ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ – ಮೂವರು ಆಸ್ಪತ್ರೆಗೆ ದಾಖಲು

Public TV
1 Min Read

ಚಿತ್ರದುರ್ಗ: ಫ್ಲೆಕ್ಸ್ ತೆರವು ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು ಮೂವರು ಆಸ್ಪತ್ರೆಗೆ ದಾಖಲಾಗಿರೋ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ನಡೆದಿದೆ.

ಮಂಗಳವಾರ ಹಿರಿಯೂರು ಪಟ್ಟಣದಲ್ಲಿ ನಡೆಯಲಿರುವ ರಾಜ್ಯಮಟ್ಟದ ಬಾಬುಜಗಜೀವನ್ ರಾಮ್ ಜಯಂತಿ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗಮಿಸಲಿದ್ದಾರೆ. ಹೀಗಾಗಿ ಕಾಂಗ್ರೆಸ್ ಮಾಜಿ ಸಚಿವ ಡಿ.ಸುಧಾಕರ್ ಹಾಗೂ ಎಂಎಲ್‍ಸಿ ಚುನಾವಣೆಯ ಪರಾಜಿತ ಅಭ್ಯರ್ಥಿ ಸೋಮಶೇಖರ್ ನಡುವೇ ಶಕ್ತಿ ಪ್ರದರ್ಶನದ ಪೈಪೋಟಿ ಶುರುವಾಗಿದೆ. ರಾಜ್ಯ ನಾಯಕರನ್ನು ಓಲೈಸಲು ಫ್ಲೆಕ್ಸ್ ಹಾಕಿಸಲು ನಾ ಮುಂದು, ನೀ ಮುಂದು ಎಂದು ಕಾರ್ಯಕರ್ತರು ಮುಗಿಬಿದ್ದಿದ್ದಾರೆ. ಇದನ್ನೂ ಓದಿ: ಮೈಸೂರಿನಿಂದ ಬಂದ ರಾಯಲ್ ಎನ್‍ಫೀಲ್ಡ್ ಆಂಧ್ರದಲ್ಲಿ ಸ್ಫೋಟ

ಈ ವೇಳೆ ಸೋಮಶೇಖರ್ ಹಾಕಿಸಿದ್ದ ಫ್ಲೆಕ್ಸನ್ನು ಸುಧಾಕರ್ ಬೆಂಬಲಿಗರು ತೆರವುಗೊಳಿಸಿದ್ದಾರೆ. ಈ ಕಾರಣ ಆಕ್ರೋಶಗೊಂಡಿರೋ ಸೋಮಶೇಖರ್ ಬೆಂಬಲಿಗರು ಕಾಂಗ್ರೆಸ್‍ನಲ್ಲೂ ಅಲ್ಪಸಂಖ್ಯಾತರ ಕಡೆಗಣನೆ ಶುರುವಾಗಿದೆ ಎಂದು ಆರೋಪಿಸಿದ್ದಾರೆ.

ಕೋಪಗೊಂಡ ಸುಧಾಕರ್ ಬೆಂಬಲಿಗರಾದ ಮಾಜಿ ಜಿಪಂ ಸದಸ್ಯರಾದ ನಾಗೇಂದ್ರ ನಾಯಕ್, ಅಶೋಕ್ ಹಾಗೂ ಸುರೇಶ್ ಬಾಬು ಕಾಂಗ್ರೆಸ್ ನಾಯಕರ ಮುಂದೆಯೇ ವಾಗ್ವಾದ ನಡೆಸಿದ್ದಾರೆ. ಕೊನೆಗೆ ಮಾತಿನ ಚಕಮಕಿ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಈ ವೇಳೆ ಸೋಮಶೇಖರ್ ಬೆಂಬಲಿಗರಾದ ಅಸ್ಲಂ ಭಾಷಾ, ಮಹಮ್ಮದ್ ಗಫರ್, ಸೈಯದ್ ಅಕ್ತಾರ್ ಭಾಷಾ ಗಾಯಗೊಂಡು ಹಿರಿಯೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಬುದ್ದಿ ಮಾತು ಹೇಳಿದ ತಮ್ಮನನ್ನೆ ಕೊಂದ ಅಣ್ಣ

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಸಂಸದ ಬಿ.ಎನ್ ಚಂದ್ರಪ್ಪ ಹಾಗೂ ಮಾಜಿ ಸಚಿವ ಡಿ.ಸುಧಾಕರ್ ಅವರ ಸಮ್ಮುಖದಲ್ಲಿಯೇ ಇಬ್ಬರು ನಾಯಕರ ಬೆಂಬಲಿಗರ ನಡುವೆ ಮಾತಿನ ಚಕಮಕಿ ಘರ್ಷಣೆ ನಡೆದಿದೆ. ಬೆಂಬಲಿಗರ ಘರ್ಷಣೆ ವೇಳೆ ನಾಯಕರು ಮೂಕ ಪ್ರೇಕ್ಷಕರಾಗಿದ್ದರು. ಈ ಸಂಬಂಧ ಹಿರಿಯೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *