ದೇಶವನ್ನು ವಿಭಜಿಸಿದ್ದು ಯಾರು?: ಸಂಸತ್ತಿನಲ್ಲಿ ‘ಕೈ’ ವಿರುದ್ಧ ಗುಡುಗಿದ ಶಾ

Public TV
2 Min Read

– 370ನೇ ವಿಧಿ ಸಂವಿಧಾನದಲ್ಲಿ ತಾತ್ಕಾಲಿಕ ನಿಬಂಧನೆ

ನವದೆಹಲಿ: ದೇಶವನ್ನು ವಿಭಜಿಸಿದ್ದು ಯಾರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಶ್ನಿಸುವ ಮೂಲಕ ಲೋಕಸಭಾ ಅಧಿವೇಶನಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ತ್ಯಾಗದ ಬಗ್ಗೆ ಮಾತನಾಡುತ್ತಲೇ ಬಂದಿದೆ. ಆದರೆ ಈಗ ನಾನು ಕೇಳುತ್ತಿದ್ದೇನೆ, ದೇಶವನ್ನು ವಿಭಜಿಸಿದ್ದು ಯಾರು? ಕಾಂಗ್ರೆಸ್ ದೇಶವನ್ನೇ ಇಬ್ಭಾಗ ಮಾಡಿತು ಎಂದು ಹೇಳಿ ಕಿಡಿಕಾರಿದರು.

ಅಧಿವೇಶನದಲ್ಲಿ ಇಂದು ಅಮಿತ್ ಶಾ ಅವರು ಜಮ್ಮು-ಕಾಶ್ಮೀರದಲ್ಲಿ ಇನ್ನೂ ಆರು ತಿಂಗಳು ರಾಷ್ಟ್ರಪತಿ ಆಳ್ವಿಕೆ ಮುಂದುವರಿಸುವ ಪ್ರಸ್ತಾವ ಮಂಡಿಸಿದರು. ಇದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತು.

ಈ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್ ನಾಯಕ ಮನೀಷ್ ತಿವಾರಿ ಅವರು, ಭಾರತವು ಜಾತ್ಯಾತೀತ ಸಂವಿಧಾನ ಹೊಂದಿರುವುದರಿಂದ ಜಮ್ಮು-ಕಾಶ್ಮೀರದ ಮುಸ್ಲಿಮರು ನಮ್ಮ ದೇಶದಲ್ಲಿ ಉಳಿಯಲು ನಿರ್ಧರಿಸಿದರು. ಇದು ಭಾರತಕ್ಕೆ ಅತ್ಯಂತ ಮಹತ್ವಪೂರ್ಣ ವಿಷಯವಾಗಿದೆ. ಅಲ್ಲಿನ ಪರಿಸ್ಥಿತಿ ಹದಗೆಡಲು ನೆರೆಯ ವೈರಿ ರಾಷ್ಟ್ರ ಪಾಕಿಸ್ತಾನ ಕಾರಣ ಎಂದು ಹೇಳಿದರು.

ಮನೀಷ್ ಜೀ ದೇಶವನ್ನು ವಿಭಜಿಸಿದ್ದು ಯಾರು? ಇದೊಂದು ಅತಿ ದೊಡ್ಡ ಪ್ರಮಾದವಾಗಿದ್ದು, ಇದನ್ನು ನಾವು ಮಾಡುವುದಿಲ್ಲ. 1/3 ರಷ್ಟು ಜಮ್ಮು-ಕಾಶ್ಮೀರ ನಮ್ಮಲ್ಲಿ ಉಳಿದಿಲ್ಲ. ಇದಕ್ಕೆ ಕಾರಣ ಯಾರು? ದೇಶ ವಿಭಜನೆ ವೇಳೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಗೃಹ ಸಚಿವ ಹಾಗೂ ಉಪ ಪ್ರಧಾನಿ ಸರ್ದಾರ್ ಪಟೇಲ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂದು ಅಮಿತ್ ಶಾ ದೂರಿದರು.

ನೀವು 370, 370 ಎಂದು ಪದೇ ಪದೇ ಹೇಳುತ್ತಿದ್ದೀರಿ. ಅದರ ಬಗ್ಗೆ ನನಗೂ ಗೊತ್ತಿದೆ. ಆದರೆ ಅದರಲ್ಲಿ ನೀವು ಚಿಕ್ಕ ಹಾಗೂ ಮುಖ್ಯ ಪದವನ್ನೇ ಬಿಟ್ಟುಬಿಟ್ಟಿದ್ದೀರಿ. 370ನೇ ವಿಧಿ ಸಂವಿಧಾನದಲ್ಲಿ ತಾತ್ಕಾಲಿಕ ನಿಬಂಧನೆಯೇ ಹೊರತು ಶಾಶ್ವತವಲ್ಲ. ಜಮ್ಮು-ಕಾಶ್ಮೀರದ ಮಾಜಿ ಸಿಎಂ ಶೇಖ್ ಅಬ್ದುಲ್ಲಾ ಅವರ ನೇತೃತ್ವದಲ್ಲಿಯೇ 370ನೇ ವಿಧಿ ಒಪ್ಪಿಗೆ ಪಡೆಯಲಾಗಿದೆ ಎಂದು ಹೇಳಿದರು.

ಜನರಿಗೆ ನೀಡಿರುವ ಭರವಸೆಗಳನ್ನು ಕೈಬಿಡುವ ಮಾತೇ ಇಲ್ಲ. ಭಾರತವನ್ನು ಸಮೃದ್ಧವಾಗಿಸುವುದು, ರಕ್ಷಣೆ ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ಇದರಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಹೇಳಿದರು.

ಜಮ್ಮು-ಕಾಶ್ಮೀರದಲ್ಲಿ ನಾವು ಪ್ರಜಾಪ್ರಭುತ್ವವನ್ನು ಮೆಟ್ಟಿ ಹಾಕುತ್ತಿದ್ದೇವೆ ಎಂದು ಕಾಂಗ್ರೆಸ್ ದೂರುತ್ತಿದ್ದಾರೆ. ಇಲ್ಲಿವರೆಗೆ ಒಟ್ಟು 132 ಬಾರಿ ವಿಧಿ 356 (ರಾಷ್ಟ್ರಪತಿ ಆಳ್ವಿಕೆಯನ್ನು) ಹೇರಲಾಗಿದೆ. ಅದರಲ್ಲಿ ಕಾಂಗ್ರೆಸ್ ನೇತೃತ್ವ ಸರ್ಕಾರವೇ 93 ಬಾರಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿದೆ. ಆದರೆ ಈಗ ಅವರೇ ನಮಗೆ ಪ್ರಜಾಪ್ರಭುತ್ವದ ಪಾಠ ಹೇಳಲು ಬರುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಸರ್ದಾರ್ ಪಟೇಲ್ ಅವರಿಂದಾಗಿ ಹೈದರಾಬಾದ್ ಹಾಗೂ ಜುನಾಗಡದಲ್ಲಿ ಇಂತಹ ಪರಿಸ್ಥಿತಿ ಉದ್ಭವಿಸಲಿಲ್ಲ. ನಾನು ಯಾಕೆ ಇತಿಹಾಸಕ್ಕೆ ಹೋಗಬಾರದು? ನಿಮ್ಮ ಪ್ರಶ್ನೆಗಳಿಗೆ ನಾನು ಯಾಕೆ ಉತ್ತರಿಸಬಾರದು? ನಿಮ್ಮ ತಪ್ಪಿನಿಂದಾಗಿಯೇ ನಾವು ಈಗ ಆಡಳಿತ ಪಕ್ಷದ ಸ್ಥಾನದಲ್ಲಿದ್ದೇವೆ ಎಂದು ಗೃಹ ಸಚಿವರು ಕಾಂಗ್ರೆಸ್ ಇತಿಹಾಸ ಬಿಚ್ಚಿಡುತ್ತಿದ್ದ ಮನೀಷ್ ತಿವಾರಿ ಹೇಳಿಕೆಗೆ ಪ್ರತಿಕ್ರಿಯಿಸಿದರು.

Share This Article
Leave a Comment

Leave a Reply

Your email address will not be published. Required fields are marked *