ವೈಮಾನಿಕ ದಾಳಿಯಲ್ಲಿ ಐಸಿಸ್‌ ಕಮಾಂಡರ್‌ ಅಬು ಖದೀಜಾ ಹತ್ಯೆ – ಬಲದ ಮೂಲಕ ಶಾಂತಿ ಎಂದ ಟ್ರಂಪ್‌

Public TV
2 Min Read

ಬಾಗ್ದಾದ್: ಇರಾಕ್‌ನ (Iraq) ಅಲ್ ಅನ್ಬರ್ ಪ್ರಾಂತ್ಯದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್ (ISIS) ಭಯೋತ್ಪಾದಕ ಗುಂಪಿನ ಜಾಗತಿಕ ಕಾರ್ಯಾಚರಣೆಗಳ ಮುಖ್ಯಸ್ಥ ಅಬ್ದುಲ್ಲಾ ಮಕ್ಕಿ ಮುಸ್ಲಿಹ್ ಅಲ್-ರಿಫಾಯಿ (ಅಬು ಖದೀಜಾ) ಹತ್ಯೆಯಾಗಿದ್ದಾನೆ ಎಂದು ಅಮೆರಿಕ ಘೋಷಿಸಿದೆ.

ವೈಮಾನಿಕ ದಾಳಿಯ ನಂತರ ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಮತ್ತು ಇರಾಕ್‌ನ ಸೇನಾ ಪಡೆಗಳು ಸ್ಥಳಕ್ಕೆ ಭೇಟಿ ನೀಡಿ ಅಬು ಖದೀಜಾ (Abu Khadija) ಮತ್ತು ಇತರ ಐಸಿಸ್ ಉಗ್ರರ ಸಾವನ್ನು ದೃಢಪಡಿಸಿವೆ. ಆತನ ಗುರುತನ್ನು ಡಿಎನ್ಎ ಹೋಲಿಕೆಯ ಮೂಲಕ ದೃಢಪಡಿಸಲಾಯಿತು. ಈ ಹಿಂದೆ ನಡೆದ ದಾಳಿಯಲ್ಲಿ ಅವನು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದ. ಉಗ್ರರ ಶವ ಪತ್ತೆಯಾದ ಜಾಗದಲ್ಲಿ ಭಾರೀ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹತ್ಯೆಗೀಡಾದ ಅಬು ಖದೀಜಾ ಐಸಿಸ್‌ ಉಗ್ರ ಸಂಘಟನೆಯ ಎರಡನೇ ಕಮಾಂಡರ್ ಸಹ ಆಗಿದ್ದ. ವಿಶ್ವಾದ್ಯಂತ ಭಯೋತ್ಪಾದಕ ಗುಂಪಿನ ಲಾಜಿಸ್ಟಿಕ್ಸ್, ಯೋಜನೆ ಮತ್ತು ಹಣಕಾಸು ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ ಎಂದು ಅಮೆರಿಕ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.

ಇರಾಕ್‌ ಪ್ರಧಾನಿ ಮೊಹಮ್ಮದ್ ಶಿಯಾ ಅಲ್-ಸುಡಾನಿ ಈ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಅಬು ಖದೀಜಾ ಇರಾಕ್ ಮತ್ತು ವಿಶ್ವದ ಅತ್ಯಂತ ಅಪಾಯಕಾರಿ ಭಯೋತ್ಪಾದಕರಲ್ಲಿ ಒಬ್ಬ. ಆತನನ್ನು ಅಮೆರಿಕ ಸೇನೆಯ ಬೆಂಬಲದೊಂದಿಗೆ ಹತ್ಯೆಗೈಯ್ಯಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಇಂದು ಇರಾಕ್‌ನಲ್ಲಿ ಐಸಿಸ್‌ನ ನಾಯಕನನ್ನು ಕೊಲ್ಲಲಾಯಿತು. ನಮ್ಮ ನಿರ್ಭೀತ ರಣ ಯೋಧರು ಅವರನ್ನು ಬೇಟೆಯಾಡಿದರು. ಬಲದ ಮೂಲಕ ಶಾಂತಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Share This Article