ನಮ್ಮ ನಗರಗಳು ಸ್ವಚ್ಛವಾಗಿ, ಸುಂದರವಾಗಿ ಮತ್ತು ಆರೋಗ್ಯಕರವಾಗಿರುವುದರ ಹಿಂದೆ ಅದೆಷ್ಟೋ ಶ್ರಮಿಕರ ಬೆವರು ಮತ್ತು ತ್ಯಾಗ ಅಡಗಿದೆ. ಸೂರ್ಯೋದಯಕ್ಕೂ ಮುನ್ನವೇ ಎದ್ದು, ಬೆಳಗಿನ ಚಳಿಯಲ್ಲಿ, ಮಧ್ಯಾಹ್ನದ ಕಡು ಬಿಸಿಲಿನಲ್ಲಿ, ಮಳೆಯಲ್ಲೂ ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಜೀವಗಳೆಂದರೆ, ಅವರು ಪೌರ ಕಾರ್ಮಿಕರು. ಪೌರ ಕಾರ್ಮಿಕರ ಸ್ಥಿತಿಗತಿಗಳ ಕುರಿತು ಹೇಳಲು ಸಾಕಷ್ಟು ವಿವರಗಳಿವೆ. ಸದ್ಯ ಪೌರಕಾರ್ಮಿಕರ ಬದುಕನ್ನು ಕಟ್ಟಿಕೊಡುವ `ಗಾರ್ಡನ್’ ಸಿನಿಮಾ (Garden Cinema) ಅದ್ಧೂರಿಯಾಗಿ ಆರಂಭಗೊಂಡಿದೆ.
ಆರ್ಯ ಮಹೇಶ್ ನಿರ್ದೇಶನದಲ್ಲಿ, ಟಕ್ಕರ್ ಮನೋಜ್ ನಟನೆಯಲ್ಲಿ ಗಾರ್ಡನ್ ಮೂಡಿಬರಲಿದೆ. ಮುಹೂರ್ತದ ದಿನ ಫಸ್ಟ್ ಲುಕ್ ಪೋಸ್ಟರ್ ಕೂಡಾ ಅನಾವರಣಗೊಂಡಿದೆ. ಇದರಲ್ಲಿ ಹೀರೋ ಮುಖವನ್ನು ನೇರವಾಗಿ ಅನಾವರಣ ಮಾಡಿಲ್ಲ. ಬದಲಿಗರ ಕೈ ಮುಷ್ಟಿ ಹಿಡಿದು, ಹಿಮ್ಮುಖವಾಗಿ ನಿಂತಿರುವ ಸ್ಟಿಲ್, ಅದರ ಮೇಲೆ ಬಿಬಿಎಂಪಿ ಬಿಲ್ಡಿಂಗ್, ಬೆಂಗಳೂರು ಮಹಾನಗರ ಪಾಲಿಕೆ ಎನ್ನುವ ಮುದ್ರೆ ಮುಂತಾದ ಎಲಿಮೆಂಟುಗಳನ್ನು ಬಳಸಲಾಗಿದೆ. ಮೇಲ್ನೋಟಕ್ಕೆ ಇದು ಬೆಂಗಳೂರಿನ ಕಸ ವಿಲೇವಾರಿ ಮತ್ತು ಅದರ ಸುತ್ತಲಿನ ಮಾಫಿಯಾದ ಸುತ್ತ ಇರುವ ಕಥಾಹಂದರ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುವಂತಿದೆ. ಮುಹೂರ್ತ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ, ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ ದಿನಕರ್ ತೂಗುದೀಪ (Dinakar Thoogudeepa) ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ನಿರ್ದೇಶಕ ಆರ್ಯ ಮಹೇಶ್ ಈ ಸಲ ಕೂಡಾ ನೈಜ ಕಥಾವಸ್ತುವನ್ನು ಕೈಗೆತ್ತಿಕೊಂಡಿದ್ದಾರೆ. ಬೆಂಗಳೂರಿನ ಡಂಪಿಂಗ್ ಯಾರ್ಡ್‌ಗಳನ್ನು ಗಾರ್ಡನ್ ಅಂತಾ ಕರೀತಾರೆ. ಈ ಚಿತ್ರದ ಬಹುತೇಕ ಶೂಟಿಂಗ್ ನಡೆಯೋದು ಕಸ ವಿಲೇವಾರಿ ವಿಚಾರದ ಸುತ್ತ. ಹೀಗಾಗಿ ಗಾರ್ಡನ್ ಎಂದು ಹೆಸರಿಟ್ಟಿದ್ದಾರಂತೆ ನಿರ್ದೇಶಕರು. ಈ ಚಿತ್ರದಲ್ಲಿ ಇಬ್ಬರು ಹುಡುಗಿಯರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನು ಪ್ರೇಮಾ ಮತ್ತು ಸೋನಮ್ ರೈ ಇಬ್ಬರೂ ಮನೋಜ್ ಅವರ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ.
ಗಾರ್ಡನ್ ಚಿತ್ರದಲ್ಲಿ ರೆಗ್ಯುಲರ್ ಹೀರೋ ಹೀರೋಯಿನ್ ಥರದ ಪಾತ್ರಗಳಿರದೇ ವಿಶೇಷ ಪಾತ್ರದಲ್ಲಿ ಅನುಪ್ರೇಮಾ ಹಾಗೂ ಸೋನಮ್ ರೈ ನಟಿಸಿದ್ದಾರೆ. ಅಂದಹಾಗೆ ಗಾರ್ಡನ್ ಸಿನಿಮಾಗೆ ನಿರ್ಮಾಪಕ ಜಿ. ಮುನಿರಾಜು ಬಂಡವಾಳ ಹೂಡಿದ್ದಾರೆ. ನಿರ್ದೇಶಕ ಮಹೇಶ್ ಅವರ ಬೊಂಬೂ ಸವಾರಿ ಚಿತ್ರಕ್ಕೆ ಸಹ ನಿರ್ಮಾಪಕನಾಗಿದ್ದ ಮುನಿರಾಜು ಅವರು ಈ ಸಲ ಎಂ.ಆರ್.ಸಿನಿಮಾಸ್ ಬ್ಯಾನರ್ ಮೂಲಕ ಪೂರ್ಣ ಪ್ರಮಾಣದ ನಿರ್ಮಾಪಕನಾಗಿ ಗಾರ್ಡನ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮುಹೂರ್ತದ ವೇಳೆ ಈ ಚಿತ್ರದ ಛಾಯಾಗ್ರಾಹಕ ಮುಂಜಾನೆ ಮಂಜು, ಸಾಹಸ ನಿರ್ದೇಶಕ ವೈಲೆಂಟ್ ವೇಲು, ಕೊರಿಯೋಗ್ರಾಫರ್ ಟಗರು ರಾಜು, ಸಂಕಲನಕಾರ ಜಿ ಗಿರೀಶ್ ಕುಮಾರ್ ಮುಂತಾದವರು ಹಾಜರಿದ್ದರು. ಮುಹೂರ್ತ ಸಮಾರಂಭಕ್ಕೆ ಖ್ಯಾತ ಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ್, ಮುಳಬಾಗಲು ಶಾಸಕ ಸಮೃದ್ಧಿ ಮಂಜುನಾಥ್, ರಾಯಲ್ ಎಸ್.ಆರ್. ಅನಿಲ್ ಕುಮಾರ್, ಹಸಿರು ಸೇನೆ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್, ಪಿ.ಮೂರ್ತಿ ಮುಂತಾದವರು ಆಗಮಿಸಿ ಶುಭ ಕೋರಿದ್ದಾರೆ.