ಒಳ್ಳೆಯ ಬಟ್ಟೆ,‌ ದುಬಾರಿ ಸನ್‌ ಗ್ಲಾಸ್ ಧರಿಸಿದ್ದಕ್ಕೆ ದಲಿತ ವ್ಯಕ್ತಿಯ ಮೇಲೆ ಹಲ್ಲೆ- 7 ಮಂದಿ ವಿರುದ್ಧ FIR

By
1 Min Read

ಗಾಂಧಿನಗರ: ದಲಿತ ವ್ಯಕ್ತಿಯೊಬ್ಬ ಒಳ್ಳೆಯ ಬಟ್ಟೆ ಹಾಗೂ ದುಬಾರಿ ಸನ್‍ಗ್ಲಾಸ್ (Sunglass) ಧರಿಸಿದ್ದ ಎಂಬ ಕಾರಣಕ್ಕೆ ತಂಡವೊಂದು ಹಲ್ಲೆ ಮಾಡಿ ಘಟನೆ ಗುಜರಾತ್‍ನಲ್ಲಿ ನಡೆದಿದೆ.

ಗುಜರಾತ್‍ (Gujrat) ನ ಬನಸ್ ಕಾಂತ ಜಿಲ್ಲೆಯ ಪಾಲನ್‍ಪುರ ತಾಲೂಕಿನ ಮೋಟಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಿಗರ್ ಶೆಖಾಲಿಯಾ ಹಲ್ಲೆಗೊಳಗಾದ ವ್ಯಕ್ತಿ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಏಳು ಮಂದಿ ಆರೋಪಿಗಳ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ಶಕುನಿ ಪಾತ್ರಧಾರಿ ಗೂಫಿ ಆರೋಗ್ಯ ಸ್ಥಿತಿ ಗಂಭೀರ

ನಡೆದಿದ್ದೇನು..?: ಮಂಗಳವಾರ ಬೆಳಗ್ಗೆ ಜಿಗರ್ ತಮ್ಮ ಮನೆ ಮುಂದೆ ನಿಂತಿದ್ದರು. ಈ ವೇಳೆ ಓರ್ವ ಆರೋಪಿ ಬಂದು ಇತ್ತೀಚಿನ ದಿನಗಳಲ್ಲಿ ನಿನ್ನದು ಅತಿಯಾಯ್ತು. ಇದೇ ರೀತಿ ಮುಂದುವರಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹೊರಟು ಹೋಗಿದ್ದಾನೆ.

ಅದೇ ದಿನ ರಾತ್ರಿ ಜಿಗರ್ ಗ್ರಾಮದ ಹೊರಭಾಗದ ದೇವಾಲಯದ ಬಳಿ ನಿಂತಿದ್ದ ವೇಳೆ ಬಂದ 7 ಮಂದಿ ಆರೋಪಿಗಳು ಏಕಾಏಕಿ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ತನ್ನನ್ನು ಯಾಕೆ ಹೊಡೆಯುತ್ತಿದ್ದೀರಾ ಎಂದು ಕೇಳಿದಾಗ ಒಳ್ಳೆಯ ಬಟ್ಟೆ ಹಾಗೂ ಸನ್ ಗ್ಲಾಸ್ ಧರಿಸಿದ್ದಕ್ಕಾಗಿ ಎಂದು ಹೇಳಿ ಮನಬಂದಂತೆ ಥಳಿಸಿದ್ದಾರೆ.

ಇತ್ತ ಮಗನ ಮೇಲೆ ಹಲ್ಲೆ ನಡೆಯುತ್ತಿರುವ ವಿಚಾರ ತಿಳಿದ ತಾಯಿ ಸ್ಥಳಕ್ಕೆ ದೌಡಾಯಿಸಿ ಹಲ್ಲೆ ಮಾಡದಂತೆ ಮನವಿ ಮಾಡಿದ್ದಾರೆ. ಅಲ್ಲದೆ ಮಗನ ರಕ್ಷಣೆಗೆ ಧಾವಿಸಿದ್ದಾರೆ. ಈ ವೇಳೆ ಆರೋಪಿಗಳು ಜಿಗರ್ ತಾಯಿ ಮೇಲೆಯೂ ಹಲ್ಲೆ ನಡೆಸಿ ಆಕೆಯ ಬಟ್ಟೆಯನ್ನು ಹರಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹೊರಟು ಹೋಗಿದ್ದಾರೆ.

ಗಾಯಾಳು ತಾಯಿ-ಮಗ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

Share This Article