ವಿಶ್ವದಲ್ಲೇ ಮೊದಲು – ಈಕ್ವೆಡಾರ್‌ನಲ್ಲಿ 5 ವರ್ಷದ ಮೇಲ್ಪಟ್ಟ ಮಕ್ಕಳಿಗೂ ಲಸಿಕೆ ಕಡ್ಡಾಯ

Public TV
1 Min Read

ಕ್ವಿಟೊ: 5 ವರ್ಷ ಮೇಲ್ಪಟ್ಟ ಎಲ್ಲಾ ಮಕ್ಕಳು ಲಸಿಕೆಯನ್ನು ಪಡೆಯಲು ಅರ್ಹರು ಎಂದು ಹೇಳುವ ಮೂಲಕ, ಮಕ್ಕಳಿಗೂ ಕೊರೊನಾ ಲಸಿಕೆಯನ್ನು ಕಡ್ಡಾಯಗೊಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಈಕ್ವೆಡಾರ್ ಪಾತ್ರವಾಗಿದೆ.

ಅಮೆರಿಕದಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ಹಾವಳಿ ಹೆಚ್ಚುತ್ತಿದ್ದಂತೆ ಈಕ್ವೆಡಾರ್ ದೇಶ ಮಕ್ಕಳಿಗೂ ಲಸಿಕೆಯನ್ನು ಕಡ್ಡಾಯಗೊಳಿಸಿದೆ. ಗುರುವಾರ ದೇಶದಲ್ಲಿ 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೋವಿಡ್ ಲಸಿಕೆಯನ್ನು ಕಡ್ಡಾಯಗೊಳಿಸಿರುವುದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ.

ಈಕ್ವೆಡಾರ್‌ನ 1.7 ಕೋಟಿ ಜನಸಂಖ್ಯೆಯಲ್ಲಿ ಸುಮಾರು 69% ಜನರು ಇಲ್ಲಿಯ ವರೆಗೆ ಲಸಿಕೆಯ 2 ಡೋಸ್‌ಗಳನ್ನು ಪಡೆದಿದ್ದಾರೆ. 9 ಲಕ್ಷ ಜನರು ಬೂಸ್ಟರ್ ಡೋಸ್ ಪಡೆದಿದ್ದಾರೆ. ಇದೀಗ 5 ವರ್ಷ ಮೇಲ್ಪಟ್ಟ ಮಕ್ಕಳೂ ಲಸಿಕೆ ಪಡೆಯಲು ಅರ್ಹರು ಎಂದು ಘೋಷಿಸಲಾಗಿದೆ. ಇದನ್ನೂ ಓದಿ: ಓಮಿಕ್ರಾನ್ ಭೀತಿ – ಉತ್ತರ ಪ್ರದೇಶದಲ್ಲಿ ನಾಳೆಯಿಂದ ನೈಟ್ ಕರ್ಫ್ಯೂ ಜಾರಿ

ಈಕ್ವೆಡಾರ್‌ನಲ್ಲಿ ಈವರೆಗೆ ಸುಮಾರು 5.4 ಲಕ್ಷ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಅಂದಾಜು 33 ಸಾವಿರ ಮಂದಿ ಮೃತಪಟ್ಟಿದ್ದಾರೆ. ಜನರಿಗೆ ವೈದ್ಯಕೀಯ ಕಾರಣಗಳಿದ್ದರೆ ಮಾತ್ರವೇ ಲಸಿಕೆ ಪಡೆಯಲು ವಿನಾಯಿತಿ ನೀಡಲಾಗುತ್ತದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ವಾರದ ಹಿಂದೆ ಈಕ್ವೆಡಾರ್‌ನಲ್ಲಿ ಮೊದಲ ಓಮಿಕ್ರಾನ್ ಪ್ರಕರಣ ದಾಖಲಾಗಿತ್ತು. ಪ್ರಕರಣಗಳ ಹೆಚ್ಚಳವನ್ನು ತಡೆಗಟ್ಟುವ ನಿಟ್ಟಿನಲ್ಲಿ ರೆಸ್ಟೋರೆಂಟ್, ಶಾಪಿಂಗ್ ಮಾಲ್‌ಗಳು, ಸಿನಿಮಾ ಥಿಯೇಟರ್ ಹಾಗೂ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸಲು ಲಸಿಕೆಯ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯಗೊಳಿಸಿತ್ತು. ಇದನ್ನೂ ಓದಿ: ಬೂಸ್ಟರ್ ಡೋಸ್ ಅಗತ್ಯತೆ ಬಗ್ಗೆ ಅಧ್ಯಯನ ನಡೆಸಲು ಮೋದಿ ಸೂಚನೆ

ತಜಕಿಸ್ತಾನ್, ತುರ್ಕಮೆನಿಸ್ತಾನ್, ಇಂಡೋನಾಷ್ಯಾ, ಮೈಕ್ರೋನೇಷಿಯಾ ಮತ್ತು ನ್ಯೂ ಕ್ಯಾಲೆಡೋನಿಯಾದಲ್ಲಿ ವಯಸ್ಕರಿಗೆ ಲಸಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಇತರೇ ರಾಷ್ಟçಗಳಲ್ಲಿ ಸರ್ಕಾರ ಲಸಿಕೆ ಪಡೆಯುವಂತೆ ಹೇಳಿದ್ದರೂ ಕಡ್ಡಾಯ ಮಾಡಿಲ್ಲ. ಲಸಿಕೆಯನ್ನು ಪಡೆಯುವುದು, ಬಿಡುವುದು ಜನರ ವಿವೇಚನೆಗೆ ಬಿಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *