ಅತಿವೃಷ್ಠಿಯಲ್ಲಿ ಬಿಎಸ್‍ವೈ ಭಿಕ್ಷೆ ಬೇಡಿದ್ದರು, ಸಿದ್ದರಾಮಯ್ಯರಂತೆ ಡ್ಯಾನ್ಸ್ ಮಾಡಿರಲಿಲ್ಲ: ಆರಗ ಜ್ಞಾನೇಂದ್ರ ವ್ಯಂಗ್ಯ

Public TV
2 Min Read

ಚಿಕ್ಕಮಗಳೂರು: ಹಿಂದೆ ಅತಿವೃಷ್ಟಿ ಉಂಟಾದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು (BS Yediyurappa) ಡಬ್ಬ ಹಿಡಿದು ರಸ್ತೆಗಿಳಿದು ಸಾರ್ವಜನಿಕರಿಂದ ಹಣ ಸಂಗ್ರಹಿಸಿದ್ದರು. ಅಂತಹಾ ಕಾಳಜಿ, ಬದ್ಧತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೋರುತ್ತಿಲ್ಲ. ಭಾಷಣಮಾಡುವುದು, ಕುಣಿಯುವುದರಲ್ಲಿಯೇ ಕಾಲವನ್ನ ದೂಡುತ್ತಿದ್ದಾರೆಂದು ಮಾಜಿ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರು ಸಿದ್ದರಾಮಯ್ಯ (Siddaramaiah) ಹಾಗೂ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿಯನ್ನ ಸಮರ್ಪಕವಾಗಿ ಎದುರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದರು. ರಾಜ್ಯದಲ್ಲಿ 30% ಕ್ಕಿಂತ ಕಡಿಮೆ ಮಳೆಯಾಗಿರುವ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಈಗಾಗಲೇ ಘೋಷಿಸಲಾಗಿದೆ. ಬರ ರಾಜ್ಯವನ್ನು ವ್ಯಾಪಕವಾಗಿ ಕಾಡುತ್ತಿದೆ. ಬೆಳೆ ನಷ್ಟವಾಗಿದೆ. ಮೇವಿನ ಅಭಾವ ಉಂಟಾಗಿದೆ. ಕುಡಿಯುವ ನೀರಿನ ಸಮಸ್ಯೆ ಶುರುವಾಗಿದೆ. ಇದಕ್ಕೂ ಸರ್ಕಾರಕ್ಕೂ ಸಂಬಂಧಿವಿಲ್ಲವೆಂಬಂತೆ ಮುಖ್ಯಮಂತ್ರಿಗಳು ವರ್ತಿಸುತ್ತಿದ್ದಾರೆಂದು ಆರೋಪಿಸಿದ್ದಾರೆ. ಬರದ ನೈಜ ಸ್ಥಿತಿಯನ್ನ ಅರಿಯಲು ಬಿಜೆಪಿ (BJP) ರಾಜ್ಯ ಪ್ರವಾಸಕೈಗೊಂಡಿದೆ. ಬರದ ವರದಿಯನ್ನ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡಲಾಗುವುದು ಎಂದರು. ಇದನ್ನೂ ಓದಿ: ಕಾಮಗಾರಿ ಆರಂಭಗೊಂಡು 17 ವರ್ಷದ ಬಳಿಕ ಯರಗೋಳ ಯೋಜನೆ ಲೋಕಾರ್ಪಣೆ

ಜಿಲ್ಲಾ ಉಸ್ತುವಾರಿ ಸಚಿವರು ರೈತರ ಬಳಿ ಹೋಗಿಲ್ಲ. ಅವರ ಗೋಳನ್ನು ಕೇಳಿಲ್ಲ, ಆತ್ಮವಿಶ್ವಾಸ ತುಂಬಬೇಕು. ಆ ಕೆಲಸವನ್ನು ಮಾಡುತ್ತಿಲ್ಲ, ಕೇಂದ್ರದ ಮೇಲೆ ಬೊಟ್ಟುಮಾಡುವುದು, ಪ್ರಧಾನಿಯವರನ್ನು ಟೀಕಿಸುವುದರಲ್ಲೇ ರಾಜ್ಯ ಸರ್ಕಾರ ಕಾಲಕಳೆಯುತ್ತಿದೆ. ಸರ್ವಪಕ್ಷದ ಸಭೆ ಕರೆದು ಚರ್ಚಿಸಿಲ್ಲ, ಕೇಂದ್ರದ ಬಳಿ ನಿಯೋಗ ಕರೆದುಕೊಂಡುಹೋಗಿಲ್ಲವೆಂದು ಸರ್ಕಾರದ ಕಾರ್ಯವೈಖರಿ ಬಗ್ಗೆ ಹರಿಹಾಯ್ದರು. ಎನ್‍ಡಿಆರ್ ಎಫ್‍ನ 900 ಕೋಟಿ ಹಣ ಹಾಗೇ ಇದೆ. ಜಿಲ್ಲಾಧಿಕಾರಿಗಳ ಬಳಿ ಇರುವ ಹಣವನ್ನು ಖರ್ಚು ಮಾಡಲು ಸರ್ಕಾರ ಮಾರ್ಗಸೂಚಿಯನ್ನು ನೀಡುತ್ತಿಲ್ಲ ಎಂದರು.

ಈಗ ಹಿಂಗಾರು ಮಳೆ ಬೀಳುತ್ತಿದೆ. ಬೆಳೆಗೆ ಸಾಕಾಗುತ್ತಿಲ್ಲ. ಜನ ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬರ ಪರಿಹಾರಕ್ಕೆ ಬಿಡಿಗಾಸು ಬಿಡುಗಡೆಗೊಳಿಸಿಲ್ಲ. ರಾಜ್ಯದಲ್ಲಿ 260 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹೇಗಾದರು ಸರ್ಕಾರ ನಡೆದುಕೊಂಡು ಹೋಗುತ್ತದೆ ಎಂದು ಸರ್ಕಾರ ನಡೆಸುವವರು ತಿಳಿದುಕೊಂಡಿದ್ದಾರೆ. ರೈತರ ಪಂಪ್‍ಸೆಟ್‍ಗೆ 7 ಗಂಟೆ ಗುಣಮಟ್ಟದ ವಿದ್ಯುತ್ ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಯಾವಾಗ ಕರೆಂಟ್ ಕೊಡುತ್ತಾರೆ ತಿಳಿಯದಾಗಿದೆ. ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿದೆ. ಕಲ್ಲಿದ್ದಲು ಖರೀದಿಗೂ ಹಣವಿಲ್ಲದಂತಾಗಿದೆ. ಖಜಾನೆ ಖಾಲಿಯಾಗಿದೆ ಎಂದು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Share This Article