ಹವಾಮಾನ ಆಧಾರಿತ ಕೃಷಿಯ ಸಮಗ್ರ ಅಭಿವೃದ್ಧಿಗೆ ಚಿಂತನೆ: ಸಿಎಂ

Public TV
2 Min Read

ಬೆಂಗಳೂರು: ಹವಾಮಾನ ಆಧಾರಿತ ಕೃಷಿಯ ಸಮಗ್ರ ಅಭಿವೃದ್ಧಿಗೆ ಚಿಂತನೆ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರಿನಲ್ಲಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಕೃಷಿ ಭವನದ 2 ನೇ ಕಟ್ಟಡವನ್ನು ಉದ್ಘಾಟಿಸಿ ಇಂದು ಅವರು ಮಾತನಾಡಿದರು. ಕರ್ನಾಟಕದಲ್ಲಿ ಹವಾಮಾನ ಆಧಾರಿತ ಹತ್ತು ಕೃಷಿ ವಲಯಗಳು ಇವೆ. ವರ್ಷಪೂರ್ತಿ ಒಂದಿಲ್ಲೊಂದು ಬೆಳೆ ತೆಗೆಯುವ ಹವಾಮಾನ ನಮ್ಮ ರಾಜ್ಯದಲ್ಲಿದೆ. ಹವಾಮಾನ ಆಧಾರಿತ ಕೃಷಿಯ ಸಮಗ್ರ ಅಭಿವೃದ್ಧಿಗೆ ಚಿಂತನೆ ಮಾಡಬೇಕು. ರೈತರು ಹೈನುಗಾರಿಕೆ, ಪಶುಸಂಗೋಪನೆ ಸೇರಿದಂತೆ ಉಪಕಸುಬುಗಳನ್ನು ಮಾಡುವ ಮೂಲಕ ರೈತರ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕಸ ಎಸೆದ ಯುವಕನಿಗೆ ರಸ್ತೆ ಮಧ್ಯೆ ಸಿಟಿ ರವಿ ಕ್ಲಾಸ್

ಸ್ವತಂತ್ರ ಚಿಂತನೆ ಮೂಲಕ ಕೃಷಿ ಅಭಿವೃದ್ಧಿ ಯೋಜನೆ: ಕೃಷಿಕ ಸಮಾಜ ಕೃಷಿ ಅಭಿವೃದ್ಧಿಗೆ ತನ್ನದೇ ಕೊಡುಗೆ ನೀಡಿದೆ. ಕೃಷಿ ಇಲಾಖೆಯ ಭಾಗವಾಗಿ ಕೆಲಸ ಮಾಡುವ ಜೊತೆಗೆ ಕೃಷಿಕ ಸಮಾಜ, ಸ್ವತಂತ್ರ ಚಿಂತನೆ ಮೂಲಕ ರೂಪಿಸಿದ ರೈತ ಪರ ಯೋಜನೆಗಳನ್ನು ಸರ್ಕಾರ ಅನುಷ್ಠಾನಗೊಳಿಸಲಿದೆ. ಬೀಜ, ಗೊಬ್ಬರ, ಮಣ್ಣಿನ ಗುಣಮಟ್ಟ, ಮಾರುಕಟ್ಟೆ, ಸಂಗ್ರಹಣೆಗೆ ಸಂಬಂಧಿಸಿದ ಕೃಷಿಯಲ್ಲಿನ ಆಧುನಿಕ ಸವಾಲುಗಳಿಗೆ ಉತ್ತರಿಸುವ ಯೋಜನೆಗಳನ್ನು ರೂಪಿಸಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ರೈತ ತಾನು ಬೆಳೆದು, ಕಟಾವು ಮಾಡಿ, ಸಂಗ್ರಹಣೆ ಮಾಡಿದ ಬೆಳೆಗೆ ಸ್ಪರ್ಧಾತ್ಮಕವಾದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯುವವರೆಗೆ ರೈತರ ಕರ್ತವ್ಯ ಇರುತ್ತದೆ. ಈಗ ಸುಗ್ಗಿ ನಂತರ ಕೃಷಿ ಚಟುವಟಿಕೆಯಲ್ಲೂ ಕೂಡ ಕೃಷಿಕ ಹೆಚ್ಚಿನ ಆಸಕ್ತಿಯನ್ನು ವಹಿಸಬೇಕಾಗಿದೆ. ಗೋದಾಮು, ಶೈತ್ಯಾಗಾರಗಳು, ಮಾರುಕಟ್ಟೆ ಸಂಪರ್ಕ, ಆನ್‍ಲೈನ್ ಮಾರುಕಟ್ಟೆಗಳ ಮೂಲಕ ರೈತ ಬೆಳೆದ ಬೆಳೆಗೆ ಉತ್ತಮ ಬೆಲೆ ದೊರಕಿಸಿಕೊಡುವ ಪ್ರಕ್ರಿಯೆಯಲ್ಲಿ ಕೃಷಿಕ ಸಮಾಜ ಮಹತ್ವದ ಪಾತ್ರ ವಹಿಸುತ್ತದೆ. ಕೃಷಿಕ ಸಮಾಜದ ಈ ಜವಾಬ್ದಾರಿಗೆ ಸರ್ಕಾರ ಎಲ್ಲ ರೀತಿಯ ಸಹಕಾರವನ್ನು ನೀಡುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಪೈರಸಿ ಒಂದು ವೈರಸ್, ತಡೆಯವುದು ಕಷ್ಟ: ಸುಮಲತಾ ಅಂಬರೀಶ್

Karnataka Pradesh Krishi Samaja 3

ನೈಸರ್ಗಿಕ ಕೃಷಿಗೆ ಪ್ರೋತ್ಸಾಹ: ಕೃಷಿಕನ ಆದಾಯ ಹೆಚ್ಚಿಸಲು ಸೆಕೆಂಡರಿ ಕೃಷಿ ನಿರ್ದೇಶನಾಲಯ ಸ್ಥಾಪನೆಗೆ ತೀರ್ಮಾನಿಸಲಾಗಿದೆ. ನೈಸರ್ಗಿಕ ಕೃಷಿಗೆ ಪ್ರೋತ್ಸಾಹಿಸಲು ಹೆಚ್ಚಿನ ಅನುದಾನವನ್ನು ಮುಂದಿನ ಆಯವ್ಯಯದಲ್ಲಿ ಮೀಸಲಿಡಲಾಗುವುದು. ಕೃಷಿ ವಲಯದಲ್ಲಿ ಶೇ.1ರಷ್ಟು ಬೆಳವಣಿಗೆಯಾದರೆ, ಕೈಗಾರಿಕಾ ವಲಯದಲ್ಲಿ ಶೇ.4ರಷ್ಟು ಹಾಗೂ ಸೇವಾ ಕ್ಷೇತ್ರದಲ್ಲಿ ಶೇ.10ರಷ್ಟು ಬೆಳವಣಿಗೆಯಾಗುತ್ತದೆ. ಆದ್ದರಿಂದ ಕೃಷಿ ಕ್ಷೇತ್ರದ ಅಭಿವೃದ್ಧಿ ರಾಜ್ಯದ ಆರ್ಥಿಕತೆಯ ಅಭಿವೃದ್ಧಿಗೆ ಪೂರಕವಾಗಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *