ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮುಖಭಂಗ, ಬಿಜೆಪಿಯಿಂದ ಸ್ಪರ್ಧಿಸಿದ ಗಂಡ-ಹೆಂಡತಿ ಜಯಭೇರಿ

Public TV
1 Min Read

ದಾವಣಗೆರೆ: ಮಹಾನಗರ ಪಾಲಿಕೆ ಉಪ ಚುನಾವಣೆಯ 28 ಹಾಗೂ 37ನೇ ವಾರ್ಡ್‌ಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ.

ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಯತ್ನಪಟ್ಟು ಪ್ರಚಾರ ಮಾಡಿದ್ದ ಕಾಂಗ್ರೆಸ್‌ನ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನಗೆ ತೀವ್ರ ಮುಖಭಂಗ ಆಗಿದೆ. ಜೆ.ಎನ್.ಶ್ರೀನಿವಾಸ್ ಹಾಗೂ ಅವರ ಪತ್ನಿ ಶ್ವೇತ ಈ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಸಲಾಗಿತ್ತು. 28ನೇ ವಾರ್ಡಿನಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಹುಲ್ಲುಮನಿ ಗಣೇಶ್ ಅವರು 1,884 ಮತಗಳನ್ನು ಪಡೆದರೆ, ಬಿಜೆಪಿಯ ಶ್ರೀನಿವಾಸ್ 2,565 ಮತ ಪಡೆದು 681 ಮತಗಳ ಅಂತರದಿಂದ ಜಯಭೇರಿ ಬಾರಿಸಿದರು. ಇದನ್ನೂ ಓದಿ: ಅಪಘಾತದಲ್ಲಿ ಮೃತಪಟ್ಟ 9 ಮಂದಿಯ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ

37ನೇ ವಾರ್ಡ್‌ನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಶ್ವೇತಾ ಶ್ರೀನಿವಾಸ್ 2,096 ಮತ ಪಡೆದರೆ, ಕಾಂಗ್ರೆಸ್ ರೇಖಾರಾಣಿ 1,303 ಮತಗಳನ್ನಷ್ಟೇ ಪಡೆದು ಸೋಲೊಪ್ಪಿಕೊಂಡರು. ಶ್ವೇತಾ ಶ್ರೀನಿವಾಸ್ 793 ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದ್ದು, ನಗರಪಾಲಿಕೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯಾಬಲವೂ ಹೆಚ್ಚಾಗಿದೆ. ಇದನ್ನೂ ಓದಿ: ಶೀಲ ಶಂಕಿಸಿ ತಲೆ ಹಿಡಿದು ನೆಲಕ್ಕೆ ಜಜ್ಜಿದ ಪತಿ – ಸ್ಥಳದಲ್ಲೇ ಪತ್ನಿ ಸಾವು

ಸೆಕ್ಷನ್ 144 ಉಲ್ಲಂಘನೆ: ನಗರಪಾಲಿಕೆ ಉಪಚುನಾವಣೆ ಹಿನ್ನೆಲೆಯಲ್ಲಿ 144 ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಮತ ಎಣಿಕೆ ಕೇಂದ್ರದ ಮುಂಭಾಗವೇ ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದರು. ಕಾರ್ಯಕರ್ತರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹೈರಾಣಾದರು.

Share This Article
Leave a Comment

Leave a Reply

Your email address will not be published. Required fields are marked *