– ಭಾರತದ ಮೇಲೆ 50% ಸುಂಕ ಹಾಕಿದ್ದು ತಪ್ಪು ನಿರ್ಧಾರ: ಜಾನ್ ಬೋಲ್ಟನ್
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವನ್ನು ಅನಗತ್ಯವಾಗಿ ದ್ವೇಷಿಸುತ್ತಿದ್ದಾರೆ ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತದ ಮೇಲೆ 50% ರಷ್ಟು ಸುಂಕ ವಿಧಿಸಿರುವುದು ದ್ವಿಪಕ್ಷೀಯ ಸಂಬಂಧದಲ್ಲಿ ತಪ್ಪು ನಡೆಯಾಗಿದೆ ಎಂದು ಟ್ರಂಪ್ ನಡೆಗೆ ಅಸಮಾಧಾನ ಹೊರಹಾಕಿದ್ದಾರೆ.
ಭಾರತದ ಮೇಲೆ ಅಮೆರಿಕದ ಅತ್ಯಧಿಕ ಸುಂಕವನ್ನು ವಿಧಿಸಿದೆ. ಭಾರತದ ಆಮದುಗಳ ಮೇಲೆ ಶೇ.25 ಸುಂಕ ಹಾಕಿತ್ತು. ರಷ್ಯಾದಿಂದ ತೈಲ ಖರೀದಿ ಕಾರಣಕ್ಕಾಗಿ ಮತ್ತೆ 25% ಸೇರಿ ಒಟ್ಟು 50% ಟ್ಯಾರಿಫ್ ಹಾಕಿದೆ. ಟ್ರಂಪ್ ಅವರ ಈ ನಡೆಯು ಎರಡು ದೇಶಗಳ ನಡುವಿನ ಸಂಬಂಧಕ್ಕೆ ಹಾನಿಕಾರಕ ಎಂದು ಬೋಲ್ಟನ್ ಹೇಳಿದ್ದಾರೆ.
ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾಗೆ ಭಾರತ ಸಹಾಯ ಮಾಡುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದರು. ಭಾರತವು ಬೃಹತ್ ಪ್ರಮಾಣದಲ್ಲಿ ರಷ್ಯಾದ ತೈಲವನ್ನು ಖರೀದಿಸುವುದಲ್ಲದೆ, ಖರೀದಿಸಿದ ಹೆಚ್ಚಿನ ತೈಲವನ್ನು ಮುಕ್ತ ಮಾರುಕಟ್ಟೆಯಲ್ಲಿ ದೊಡ್ಡ ಲಾಭಕ್ಕಾಗಿ ಮಾರಾಟ ಮಾಡುತ್ತಿದೆ. ರಷ್ಯಾದ ಯುದ್ಧ ಯಂತ್ರದಿಂದ ಉಕ್ರೇನ್‌ನಲ್ಲಿ ಎಷ್ಟು ಜನರು ಹತ್ಯೆಯಾಗುತ್ತಿದ್ದಾರೆ ಎಂಬುದು ಅವರಿಗೆ ಮುಖ್ಯವಲ್ಲ ಎಂದು ಟ್ರಂಪ್ ಅವರು ಟ್ರುತ್ ಸೋಶಿಯಲ್‌ನಲ್ಲಿ ಬರೆದುಕೊಂಡಿದ್ದರು.
ಚೀನಾ ಕೂಡ ರಷ್ಯಾದ ತೈಲವ ಖರೀದಿಸುತ್ತಿದೆ. ಆದರೆ, ಚೀನಾ ಅಂತಹ ಯಾವುದೇ ಸುಂಕಗಳು ಅಥವಾ ದ್ವಿತೀಯಕ ನಿರ್ಬಂಧಗಳನ್ನು ಎದುರಿಸಲಿಲ್ಲ ಎಂದು ಬೋಲ್ಟನ್ ತಿಳಿಸಿದ್ದಾರೆ. ಉಕ್ರೇನ್‌ನಲ್ಲಿ ಕದನ ವಿರಾಮವನ್ನು ಜಾರಿಗೆ ತರುವ ಟ್ರಂಪ್ ಪ್ರಯತ್ನದಿಂದ ತೊಂದರೆ ಅನುಭವಿಸಿದ ಏಕೈಕ ಸರ್ಕಾರ ಭಾರತ ಎಂದು ಒತ್ತಿ ಹೇಳಿದ್ದಾರೆ.