ಕೊರೊನಾ ನಿಯಂತ್ರಿಸಲು ಸರ್ಕಾರವೊಂದಕ್ಕೇ ಸಾಧ್ಯವಿಲ್ಲ, ಜನರು ಸಹ ಮುನ್ನೆಚ್ಚರಿಕೆ ವಹಿಸಬೇಕು: ಡಾ.ಕೆ. ಸುಧಾಕರ್

Public TV
2 Min Read

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಿಸಲು ಸರ್ಕಾರವೊಂದಕ್ಕೇ ಸಾಧ್ಯವಾಗುವುದಿಲ್ಲ. ಜನರು ಜಹ ಮುನ್ನೆಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನಿರ್ದೇಶನದಂತೆ ಇಂದಿನಿಂದ ಏರ್‌ಪೋರ್ಟ್‍ನಲ್ಲಿ ವಿದೇಶಿ ಪ್ರಯಾಣಿಕರಿಗೆ ಕಡ್ಡಾಯವಾಗಿ ಆರ್‌ಟಿಪಿಸಿಆರ್‌ ಟೆಸ್ಟ್ ಮಾಡಲು ಪ್ರಾರಂಭ ಮಾಡಿದ್ದೇವೆ. ಈ ಕುರಿತ ಸಿದ್ಧತೆಗಳನ್ನು ನಾನೇ ಖುದ್ದಾಗಿ ಏರ್‌ಪೋರ್ಟ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಂದಿದ್ದೇನೆ. ಏರ್‌ಪೋರ್ಟ್‍ನಲ್ಲಿ ಕೊರೊನಾ ಟೆಸ್ಟ್ ಆದ ಬಳಿಕ ವರದಿ ಬರುವವರೆಗೂ ಪ್ರಯಾಣಿಕರು ಅಲ್ಲಿಯೇ ಇರಬೇಕಾಗುತ್ತದೆ. ಡಿಸೆಂಬರ್ 2 ರಂದು ಬಸವರಾಜ್ ಬೊಮ್ಮಾಯಿ ಅವರು ದೆಹಲಿಯಲ್ಲಿ ಆರೋಗ್ಯ ಸಚಿವರನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಜೊತೆಗೆ ಕೊರೊನಾ ವಾರಿಯರ್ಸ್‍ಗೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ಚರ್ಚೆ ಮಾಡುತ್ತಾರೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಹಾಗೂ ಡೆಲ್ಟಾ ವೈರಸ್ ನಡುವಿನ ವ್ಯತ್ಯಾಸವೇನು?

ಕೊರೊನಾ ನಿಯಂತ್ರಣಕ್ಕೆ ಕಠಿಣ ಮಾರ್ಗಸೂಚಿಗಳನ್ನು ಸರ್ಕಾರ ಜಾರಿಗೆ ತರಲು ಮುಂದಾಗಿದೆ. ಜನರು ಸಹ ಮುನ್ನೆಚ್ಚರಿಕೆಯಿಂದ ಇರಬೇಕು. ಸರ್ಕಾರ ಒಂದೇ ಇದನ್ನು ನಿಭಾಯಿಸಲು ಸಾಧ್ಯವಿಲ್ಲ. ಜನರು ನಮ್ಮ ಜೊತೆ ಕೈ ಜೋಡಿಸಬೇಕು. ಜನರೇ ಸ್ವಯಂ ಆಗಿ ಬಂದು ಲಸಿಕೆ ಪಡೆಯಬೇಕು. ರಾಜ್ಯದಲ್ಲಿ ಎಲ್ಲೂ ಲಸಿಕೆ ಕೊರತೆ ಇಲ್ಲ. ಲಕ್ಷಾಂತರ ಲಸಿಕೆ ದಾಸ್ತಾನು ಇದೆ ಎಂದಿದ್ದಾರೆ.

ಇದೇ ವೇಳೆ ಲಸಿಕೆ ಪಡೆಯದವರಿಗೆ ಸರ್ಕಾರಿ ಸೌಲಭ್ಯ ನೀಡದ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಇಂತಹ ಶಿಫಾರಸ್ಸು ಒಪ್ಪುವುದಿಲ್ಲ. ಇದರಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವುದಿಲ್ಲ. ಆಂದೋಲನ ಮಾಡಿ ಜಾಗೃತಿ ಮೂಡಿಸಿ ಲಸಿಕೆ ಕೊಡುತ್ತೇವೆ. ಈಗ ಕ್ರಿಸ್ಮಸ್ ಮತ್ತು ಹೊಸ ವರ್ಷ ಆಚರಣೆಗೆ ಅಗತ್ಯ ಬಿದ್ದರೆ ಕಠಿಣ ಕ್ರಮ ತಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್‌ ವಾರಿಯರ್ಸ್‌ಗೆ ಬೂಸ್ಟರ್‌ ಡೋಸ್‌ ನೀಡುವ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚೆ: ಸಿಎಂ

ಓಮಿಕ್ರಾನ್ ವೇಗವಾಗಿ ಹರಡುತ್ತದೆ. ಹೀಗಾಗಿ ಈಗಲೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಕಾಲ ಕಾಲಕ್ಕೆ ಮಾರ್ಗಸೂಚಿ ಬದಲಾವಣೆ ಮಾಡುವುದಕ್ಕೆ ನಿರ್ಧಾರ ಮಾಡುತ್ತೇವೆ. ಮನೆ ಮನೆಗೆ ಲಸಿಕೆ ನೀಡುವ ಕೆಲಸ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಲಸಿಕೆ ನೀಡಲಾಗುತ್ತಿದೆ. ʼಲಸಿಕಾ ಮಿತ್ರʼ ಹೆಸರಿನಲ್ಲಿ ಲಸಿಕೆ ನೀಡಲಾಗುತ್ತಿದೆ. ಅತ್ಯಂತ ಯಶಸ್ವಿಯಾಗಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *