ಬಿಬಿಎಂಪಿ ಆಯುಕ್ತರ ವಿರುದ್ಧ ಭ್ರಷ್ಟಾಚಾರ ಆರೋಪ- ಆಯುಕ್ತರ ವಜಾಗೆ ಆಗ್ರಹ

Public TV
4 Min Read

ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರ ವಿರುದ್ಧ ಅಧಿಕಾರ ದುರುಪಯೋಗ, ಭ್ರಷ್ಟಾಚಾರ, ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.

ನ್ಯಾಯಾಲಯದ ಆದೇಶವೊಂದನ್ನು ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿ, ತಡೆಯಾಜ್ಞೆ ತೆಗೆದುಕೊಳ್ಳುವ ಹತ್ತಾರು ಅವಕಾಶಗಳಿದ್ದರೂ ಪಾಲಿಕೆಯ ಮುಖ್ಯ ಆಯುಕ್ತರು ಬಿಲ್ಡರ್‌ಗಳ ಪರವಾದ ಆದೇಶವನ್ನು ಹೊರಡಿಸುವ ಮೂಲಕ ಪಾಲಿಕೆಗೆ ಪ್ರತೀ ವರ್ಷ ನೂರಾರು ಕೋಟಿ ವಂಚನೆಯಾಗುವ ನಿರ್ಣಯ ತೆಗೆದುಕೊಂಡಿದ್ದಾರೆ. ಆ ಮೂಲಕ ಹತ್ತಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ದೂರಲಾಗಿದೆ.

ಈ ಸಂಬಂಧ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್‌.ಆರ್‌.ರಮೇಶ್ ಅವರಿಂದ ದೂರು ದಾಖಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ CREDAI ಸಂಸ್ಥೆಯ 360 ಕ್ಕೂ ಹೆಚ್ಚು ಬಿಲ್ಡರ್‌ಗಳು, BRAI ಸಂಸ್ಥೆಯ 300 ಕ್ಕೂ ಹೆಚ್ಚು ಬಿಲ್ಡರ್‌ಗಳು ಹಾಗೂ ಈ ಎರಡೂ ಸಂಸ್ಥೆಗಳೊಂದಿಗೆ ಗುರುತಿಸಿಕೊಳ್ಳದ ನೂರಾರು ಮಂದಿ ಬಿಲ್ಡರ್‌ಗಳು ಬೃಹತ್ ವಾಣಿಜ್ಯ ಮತ್ತು ಬೃಹತ್ ವಸತಿ ಕಟ್ಟಡಗಳ ಸಂಕೀರ್ಣಗಳು/ ಕಟ್ಟಡಗಳ ನಿರ್ಮಾಣ ಕಾರ್ಯದಲ್ಲಿ ಕಳೆದ ಹತ್ತಾರು ವರ್ಷಗಳಿಂದ ತೊಡಗಿಕೊಂಡಿದ್ದು, ಬಿಬಿಎಂಪಿಯ ನಗರ ಯೋಜನೆ ಇಲಾಖೆಗೆ ಸದರಿ ಬಿಲ್ಡರ್‌ಗಳು ನ್ಯಾಯಯುತವಾಗಿ ಪಾವತಿಸಬೇಕಿದ್ದ ಕಟ್ಟಡ ನಿರ್ಮಾಣ ಸಂಬಂಧಿತ ನಕ್ಷೆ ಮಂಜೂರಾತಿ ಶುಲ್ಕದ ವಿನಾಯಿತಿ ಕೋರಿ, ಹತ್ತಕ್ಕೂ ಹೆಚ್ಚು ಮಂದಿ ಪ್ರತಿಷ್ಟಿತ ಬಿಲ್ಡರ್‌ಗಳು ಪ್ರತ್ಯೇಕವಾಗಿ ರಾಜ್ಯದ ಹೈಕೋರ್ಟ್‌ನಲ್ಲಿ Writ Petitionಗಳನ್ನು ದಾಖಲಿಸಿದ್ದರು. ನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್‌ ತಿಂಗಳಲ್ಲಿ ಆದೇಶವೊಂದನ್ನು ನೀಡಿ, ಯಾವುದೇ ಬಿಲ್ಡರ್‌ಗಳು ಬಿಬಿಎಂಪಿ ನಕ್ಷೆ ಮಂಜೂರಾತಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ ಎಂಬ ತೀರ್ಪನ್ನು ನೀಡಿರುತ್ತದೆ. ಪಾಲಿಕೆಯ ಹಿತಾಸಕ್ತಿಗೆ ವಿರುದ್ಧವಾಗಿರುವ ನ್ಯಾಯಾಲಯದ ಆದೇಶವನ್ನು ಪಾಲಿಕೆಯ ಮುಖ್ಯ ಆಯುಕ್ತರು, ಹೈಕೋರ್ಟ್‌ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಲು ಹಾಗೂ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆಯನ್ನು ತರುವಂತಹ ಹತ್ತಾರು ಅವಕಾಶಗಳಿದ್ದರೂ ಇದರತ್ತ ಗಮನ ಕೊಡದೇ ಕಳೆದ ಒಂದು ತಿಂಗಳ ಹಿಂದೆ ನಡೆದಂತಹ CREDAI ಸಂಸ್ಥೆಯ ಸದಸ್ಯರೊಂದಿಗಿನ ಸಭೆಯಲ್ಲಿ ಬಿಲ್ಡರ್‌ಗಳ ಪರವಾದ ನಿಲುವನ್ನು ಪಡೆದಿರುವಂತಹದ್ದು ನಿಜಕ್ಕೂ ಆಘಾತಕಾರಿಯಾದಂತಹ ವಿಷಯ ಎಂದು ದೂರು ನೀಡಿದ್ದಾರೆ. ಇದನ್ನೂ ಓದಿ: ಅಭಿಮಾನ ಆವೇಶವಾಗಬಾರದು, ಅಭಿಮಾನ ಹಾಡಿನಂತಿರಬೇಕು: ಪತ್ರ ಬರೆದ ಹಂಸಲೇಖ

ಬಿಬಿಎಂಪಿ ನಗರ ಯೋಜನೆ ಇಲಾಖೆಯ ಜಂಟಿ ನಿರ್ದೇಶಕರು (ಉತ್ತರ) ಆಗಿ ಕಾರ್ಯನಿರ್ವಹಿಸುತ್ತಿರುವ “ನಗರ ಯೋಜನೆ ಇಲಾಖೆ” ಹಾಗೂ “ಎರವಲು ಸೇವೆ”ಯಿಂದ ಬಂದಿರುವ ಮಂಜೇಶ್ ಅವರು ನಿರಂತರವಾಗಿ ಪಾಲಿಕೆಯ ಹಿತಾಸಕ್ತಿಗೆ ವಿರುದ್ಧವಾದ ನಡೆಗಳನ್ನು ಮತ್ತು ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರ ಕುತಂತ್ರದ ಫಲದಿಂದ ಪಾಲಿಕೆಯ ಮುಖ್ಯ ಆಯುಕ್ತರು ಮಂಜೇಶ್ ಅವರೊಂದಿಗೆ ಶಾಮೀಲಾಗಿ ಪ್ರತಿಷ್ಟಿತ ಬಿಲ್ಡರ್‌ಗಳಿಂದ ಕೋಟ್ಯಂತರ ರೂಪಾಯಿಗಳಷ್ಟು ಹಣವನ್ನು ಕಿಕ್ ಬ್ಯಾಕ್ ರೂಪದಲ್ಲಿ ಪಡೆದು, 2008 ಕ್ಕೂ ಮೊದಲು ಇದ್ದಂತಹ ನಕ್ಷೆ ಮಂಜೂರಾತಿ ಶುಲ್ಕದ ಪದ್ಧತಿಯಂತೆ ಶುಲ್ಕ ವಸೂಲಿ ಮಾಡುವ ನಿರ್ಧಾರವನ್ನು ತೆಗೆದುಕೊಂಡು, ಈ ಸಂಬಂಧ ಆದೇಶವನ್ನೂ ಸಹ ಹೊರಡಿಸಿರುತ್ತಾರೆ ಎಂದು ದೂರಿದ್ದಾರೆ.

ಪಾಲಿಕೆಯ ಮುಖ್ಯ ಆಯುಕ್ತರ ಆದೇಶದಂತೆ 2008 ಕ್ಕೂ ಹಿಂದಿನ ನಕ್ಷೆ ಮಂಜೂರಾತಿ ಶುಲ್ಕವನ್ನು ಸಂಗ್ರಹಿಸಲು ಪಾಲಿಕೆ ಮುಂದಾಗುತ್ತಿರುವ ಪರಿಣಾಮದಿಂದ ಈಗಿನ ನಕ್ಷೆ ಮಂಜೂರಾತಿ ಶುಲ್ಕದ ಶೇ. 22 ರಷ್ಟು ಶುಲ್ಕವನ್ನು ಮಾತ್ರವೇ ಪಾಲಿಕೆಯು ಸಂಗ್ರಹಿಸಬೇಕಾಗಿರುತ್ತದೆ. ಪಾಲಿಕೆಯ ಮುಖ್ಯ ಆಯುಕ್ತರ ಆದೇಶದಂತೆ ಸಂಬಂಧಪಟ್ಟ ಬಿಲ್ಡರ್‌ಗಳು ಪಾಲಿಕೆಗೆ ಮುಚ್ಚಳಿಕೆ ಪತ್ರವನ್ನು ಬರೆದುಕೊಡಬೇಕಿದ್ದು, ಸದರಿ ಮುಚ್ಚಳಿಕೆ ಪತ್ರದಲ್ಲಿ ಮುಂದೆ ನ್ಯಾಯಾಲಯವು ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧರಾಗಿ, ಅವರು 2008 ಕ್ಕೂ ಹಿಂದಿನ ಪದ್ಧತಿಯಂತೆ ಶುಲ್ಕವನ್ನು ಪಾವತಿಸುವುದಾಗಿ ಬರೆದುಕೊಡಬೇಕಿರುತ್ತದೆ. ಈ ರೀತಿ ಬರೆದುಕೊಟ್ಟ ಬಿಲ್ಡರ್ ಗಳು ತಮ್ಮ ಕಟ್ಟಡ ನಿರ್ಮಾಣ ಪೂರ್ಣಗೊಂಡ ನಂತರ ಗ್ರಾಹಕರಿಗೆ ವಾಣಿಜ್ಯ ಮಳಿಗೆಗಳನ್ನು ಅಥವಾ ವಸತಿ ಸಮುಚ್ಚಯಗಳನ್ನು ಮಾರಾಟ ಮಾಡಿರುತ್ತಾರಲ್ಲದೇ, ಅಂತಹ ಬಿಲ್ಡರ್‌ಗಳಿಂದ ಬಾಕಿ ಶುಲ್ಕವನ್ನು ಸಂಗ್ರಹಿಸುವುದು ನಿಜಕ್ಕೂ ಅಸಾಧ್ಯವಾದ ಕೆಲಸವಾಗಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಕೇಳಲಿದೆ ಜೆಸಿಬಿ ಸದ್ದು – ಶೀಘ್ರವೇ ರಾಜಕಾಲುವೆ ಒತ್ತುವರಿ ತೆರವು

ಈಗಿನ ನಕ್ಷೆ ಮಂಜೂರಾತಿ ಶುಲ್ಕದ ಶೇ. 22 ರಷ್ಟನ್ನು ಮಾತ್ರ 2008 ಕ್ಕೂ ಹಿಂದೆ ವಸೂಲಿ ಮಾಡಲಾಗುತ್ತಿತ್ತು. ಬದಲಾದ ಸನ್ನಿವೇಶಗಳಲ್ಲಿ ಮತ್ತು ಬೆಂಗಳೂರು ಮಹಾನಗರದಲ್ಲಿ 2008 ರಲ್ಲಿದ್ದ ಭೂಮಿಯ ಬೆಲೆಗೂ ಪ್ರಸ್ತುತ ಇರುವ ಭೂಮಿಯ ಬೆಲೆಗೂ ಅಜಗಜಾಂತರ ವ್ಯತ್ಯಾಸವಾಗಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ನಕ್ಷೆ ಮಂಜೂರಾತಿ ಶುಲ್ಕವನ್ನೂ ಸಹ 2008-09 ರಿಂದ ಏರಿಸಲಾಗಿತ್ತು. ಪ್ರಸ್ತುತ ಇರುವ ನಕ್ಷೆ ಮಂಜೂರಾತಿ ಶುಲ್ಕದ ಒಟ್ಟು ಶುಲ್ಕದ ಪೈಕಿ 2008 ಕ್ಕೂ ಹಿಂದೆ ಇದ್ದಂತಹ ಶುಲ್ಕ ವಸೂಲಾತಿ ಪದ್ಧತಿಯ ಅನ್ವಯ ಈಗಿರುವಂತಹ ನಕ್ಷೆ ಮಂಜೂರಾತಿ ಶುಲ್ಕದ ಶೇ. 22 ರಷ್ಟು ಮಾತ್ರ. ಉದಾಹರಣೆಗೆ ಪ್ರಸ್ತುತ ಯಾವುದೇ ಒಂದು ಕಟ್ಟಡದ ನಕ್ಷೆ ಮಂಜೂರಾತಿಗೆ 01 ಲಕ್ಷ ರೂಪಾಯಿ ಸಂಗ್ರಹವಾಗುತ್ತಿದ್ದರೆ, 2008 ಕ್ಕೂ ಹಿಂದಿನ ಪದ್ಧತಿಯಂತೆ ಕೇವಲ 22 ಸಾವಿರ ರೂಪಾಯಿಗಳಷ್ಟು ಮಾತ್ರ ಶುಲ್ಕವನ್ನು ವಸೂಲಿ ಮಾಡಬಹುದಾಗಿರುತ್ತದೆ ಎಂದು ತಿಳಿಸಿದ್ದಾರೆ.

ಅವೈಜ್ಞಾನಿಕ ಮತ್ತು ಬಿಲ್ಡರ್‌ಗಳ ಪರವಾದಂತಹ ನಿರ್ಧಾರವನ್ನು ತೆಗೆದುಕೊಂಡು ಪಾಲಿಕೆಗೆ ನೂರಾರು ಕೋಟಿ ರೂಪಾಯಿಗಳ ನಕ್ಷೆ ಮಂಜೂರಾತಿ ಶುಲ್ಕದ ವಸೂಲಾತಿಗೆ ಕಡಿವಾಣ ಹಾಕಲು ಹೊರಟಿರುವ ಪಾಲಿಕೆಯ ಆರ್ಥಿಕ ಹಿತಾಸಕ್ತಿಗೆ ವಿರುದ್ಧವಾದ ನಿಲುವನ್ನು ತೆಗೆದುಕೊಂಡಿರುವ ಮತ್ತು ವಿಭಾಗೀಯ ಪೀಠದಲ್ಲಿ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಲು ಅಥವಾ ಅದಕ್ಕೆ ತಡೆಯಾಜ್ಞೆ ತೆಗೆದುಕೊಳ್ಳಲು ಹತ್ತಾರು ಅವಕಾಶಗಳಿದ್ದರೂ ಪಾಲಿಸದ ಆಯುಕ್ತರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಿಎಂ ಪತ್ರ ಬರೆಯಲಾಗಿದೆ. ಈ ಬಿಲ್ಡರ್‌ಗಳ ಪರವಾದಂತಹ ಪಾಲಿಕೆ ವಿರೋಧಿ ನಿರ್ಣಯವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಲಾಗಿದೆ.

ನಿರಂತರವಾಗಿ ಪಾಲಿಕೆ ವಿರೋಧಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿರುವ ಗೌರವ್ ಗುಪ್ತಾ ಅವರನ್ನು ಪಾಲಿಕೆಯ ಮುಖ್ಯ ಆಯುಕ್ತರ ಸ್ಥಾನದಿಂದ ಕೂಡಲೇ ಬದಲಿಸಬೇಕೆಂದು ಸಿಎಂಗೆ ಆಗ್ರಹಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *