ಆತನನ್ನು ಕೊಂದು ಆ ದಿವ್ಯಮಣಿಯನ್ನು ತೆಗೆದುಕೊಂಡು ಹೋಯಿತು. ಅದೇ ಸಿಂಹವನ್ನು ಅಡವಿಯ ರಾಜ ಜಾಂಬವಂತ ಕೊಂದು ಹಾಕಿದನು. ಸಿಂಹದ ಬಳಿಯಲ್ಲಿದ್ದ ಮಣಿಯನ್ನು ತೆಗೆದುಕೊಂಡು ತನ್ನ ಮಗಳು ಜಾಂಬವಂತೆಗೆ ನೀಡಿದನು. ಜಾಂಬವಂತನ ಮಗಳು ಸ್ಯಮಂತಕ ಮಣಿಯನ್ನು ಧರಿಸತೊಡಗಿದಳು.

ಇತ್ತ ಬೇಟೆಗೆ ತೆರಳಿದ ಪ್ರಸೇನ ಹಿಂದಿರುಗಿ ಬರದನ್ನು ಕಂಡಾಗ ಸತ್ರಾರ್ಜಿತ ಕೃಷ್ಣನೇ ಸ್ಯಮಂತಕ ಮಣಿಯನ್ನು ಕದ್ದಿರಬಹುದು. ಕೃಷ್ಣನೇ ಸ್ಯಮಂತಕ ಮಣಿಗಾಗಿ ಪ್ರಸೇನನ್ನು ಅಪಹರಿಸಿರಬಹುದು ಎಂದು ಊಹಿಸತೊಡಗಿದೆ. ಸತ್ರಾರ್ಜಿತ ಮಾಡಿರುವ ಆರೋಪ ಶ್ರೀಕೃಷ್ಣನ ಗಮನಕ್ಕೂ ಬಂತು. ಹಿಂದೆ ನಾನು ಮಣಿಯನ್ನು ಕೇಳಿದ್ದು ಹೌದು. ಆದರೆ ಮಣಿ ನನ್ನ ಮೇಲೆ ಇಲ್ಲದೇ ಇರುವಾಗ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಈ ಮಣಿ ಎಲ್ಲಿದೆ ಎನ್ನುವುದು ತಿಳಿಯಲೇಬೇಕೆಂದು ಶಪಥಗೈದ. ತನ್ನ ಮೇಲಿನ ಆರೋಪಗಳು ಸುಳ್ಳು ಎಂದು ಸಾಬೀತುಪಡಿಸಲು ಶ್ರೀಕೃಷ್ಣ ಪ್ರಸೇನನ್ನು ಹುಡುಕಲು ಅರಣ್ಯಕ್ಕೆ ಹೊರಟನು. ಇದನ್ನೂ ಓದಿ:   ಗಣೇಶನಿಗಾಗಿ ಸಿಹಿ ಕಡುಬು ಮಾಡುವ ವಿಧಾನ

ಹೀಗೆ ಅರಣ್ಯದಲ್ಲಿ ಪ್ರಾಣಿಗೆ ದಾಳಿಗೆ ತುತ್ತಾಗಿ ಸಾವನ್ನಪ್ಪಿರುವ ಪ್ರಸೇನ ಶವ ಶ್ರೀಕೃಷ್ಣನಿಗೆ ಸಿಗುತ್ತದೆ. ಸ್ಥಳದಲ್ಲಿ ಎಲ್ಲಿಯೂ ಸ್ಯಮಂತಕ ಮಣಿ ಸಿಗಲಿಲ್ಲ. ಅಲ್ಲಿಯೇ ಸಿಂಹದ ಹಜ್ಜೆಗಳು ಗುರುತು ಕಾಣುತ್ತವೆ. ಸಿಂಹದ ಹೆಜ್ಜೆಗಳನ್ನು ಶ್ರೀಕೃಷ್ಣ ಹಿಂಬಾಲಿಸುತ್ತಾ ಜಾಂಬವಂತನ ಗುಹೆ ತಲುಪಿದನು. ತನ್ನ ಗುಹೆಯಲ್ಲಿ ಅನಾಮಧೇಯ ವ್ಯಕ್ತಿ ಪ್ರವೇಶಿಸಿದ್ದನ್ನು ಕಂಡ ಜಾಂಬವಂತನ ಮಗಳು ಕೂಗಲು ಆರಂಭಿಸಿದಳು. ಈ ವೇಳೆ ಅಲ್ಲಿಗೆ ಜಾಂಬವಂತನು ಸಹ ಬಂದನು.

ಮಗಳ ಧ್ವನಿ ಕೇಳಿ ಬಂದ ಜಾಂಬವಂತ ನೇರವಾಗಿ ಶ್ರೀಕೃಷ್ಣನ ಮೇಲೆ ಆಕ್ರಮಣ ನಡೆಸಿದನು. ಇಬ್ಬರ ಮಧ್ಯೆ 21 ದಿನಗಳ ಕಾಲ ಯುದ್ಧ ನಡೆಯಿತು. ಇತ್ತ ಇಬ್ಬರ ಯುದ್ಧದ ವಿಷಯ ತಿಳಿದು ದ್ವಾರಕದಲ್ಲಿ ಭಯ ಉಂಟಾಯಿತು. ಗೋಕುಲದಲ್ಲಿದ್ದ ನಂದ ಯಶೋಧೆಗೂ ಯುದ್ಧದ ಬಗ್ಗೆ ಮಾಹಿತಿ ತಿಳಿದಾಗ ಶ್ರೀಕೃಷ್ಣನ ಬಗ್ಗೆ ಚಿಂತಿಸತೊಡಗಿದರು. ಶ್ರೀಕೃಷ್ಣನ ಬಗ್ಗೆ ಚಿಂತಿತರಾದ ನಂದ ಯಶೋಧೆ ಸಂಕಷ್ಟಹರ ಗಣೇಶನ ಸಂಕಷ್ಟ ಚತುರ್ಥಿ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಮಾಡತೊಡಗಿದರು. ಗಣೇಶನ ಸಂಕಷ್ಟ ಚತುರ್ಥಿಯ ವ್ರತದ ಆಚರಣೆಯಿಂದಾಗಿ ಶ್ರೀಕೃಷ್ಣನಿಗೆ ವಿಜಯ ಲಭಿಸಿತು. ಯುದ್ಧದಲ್ಲಿ ಸೋತ ಜಾಂಬವಂತ ಸ್ಯಮಂತಕ ಮಣಿಯೊಂದಿಗೆ ಮಗಳು ಜಾಂಬವಂತೆಯನ್ನು ಶ್ರೀಕೃಷ್ಣನಿಗೆ ಅರ್ಪಿಸಿದನು. ಗೋಕುಲದಲ್ಲಿ ಆನಂದ ವ್ಯಾಪಿಸಿ ಶ್ರೀಕೃಷ್ಣನು ಜಾಂಬವಂತನ ಮಗಳನ್ನು ಮದುವೆಯಾದನು. ಇದನ್ನೂ ಓದಿ: ಗಣೇಶನಿಗೆ ಪ್ರಿಯವಾದ ಮೋದಕ ಮಾಡುವ ವಿಧಾನ

ಶ್ರೀಕೃಷ್ಣನ ಮೇಲೆ ಸ್ಯಮಂತಕ ಮಣಿ ಕದ್ದ ಎಂಬ ಆರೋಪ ಬಂದಿದ್ದು ಯಾಕೆ ಎನ್ನುವುದಕ್ಕೂ ಪುರಾಣದಲ್ಲಿ ಕಥೆ ಸಿಗುತ್ತದೆ. ಹಿಂದೆ ಗಣೇಶ ಚತುರ್ಥಿಯ ದಿನ ಸಂಜೆ ಗೋವುಗಳ ಜೊತೆ ಅರಣ್ಯದಿಂದ ಮನೆಗೆ ಹಿಂದಿರುಗಿ ಬರುತ್ತಿದ್ದಾಗ, ದಾರಿಯಲ್ಲಿ ಜಾನುವಾರುಗಳ ಹೆಜ್ಜೆಯ ಗುರುತಿನಲ್ಲಿ ಮಳೆಯ ನೀರು ನಿಂತಿತ್ತು. ಆ ನೀರಿನಲ್ಲಿ ಶ್ರೀಕೃಷ್ಣ ಚಂದ್ರನನ್ನು ನೋಡಿದ್ದನು. ಗಣೇಶ ಚಂದ್ರನಿಗೆ ನೀಡಿದ ಶಾಪ ಶ್ರೀಕೃಷ್ಣನಿಗೆ ಕಳ್ಳತನದ ಆರೋಪವಾಗಿ ತಟ್ಟಿತ್ತು. ನಂದ ಯಶೋಧೆಯರ ಸಂಕಷ್ಟ ಚತುರ್ಥಿಯ ವ್ರತದಿಂದ ಶ್ರೀಕೃಷ್ಣ ಶಾಪದಿಂದ ಮುಕ್ತವಾಗಿದ್ದನು.

ಜಾಂಬವಂತೆಯನ್ನು ಮದುವೆಯಾದ ಬಳಿಕ ಶ್ರೀಕೃಷ್ಣ ಸ್ಯಮಂತಕ ಮಣಿಯನ್ನು ಸತ್ರಾರ್ಜಿತನಿಗೆ ಹಿಂದಿರುಗಿಸಿದನು. ತನ್ನ ತಪ್ಪಿನ ಅರಿವಾಗಿ ಸತ್ರಾರ್ಜಿತ ಶ್ರೀಕೃಷ್ಣ ಬಳಿ ಕ್ಷಮೆ ಯಾಚಿಸಿ ತನ್ನ ಪುತ್ರಿ ಸತ್ಯಭಾಮೆಯನ್ನು ಅರ್ಪಿಸಿದನು. ಹೀಗಾಗಿ ಪ್ರತಿ ತಿಂಗಳ ಕೃಷ್ಣ ಪಕ್ಷದಂದು ಸಂಕಷ್ಟಿ ಚತುರ್ಥಿಯ ವ್ರತ ಮಾಡುತ್ತಾರೆ. ಈ ವ್ರತದ ಫಲವಾಗಿ ಸಂಕಷ್ಟಾಹರ್ಥ ಶ್ರೀಗಣೇಶನ ಕೃಪೆ ದೊರೆಯುತ್ತದೆ. ಭಕ್ತರ ಸಂಕಷ್ಟಗಳು ದೂರ ಆಗುವುದರ ಜೊತೆಗೆ ಅವರ ಮನಸ್ಸಿನ ಇಚ್ಛೆಗಳು ಪೂರ್ಣಗೊಳ್ಳುತ್ತವೆ ಎನ್ನುವ ನಂಬಿಕೆಯೂ ಇದೆ. ಇದನ್ನೂ ಓದಿ: ಗಣೇಶ ಹಬ್ಬಕ್ಕೆ ಫಟಾಫಟ್ ಮಾಡಿ ಚೂರ್ಮಾ ಲಡ್ಡು

Share This Article
Leave a Comment

Leave a Reply

Your email address will not be published. Required fields are marked *